ಪಾವಗಡ: ತಾಲ್ಲೂಕಿನ ಸೋಲಾರ್ ಪಾರ್ಕ್ ವಿಶ್ವದ ಅತ್ಯಂತ ಬೃಹತ್ ಸೋಲಾರ್ ಪಾರ್ಕ್ ಎಂಬ ಗರಿಮೆಯನ್ನು ಮತ್ತೊಮ್ಮೆ ಪಡೆಯಲಿದೆ.
ಆರಂಭದಲ್ಲಿ ವಿಶ್ವದಲ್ಲಿಯೇ ಪ್ರಥಮ ಸ‍್ಥಾನದಲ್ಲಿದ್ದ ತಾಲ್ಲೂಕಿನ ಸೋಲಾರ್ ಪಾರ್ಕ್ ಸದ್ಯ ವಿಶ್ವದ ಪ್ರಮುಖ 5 ಸೋಲಾರ್ ಪಾರ್ಕ್‌ಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಸದ್ಯ ರಾಜಸ್ಥಾನದ ಭಡ್ಲ ಮೊದಲ ಸ್ಥಾನದಲ್ಲಿದೆ. ಇಲ್ಲಿ 2,245 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ತಾಲ್ಲೂಕಿನ ರ‍್ಯಾಪ್ಟೆ ಪಂಚಾಯಿತಿ ವಿವಿಧ ಗ್ರಾಮಗಳ ರೈತರಿಂದ ಮತ್ತೆ 2,500 ಮೆಗಾ ವ್ಯಾಟ್ ಸೋಲಾರ್ ಪಾರ್ಕ್ ವಿಸ್ತರಣೆಗಾಗಿ ಬಾಡಿಗೆ ಆಧಾರದಲ್ಲಿ ಜಮೀನು ನೀಡುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಪಂಚಾಯಿತಿಯ ಬುಗಡೂರು, ಹುಸೇನ್ ಪುರ, ರ‍್ಯಾಪ್ಟೆ, ಮಜರೆ ಗ್ರಾಮಗಳಾದ ರೆಡ್ಡಿವಾರಹಳ್ಳಿ, ನಾಗೇನಹಳ್ಳಿ, ನಾಗೇನಹಳ್ಳಿ ತಾಂಡ, ಅಪ್ಪಾಜಿಹಳ್ಳಿ ರೈತರು ಈಗಾಗಲೇ ಜಮೀನು ನೀಡುತ್ತಿದ್ದಾರೆ.
ರೈತರು ಪಹಣಿ, ಇತ್ಯಾದಿ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ರೈತರು ನೀಡುವ ಜಮೀನಿನ ವಿಸ್ತೀರ್ಣವನ್ನು ಆಧರಿಸಿ ಪಾರ್ಕ್ ವಿಸ್ತರಣೆ ಮಾಡಲಾಗುವುದು ಎಂದು ಸೋಲಾರ್ ಪಾರ್ಕ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈಗಿರುವ 2,050 ಮೆಗಾ ವ್ಯಾಟ್ ಜೊತೆಗೆ, 13 ಸಾವಿರ ಎಕರೆ ಜಮೀನಿನಲ್ಲಿ ಉಳಿದಿರುವ ಎರಡು ಸಾವಿರ ಎಕರೆಯಲ್ಲಿ ಶೀಘ್ರ 300 ಮೆಗಾ ವ್ಯಾಟ್ ಘಟಕ ನಿರ್ಮಿಸಲಾಗುವುದು. ಈ ಘಟಕ ನಿರ್ಮಾಣವಾದರೆ ತಾಲ್ಲೂಕಿನ ಪಾರ್ಕ್ ಮತ್ತೆ ವಿಶ್ವದ ಮೊದಲ ಸ್ಥಾನಕ್ಕೇರಲಿದೆ. ಈಗಿರುವ ಸೋಲಾರ್ ಪಾರ್ಕ್ ಜೊತೆಗೆ 2,500 ಮೆಗಾ ವ್ಯಾಟ್ ಮತ್ತೆ ವಿಸ್ತರಣೆಯಾದರೆ ಒಟ್ಟಾರೆ 4,850 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.
ತಾಲ್ಲೂಕಿನ ನಾಗಲಮಡಿಕೆ ಹೋಬಳಿಯಲ್ಲಿ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್ ಆರಂಭದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಇಲ್ಲಿ ಸುಮಾರು 2,300 ರೈತರಿಂದ ಪ್ರತಿ ಎಕರೆಗೆ ₹21,000 ಆರಂಭಿಕ ವಾರ್ಷಿಕ ಬಾಡಿಗೆ ದರದಲ್ಲಿ ಗುತ್ತಿಗೆಗೆ ಪಡೆಯಲಾಗಿದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ 5ರಷ್ಟು ಬಾಡಿಗೆ ಹೆಚ್ಚಿಸಲಾಗುತ್ತದೆ. ತಾಲ್ಲೂಕು ಬರಪೀಡಿತ ಪ್ರದೇಶವಾಗಿರುವುದರಿಂದ ಈ ವ್ಯವಸ್ಥೆ ಕಂಪನಿ ಹಾಗೂ ರೈತರಿಗೆ ಲಾಭ ತಂದಿದೆ. ಕಳೆದ 60 ವರ್ಷಗಳಲ್ಲಿ 54 ವರ್ಷ ಬರಗಾಲ ಅನುಭವಿಸಿದ ಪ್ರದೇಶದ ಜನತೆಗೆ ಸೋಲಾರ್ ಪಾರ್ಕ್‌ನಿಂದ ತಕ್ಕಮಟ್ಟಿನ ಅನುಕೂಲವಾಗುತ್ತಿದೆ. ಪಾರ್ಕ್ ವಿಸ್ತರಣೆಯಾದಲ್ಲಿ ಸಾವಿರಾರು ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂಬ ಆಶಯಯನ್ನು ಈ ಭಾಗದ ರೈತರು ವ್ಯಕ್ತಪಡಿಸುತ್ತಿದ್ದಾರೆ.
2017ರಿಂದ ಕಾಮಗಾರಿ ಆರಂಭವಾಗಿ 2019-2020ರಲ್ಲಿ ಹಂತ ಹಂತವಾಗಿ ವಿದ್ಯುತ್ ಉತ್ಪಾದನಾ ಕಾರ್ಯ ಆರಂಭವಾಗಿತ್ತು.
ವಿವಿಧ ಕಂಪನಿಗಳು ಉತ್ಪಾದಿಸುತ್ತಿರುವ ವಿದ್ಯುತ್: ತಾಲ್ಲೂಕಿನ ಸೋಲಾರ್ ಪಾರ್ಕ್ ಅನ್ನು 50 ಮೆಗಾ ವ್ಯಾಟ್‌ನಂತೆ ಒಟ್ಟು 40 ಭಾಗಗಳಾಗಿ ವಿಂಗಡಿಸಿ ಕಂಪನಿಗಳಿಗೆ ನೀಡಲಾಗಿದೆ. ಆಯಾ ಕಂಪನಿಗಳು ಹೂಡಿಕೆ ಮಾಡಿ ವಿದ್ಯುತ್ ಉತ್ಪಾದಿಸುತ್ತಿವೆ.
ಟಾಟಾ ಪವರ್ -400 ಮೆಗಾ ವ್ಯಾಟ್, ರಿನೀವ್ ಪವರ್-350, ಫೋರ್ಟಮ್ ಸೋಲಾರ್ -350, ಅವದ ಎನರ್ಜಿ- 300, ಸಾಫ್ ಬ್ಯಾಂಕ್ ಎನರ್ಜಿ -200, ಅದಾನಿ ಗ್ರೀನ್ ಎನರ್ಜಿ -150, ಅಕಮೆ-100, ಅಜುರ್-100, ರತನ್-50, ಕ್ರೆಡಲ್-50 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ವಿಸ್ತರಣೆ ಮುಂದುವರೆದಲ್ಲಿ ದೇಶದ ವಿವಿಧ ಕಂಪನಿಗಳು ತಾಲ್ಲೂಕಿನಲ್ಲಿ ಹೂಡಿಕೆ ಮಾಡಲಿವೆ.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕ್ರೆಡಲ್) ಮತ್ತು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ಕರ್ನಾಟಕದಲ್ಲಿ ಸೌರ ವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಲು ಮಾರ್ಚ್ 2015ರಲ್ಲಿ ಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಪಿಡಿಸಿಎಲ್) ಎಂಬ ಜಂಟಿ ಉದ್ಯಮವನ್ನು ಸ್ಥಾಪಿಸಿತು. 2015ರಲ್ಲಿ ತಾಲೂಕಿನಲ್ಲಿ ಸೌರ ವಿದ್ಯುತ್ ಪಾರ್ಕ್ ನಿರ್ಮಿಸುವ ಕೆಎಸ್‌ಪಿಡಿಸಿಎಲ್‌ನ ಪ್ರಸ್ತಾವನೆಯನ್ನು ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯ (ಎಸ್‌ಎಲ್‌ಎಚ್‌ಸಿಸಿ) ಅಧ್ಯಕ್ಷರು ಅನುಮೋದಿಸಿದರು.
ಈ ಯೋಜನೆಯು ಬಳಸಮುದ್ರ, ತಿರುಮಣಿ, ಕ್ಯಾತಗಾನಚಾರ್ಲು, ವಳ್ಳೂರು, ರಾಯಚೆರ್ಲು ಎಂಬ 5 ಗ್ರಾಮಗಳನ್ನು ಒಳಗೊಂಡಿದೆ. ಇದೇ ಸಂಸ್ಥೆ ರ‍್ಯಾಪ್ಟೆ ಪಂಚಾಯಿತಿಯಲ್ಲಿ ಪಾರ್ಕ್ ವಿಸ್ತರಣೆಗೆ ಅನುಮತಿ ನೀಡಿದೆ.
ಹಲವು ಕಾರಣಗಳಿಗಾಗಿ ತಾಲ್ಲೂಕನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಹೆಚ್ಚಿನ ಸೌರ ವಿಕಿರಣ, ಭೂಮಿ ಲಭ್ಯತೆ ಜೊತೆಗೆ ಇದು ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ತಾಲ್ಲೂಕು ಅರೆ-ಶುಷ್ಕ ಪ್ರದೇಶದಲ್ಲಿ, ಬೆಟ್ಟಗಳಿಂದ ಸುತ್ತುವರಿದ ಎತ್ತರ ಪ್ರದೇಶದಲ್ಲಿದೆ. ಹೀಗಾಗಿ ಸೋಲಾರ್ ಪಾರ್ಕ್ ನಿರ್ಮಿಸಲು ಸೂಕ್ತ ಪ್ರದೇಶವಾಗಿದೆ. ಇದೇ ಕಾರಣಕ್ಕೆ ನಾಗಲಮಡಿಕೆ ಹೋಬಳಿಯಲ್ಲಿ ಪಾರ್ಕ್ ವಿಸ್ತರಣೆ ಮಾಡಲಾಗುತ್ತಿದೆ.
ರೈತರ ಕೊಡುಗೆ ಗಣನೀಯ ವಿಶ್ವ ಮಟ್ಟದಲ್ಲಿ ಹಿರಿಮೆ ಪಡೆಯಲು ತಾಲ್ಲೂಕಿನ ರೈತರ ಕೊಡುಗೆ ಗಣನೀಯ. ಈ ನಿಟ್ಟಿನಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಕ್ರೆಡಲ್ ಕೆಎಸ್‌ಪಿಡಿಸಿಎಲ್ ಸಂಸ್ಥೆ ಒತ್ತು ನೀಡಬೇಕು. ಶಾಲೆ ಕಾಲೇಜು ರಸ್ತೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು.ಸದಾಶಿವರೆಡ್ಡಿ ಅಧ್ಯಕ್ಷ ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಪಾವಗಡ
ಸ್ಥಳೀಯರಿಗೆ ಉದ್ಯೋಗ ನೀಡಿ ಸೋಲಾರ್ ಘಟಕ ಸ್ಥಾಪಿಸಲು ಬಂದಿರುವ ದೇಶದ ಪ್ರಮುಖ ಕಂಪನಿಗಳು ಜಮೀನು ನೀಡಿದ ರೈತರ ಮಕ್ಕಳಿಗೆ ತಮ್ಮ ಕಂಪನಿಯಲ್ಲಿ ಉದ್ಯೋಗ ನೀಡಬೇಕು. ಸೋಲಾರ್ ಪಾರ್ಕ್‌ನಲ್ಲಿ ಸಾಕಷ್ಟು ಉದ್ಯೋಗ ಅವಕಾಶ ಇಲ್ಲದ ಕಾರಣ ಆ ಕಂಪನಿ ಕಾರ್ಯ ನಿರ್ವಹಿಸುತ್ತಿರುವ ಇತರೆ ಸ್ಥಳದಲ್ಲಿಯಾದರೂ ಆದ್ಯತೆ ಮೇರೆಗೆ ಕೆಲಸ ನೀಡಬೇಕು.ಪರಮೇಶ‍್ವರನಾಯ್ಕ ಸಂಚಾಲಕ ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ
ವೈದ್ಯಕೀಯ ಎಂಜಿನಿಯರ್ ಕಾಲೇಜು ಸ್ಥಾಪಿಸಿ ಸಾವಿರಾರು ಕೋಟಿ ಖರ್ಚು ಮಾಡಿ ಸೋಲಾರ್ ಪಾರ್ಕ್ ನಿರ್ಮಿಸಲಾಗಿದೆ. ರೈತರ ಮಕ್ಕಳಿಗಾಗಿ ವೈದ್ಯಕೀಯ ಎಂಜಿನಿಯರಿಂಗ್ ಕಾಲೇಜನ್ನು ತಾಲ್ಲೂಕಿನಲ್ಲಿ ಆರಂಭಿಸಬೇಕು. ಮಹಿಳೆಯರಿಗಾಗಿ ರ‍್ಯಾಪ್ಟೆ ವಳ್ಳೂರು ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಆರಂಭಿಸಬೇಕು.ಆರ್.ಪಿ. ಸಾಂಬಸದಾಶಿವರೆಡ್ಡಿ ಪ್ರಧಾನ ಕಾರ್ಯದರ್ಶಿ ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ
ಕೈಗಾರಿಕೆ ಆರಂಭಿಸಿ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತಿರುವುದು ಸಂತಸದಾಯಕ. ಇಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಲ್ಲಿ ತಾಲ್ಲೂಕಿನ ಜನರಿಗೆ ಅನುಕೂಲವಾಗಲಿದೆ. ಇದರಿಂದ ಸಾವಿರಾರು ಮಂದಿ ವಿವಿಧೆಡೆಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. ಕೂಲಿ ಕಾರ್ಮಿಕರು ಕಾರ್ಮಿಕರ ಜೀವನಕ್ಕೆ ಅಗತ್ಯ ಉದ್ಯೋಗ ಸೃಷ್ಟಿಸಬೇಕು.ಪುರುಷೋತ್ತಮ ರೆಡ್ಡಿ ಪಾವಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.