
ತುಮಕೂರು: ಪ್ರತಿ ಮನೆಯಲ್ಲಿ ದೇವರ ಕೋಣೆಯಂತೆ ಗ್ರಂಥಾಲಯವೂ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಕೆ.ಮಾನಸ ಹೇಳಿದರು.
ನಗರದಲ್ಲಿ ಶನಿವಾರ ನಡೆದ ‘ಮನೆಗೊಂದು ಗ್ರಂಥಾಲಯ’ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಗ್ರಂಥಾಲಯ ಕೇವಲ ಪುಸ್ತಕದ ಸರಕಲ್ಲ, ಅದು ನಮ್ಮ ಆತ್ಮದಂತೆ. ಪ್ರತಿ ವರ್ಷ 7 ಸಾವಿರ ಹೊಸ ಪುಸ್ತಕಗಳು ಮುದ್ರಣವಾಗುತ್ತಿವೆ. ಪುಸ್ತಕ ಓದುವ ಸಂಸ್ಕೃತಿ ಕ್ಷೀಣಿಸುತ್ತಿದೆ. ಪುಸ್ತಕ ಸಂಸ್ಕೃತಿ ಉಳಿಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರವು 2026ರಲ್ಲಿ 1 ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಉದ್ದೇಶಿಸಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ 10 ಜನ ಒಳಗೊಂಡ ಜಿಲ್ಲಾ ಜಾಗೃತಿ ಸಮಿತಿ ರಚಿಸಲಾಯಿತು. ಡಿ.ಎನ್.ಯೋಗೀಶ್ವರಪ್ಪ, ಎಂ.ಎಚ್.ನಾಗರಾಜು, ಎಂ.ವಿ.ಶಂಕರಾನಂದ, ಸಣ್ಣಹೊನ್ನಯ್ಯ ಕಂಟಲಗೆರೆ, ಟಿ.ಆರ್.ಲೀಲಾವತಿ, ರಾಣಿ ಚಂದ್ರಶೇಖರ್, ಚಿಕ್ಕಬೆಳ್ಳಾವಿ ಶಿವಕುಮಾರ್, ರೇಣುಕಾಪ್ರಸಾದ್, ಎಂ.ಗೋವಿಂದರಾಯ, ಕಮಲಾ ರಾಜೇಶ್ ಅವರನ್ನು ಸಮಿತಿಗೆ ನೇಮಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.