
ತುಮಕೂರು: ನಗರದ ವೀರಸಾಗರ ಬಳಿಯ ರಾಜಕಾಲುವೆಗೆ ಕಾರ್ಖಾನೆಯ ಕೆಮಿಕಲ್ ತ್ಯಾಜ್ಯ ಸುರಿಯುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ಮಂಗಳವಾರ ಬೆಳಗಿನ ಜಾವ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ತಿಲಕ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿ ತ್ಯಾಜ್ಯ ತಂದು ಕಾಲುವೆಗೆ ಸುರಿಯುತ್ತಿದ್ದರು. ಈ ಹಿಂದೆ ಹಲವು ಬಾರಿ ಇದೇ ರೀತಿಯಾಗಿತ್ತು. ತ್ಯಾಜ್ಯ ಸುರಿಯುತ್ತಿದ್ದ ರಾಜಕಾಲುವೆಯಿಂದ ಭೀಮಸಂದ್ರ, ಮಲ್ಲಸಂದ್ರ ಕೆರೆಗೆ ನೀರು ಹರಿಯುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮಲ್ಲಸಂದ್ರ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿದ್ದವು. ಈ ತ್ಯಾಜ್ಯವೇ ಮೀನುಗಳ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.
ಪಾಲಿಕೆ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿದ್ದರು. ಟ್ಯಾಂಕರ್‌ಗಳು ಬಂದದ್ದು ನೋಡಿ ಸ್ಥಳಕ್ಕೆ ತೆರಳಿದ್ದರು. ಅಧಿಕಾರಿ, ಸಿಬ್ಬಂದಿಯನ್ನು ಕಂಡ ತಕ್ಷಣ ಚಾಲಕರು ಟ್ಯಾಂಕರ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯಿಂದ ಟ್ಯಾಂಕರ್ ಮೂಲಕ ತ್ಯಾಜ್ಯ ಸಾಗಿಸಲಾಗಿತ್ತು ಎಂಬುವುದು ಗೊತ್ತಾಗಿದೆ. ಕಾರ್ಖಾನೆ ವಿರುದ್ಧ ಕ್ರಮ ವಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
‘ಟ್ಯಾಂಕರ್‌ಗಳಲ್ಲಿದ್ದ ಕೆಮಿಕಲ್ ತ್ಯಾಜ್ಯದ ಮಾದರಿ ಸಂಗ್ರಹಿಸಿ, ಹೆಚ್ಚಿನ ಪರೀಕ್ಷೆಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಗರ ಪ್ರವೇಶಿಸುವ ಭಾರಿ ವಾಹನಗಳ ಮೇಲೆ ನಿಗಾ ವಹಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ ತಿಳಿಸಿದ್ದಾರೆ.
ಹೊರ ಜಿಲ್ಲೆಗಳ ಪ್ಲಾಸ್ಟಿಕ್ ತ್ಯಾಜ್ಯ ನಗರಕ್ಕೆ ಸಾಗಿಸುತ್ತಿರುವ ಮಾಹಿತಿ ಇದೆ. ಎಲ್ಲವನ್ನು ತಡೆಯಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು. ಸಾರ್ವಜನಿಕರ ದೂರಿನ ಮೇರೆಗೆ ಅಧಿಕಾರಿಗಳು ತೆರಳಿ ಟ್ಯಾಂಕರ್ ಹಿಡಿದಿದ್ದಾರೆ. ಅಗತ್ಯ ಕಡೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಪೊಲೀಸ್ ಗಸ್ತು ಹೆಚ್ಚಿಸಲು ಮನವಿ ಮಾಡಲಾಗುವುದು ಎಂದರು.
ತ್ಯಾಜ್ಯ ಸಾಗಣೆ ಮಾಡಿದ ಕಾರ್ಖಾನೆಯನ್ನು ಪತ್ತೆ ಹಚ್ಚಿ ಶಾಶ್ವತವಾಗಿ ಪರವಾನಗಿ ರದ್ದುಗೊಳಿಸಲಾಗುವುದು. ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದುಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.