ತುಮಕೂರು: ನವರಾತ್ರಿ ಆಚರಣೆಯು ಅಂತಿಮ ಘಟ್ಟ ತಲುಪಿದ್ದು, ಜಂಬೂ ಸವಾರಿಗೆ ನಗರ ಸಜ್ಜಾಗಿ ನಿಂತಿದೆ. ದಸರಾದ ಕೊನೆಯ ದಿನವಾದ ಗುರುವಾರ ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ಮೇಳೈಸಲಿದೆ.
ಕಳೆದ ವರ್ಷದಿಂದ ಜಿಲ್ಲಾ ಆಡಳಿತ ದಸರಾ ಆಚರಣೆ ಮಾಡುತ್ತಾ ಬಂದಿದ್ದು, ಈ ವರ್ಷದ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಿದೆ. ಹಿಂದಿನ ವರ್ಷಗಳಲ್ಲಿ ಬನ್ನಿ ಕಡಿದು, ದೇವರ ಮೆರವಣಿಗೆ ಮಾಡಲಾಗುತಿತ್ತು. ಆದರೆ ಈ ಬಾರಿ ಜಂಬೂ ಸವಾರಿ ಮೆರವಣಿಗೆಯನ್ನು ಅದ್ದೂರಿಯಾಗಿ ಏರ್ಪಡಿಸಲಾಗಿದೆ.
ಮೈಸೂರು ದಸರಾ ಮಾದರಿಯನ್ನು ಜಿಲ್ಲಾ ಆಡಳಿತ ಸಹ ಅನುಕರಣೆ ಮಾಡುತ್ತಿದ್ದು, ಮೆರವಣಿಗೆಗೆ ಆನೆಗಳನ್ನು ಕರೆ ತರಲಾಗಿದೆ. ಮೈಸೂರಿನ ಜಂಬೂ ಸವಾರಿ ಮಾದರಿಯಲ್ಲೇ ನಗರದಲ್ಲೂ ಮೆರವಣಿಗೆ ಆಯೋಜನೆ ಮಾಡಲಾಗಿದೆ. ಆನೆಗಳ ಜತೆಗೆ ನಗರ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಭಾಗವಹಿಸಲಿವೆ.
ವೈಭವಯುತ ಅಂಬಾರಿ ಮೆರವಣಿಗೆಯಲ್ಲಿ ಕಳಸ ಹೊತ್ತ 150 ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಲಿದ್ದು, ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ.
ಜೂನಿಯರ್ ಕಾಲೇಜು ಮೈದಾನದಲ್ಲಿ ವಿಜಯದಶಮಿ ಧಾರ್ಮಿಕ ಪೂಜೆ, ಶಮಿ ಪೂಜೆ ನೆರವೇರಲಿದೆ. ಬಿಜಿಎಸ್ ವೃತ್ತದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಚಿವ ಜಿ.ಪರಮೇಶ್ವರ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಬಿಜಿಎಸ್ ವೃತ್ತದಿಂದ (ಟೌನ್‌ಹಾಲ್) ಆರಂಭವಾಗಿ ಅಶೋಕ ರಸ್ತೆ, ಜಿಲ್ಲಾಧಿಕಾರಿ ಕಚೇರಿ ವೃತ್ತ, ಅಮಾನಿಕೆರೆ ರಸ್ತೆ, ಕೆಇಬಿ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತದ ಮೂಲಕ ಕಾಲೇಜು ಮೈದಾನಕ್ಕೆ ಬಂದು ತಲುಪಲಿದೆ.
ಗುರುವಾರ ಸಂಜೆ ಕಾಲೇಜು ಆವರಣದಲ್ಲಿ ದಶಾವತಾರ ರೂಪಕ, ಜಾನಪದ ನೃತ್ಯ ಗಮನ ಸೆಳೆಯಲಿದೆ. ಅರ್ಜನ್ ಜನ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಮೂಡಿಬರಲಿದೆ. ರಾತ್ರಿ 10.30 ಗಂಟೆಗೆ ಹಸಿರು ಸಿಡಿಮದ್ದುಗಳಿಂದ ಬಾಣ ಬಿರುಸು ಪ್ರದರ್ಶನದ ಮೂಲಕ ದಸರಾ ಆಚರಣೆಗೆ ತೆರೆ ಬೀಳಲಿದೆ.
ದಸರಾ ಉತ್ಸವ ಹಾಗೂ ಜಂಬೂ ಸವಾರಿ ಮೆರವಣಿಗೆ ಸಲುವಾಗಿ ನಗರದಲ್ಲಿ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅ. 2ರಂದು ನಗರದ ಬಸ್ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಸಿಟಿ ಬಸ್‌ಗಳು ಬರುವುದಿಲ್ಲ. ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ಬಟವಾಡಿ ಬಳಿ ಕುಣಿಗಲ್ ಕಡೆಯ ಪ್ರಯಾಣಿಕರಿಗೆ ಕುಣಿಗಲ್ ವೃತ್ತದಲ್ಲಿ ಗುಬ್ಬಿ ಕಡೆಗೆ ತೆರಳುವವರಿಗೆ ಗುಬ್ಬಿ ರಿಂಗ್ ರಸ್ತೆ ಶಿರಾ ಮಧುಗಿರಿ ಕಡೆಯವರಿಗೆ ಶಿರಾಗೇಟ್ ಸರ್ಕಲ್‍ನಲ್ಲಿ ತಾತ್ಕಾಲಿಕ ಬಸ್ ನಿಲುಗಡೆಯ ವ್ಯವಸ್ಥೆ ಮಾಡಲಾಗಿದೆ. ಜಂಬೂ ಸವಾರಿ ಸಾಗುವ ಬಿಜಿಎಸ್ ವೃತ್ತ ಅಶೋಕ ರಸ್ತೆ ಕೋಡಿ ಬಸವಣ್ಣ ಸರ್ಕಲ್ ಕೋತಿತೋಪು ರಸ್ತೆ ಎಸ್.ಎಸ್ ಸರ್ಕಲ್ ಸಿದ್ಧಗಂಗಾ ಆಸ್ಪತ್ರೆ ಮುಂಭಾಗದ ರಸ್ತೆ ಭದ್ರಮ್ಮ ವೃತ್ತದ ರಸ್ತೆಗಳಲ್ಲಿ ವಾಹನ ಸಂಚಾರ ನಿಲುಗಡೆ ನಿರ್ಬಂಧಿಸಲಾಗಿದೆ.
ದೇವಿಗೆ ಚಾಮುಂಡೇಶ್ವರಿ ಅಲಂಕಾರ: ಸ್ಥಳ– ಜೂನಿಯರ್ ಕಾಲೇಜು ಮೈದಾನ. ಬೆಳಿಗ್ಗೆ 9. ಆಟೊ ದಸರಾ. ಮಧ್ಯಾಹ್ನ 3. ಸಾಯಿ ರಾಮನ್ ನೃತ್ಯ ಕೇಂದ್ರದಿಂದ ನೃತ್ಯ ರೂಪಕ. ಸಂಜೆ 4. ಅನನ್ಯ ಭಟ್ ಅನುರಾಧಾ ವಿಕ್ರಾಂತ್ ತಂಡದಿಂದ ಸಾಂಸ್ಕೃತಿಕ ವೈಭವ. ಸಂಜೆ 6.15. ಕೊಕ್ಕೊ ವಾಲಿಬಾಲ್ ಸ್ಪರ್ಧೆ. ಸ್ಥಳ– ಜಿಲ್ಲಾ ಕ್ರೀಡಾಂಗಣ. ಬೆಳಿಗ್ಗೆ 9.30 ತುಮಕೂರು ದಸರಾ ಸಮಿತಿ: ದಸರಾ ಪ್ರಯುಕ್ತ ಗೀತ ವೈಭವ. ಸ್ಥಳ– ಶ್ರೀರಾಮಮಂದಿರ ಕೆ.ಆರ್.ಬಡಾವಣೆ. ಸಂಜೆ 6
ದಸರಾದಲ್ಲಿ ನಾಳೆ: ವಿಜಯದಶಮಿ ಧಾರ್ಮಿಕ ಪೂಜಾ ಆಚರಣೆ. ಸ್ಥಳ– ಜೂನಿಯರ್ ಕಾಲೇಜು ಮೈದಾನ. ಬೆಳಿಗ್ಗೆ 9. ಸಾಂಸ್ಕೃತಿಕ ವೈಭವ– ಅರ್ಜುನ್ ಜನ್ಯಾ ಮತ್ತು ತಂಡ. ಸಂಜೆ 6.30. ತುಮಕೂರು ದಸರಾ ಸಮಿತಿ: ದಸರಾ ಪ್ರಯುಕ್ತ ರಂಗೋಲಿ ಸ್ಪರ್ಧೆ. ಸ್ಥಳ– ಶ್ರೀರಾಮಮಂದಿರ ಕೆ.ಆರ್.ಬಡಾವಣೆ. ಬೆಳಿಗ್ಗೆ 11. ಶಮೀ ಪೂಜೆ ಸಂಜೆ 4.30. ಸರಿಗಮಪ ಶ್ರಾವ್ಯ ಮತ್ತು ತಂಡದಿಂದ ಗೀತೆ ಮತ್ತು ನೃತ್ಯ. ಸಂಜೆ 6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.