ADVERTISEMENT

ತುಮಕೂರು | ರಾಜಣ್ಣ ಚಿತ್ರ ಕಾಣೆ: ಡಿ.ಸಿ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:57 IST
Last Updated 20 ಸೆಪ್ಟೆಂಬರ್ 2025, 5:57 IST
<div class="paragraphs"><p>ಕೆ.ಎನ್ ರಾಜಣ್ಣ </p></div>

ಕೆ.ಎನ್ ರಾಜಣ್ಣ

   

– ಪ್ರಜಾವಾಣಿ ಚಿತ್ರ

ತುಮಕೂರು: ಜಿಲ್ಲಾ ಆಡಳಿತದಿಂದ ದಸರಾ ಪ್ರಯುಕ್ತ ನಗರದ ವಿವಿಧೆಡೆ ಅಳವಡಿಸಿರುವ ಫ್ಲೆಕ್ಸ್‌ಗಳಲ್ಲಿ ಶಾಸಕ ಕೆ.ಎನ್‌.ರಾಜಣ್ಣ, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಭಾವಚಿತ್ರ ಹಾಕದಿರುವುದಕ್ಕೆ ವಾಲ್ಮೀಕಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ಮುಖಂಡ ಕುಪ್ಪೂರು ಶ್ರೀಧರ್‌ ಮಾತನಾಡಿ ಶಾಸಕರ ಭಾವಚಿತ್ರ ಕೈಬಿಟ್ಟಿರುವುದನ್ನು ಖಂಡಿಸಿದರು.

ವಾಲ್ಮೀಕಿ ಅಧ್ಯಯನ ಪೀಠಕ್ಕೆ 10 ಎಕರೆ ಜಾಗ ಗುರುತಿಸಿ, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ತೆರೆಯುವಂತೆ 2023ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಈ ನಿಟ್ಟಿನಲ್ಲಿ ಏನು ಬೆಳವಣಿಗೆಯಾಗಿದೆ ಎಂಬ ಮಾಹಿತಿಯೇ ಇಲ್ಲ. ಜಯಂತಿಯ ಒಳಗೆ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

‘ಪ್ರಸ್ತುತ ಜಯಂತಿ ಪ್ರಯುಕ್ತ ಕೇವಲ ಇಬ್ಬರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು 10ಕ್ಕೆ ಹೆಚ್ಚಿಸಬೇಕು. ಕನಿಷ್ಠ ತಾಲ್ಲೂಕಿಗೆ ಒಬ್ಬರಂತೆ 10 ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು. ಜಯಂತಿ ದಿನ ಟೌನ್‌ಹಾಲ್‌ ವೃತ್ತದ ಅಂಬೇಡ್ಕರ್‌ ಪ್ರತಿಮೆಯಿಂದ ಬಾಲ ಭವನದ ವರೆಗೆ ಮೆರವಣಿಗೆ ನಡೆಸಬೇಕು’ ಎಂದು ಮುಖಂಡರು ಒತ್ತಾಯಿಸಿದರು.

‘ಕೈ ತಪ್ಪಿನಿಂದ ಆಗಿದೆ. ಕೂಡಲೇ ಗಮನಿಸಿ, ಎಲ್ಲ ಜನಪ್ರತಿನಿಧಿಗಳ ಚಿತ್ರಗಳು ಬರುವಂತೆ ನೋಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸ್ಪಷ್ಟಪಡಿಸಿದರು. ಸೆ. 26ರಂದು ವಾಲ್ಮೀಕಿ ಸಮುದಾಯದ ಕುಂದು ಕೊರತೆ ಸಭೆ ನಡೆಸಲಾಗುವುದು. ಅಗತ್ಯ ತಯಾರಿ ಮಾಡಿಕೊಳ್ಳುವಂತೆ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.