ತುಮಕೂರು: ನಗರದ ಹೃದಯ ಭಾಗವಾದ ಸೋಮೇಶ್ವರಪುರಂನಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ 3 ಎಕರೆ 20 ಗುಂಟೆ ಜಾಗವನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿರುವುದು ರೈತರಿಂದ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದಲ್ಲಿ ಹೊಸದಾಗಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಆರಂಭವಾಗಿದ್ದು, ಅದಕ್ಕಾಗಿ ಜಮೀನಿನ ಹುಡುಕಾಟ ನಡೆದಿತ್ತು. ವಿಶಾಲವಾದ, ಮುಂದಿನ ಬೆಳವಣಿಗೆ ದೃಷ್ಟಿಯನ್ನು ಇಟ್ಟುಕೊಂಡು ಜಾಗ ನೀಡುವ ಬದಲಿಗೆ ತೋಟಗಾರಿಕೆ ಇಲಾಖೆ ಕಚೇರಿ ಇರುವ ಪುಟ್ಟ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ.
ತೋಟಗಾರಿಕೆ ಇಲಾಖೆ ಕಚೇರಿ, ನರ್ಸರಿ ಹಾಗೂ ಇಲಾಖೆಗೆ ಸಂಬಂಧಿಸಿದ ಚಟುವಟಿಕೆ ನಡೆಯುತ್ತಿರುವ 3 ಎಕರೆ 20 ಗುಂಟೆ ಜಾಗವನ್ನು ಈವರೆಗೂ ಇಲಾಖೆ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿಲ್ಲ. ಪಹಣಿಯಲ್ಲಿ ಇಂದಿಗೂ ಸರ್ಕಾರಿ ಖರಾಬು ಎಂದೇ ಬರುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ಪಹಣಿಯಲ್ಲಿ ‘ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸುವ ಉದ್ದೇಶಕ್ಕಾಗಿ’ ಎಂದು ಸೆ. 1ರಂದು ನಮೂದಿಸಿ, ತಿದ್ದುಪಡಿಸಿ ಮಾಡಲಾಗಿದೆ.
ಹಿನ್ನೆಲೆ: ಈ ಹಿಂದೆ ಸೋಮೇಕಟ್ಟೆ ಪ್ರದೇಶದ ಸರ್ವೆ ನಂ 63ರಲ್ಲಿ 19 ಎಕರೆ 2 ಗುಂಟೆ ಜಮೀನಿನಲ್ಲಿ 18 ಎಕರೆ 27 ಗುಂಟೆ ಸರ್ಕಾರಿ ಖರಾಬು ಎಂದು ಗುರುತಿಸಲಾಗಿತ್ತು. ಅದರಲ್ಲಿ 3 ಎಕರೆ 20 ಗುಂಟೆ ಜಾಗವನ್ನು ತೋಟಗಾರಿಕೆ ಇಲಾಖೆಗೆ ತುಮಕೂರು ಟೌನ್ ಮುನ್ಸಿಪಲ್ ಕೌನ್ಸಿಲ್ (ಟಿಎಂಸಿ) ಮಂಜೂರು ಮಾಡಿದ್ದು, 1953ರ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಜತೆಗೆ ಜಿಲ್ಲಾ ಗೊಲ್ಲ ಜನಾಂಗದ ವಿದ್ಯಾರ್ಥಿ ನಿಲಯಕ್ಕೆ 5 ಎಕರೆ ಮಂಜೂರು ಮಾಡಲಾಗಿದೆ. ಜಾಗ ಮಂಜೂರು ಮಾಡಿ ಏಳು ದಶಕಗಳು ಕಳೆದಿದ್ದರೂ ತೋಟಗಾರಿಕೆ ಇಲಾಖೆ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ತನ್ನ ಜಾಗವನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರೆ ದಶಕಗಳಿಂದ ಚಟುವಟಿಕೆ ನಡೆಸಿಕೊಂಡು ಬಂದಿದ್ದ ತೋಟಗಾರಿಕೆ ಇಲಾಖೆ ತನ್ನ ಅಸ್ತಿತ್ವ ಕಳೆದುಕೊಳ್ಳಬೇಕಾಗಿದೆ. 3.20 ಎಕರೆಯಲ್ಲಿ ಸುಮಾರು 1 ಎಕರೆಯಲ್ಲಿ ಇಲಾಖೆ ಕಚೇರಿ ಕಟ್ಟಡ ಇದೆ. ಉಳಿದ ಜಾಗದಲ್ಲಿ ನರ್ಸರಿ, ಪಾಲಿಹೌಸ್ ನಿರ್ಮಿಸಲಾಗಿದೆ. ಇದೇ ಜಾಗವನ್ನು ಬಳಸಿಕೊಂಡು ರೈತರಿಗೆ ತರಬೇತಿ ನೀಡಲಾಗುತ್ತಿದೆ. ವರ್ಷಪೂರ್ತಿ ಒಂದಲ್ಲೊಂದು ತರಬೇತಿ, ರೈತರ ಪರವಾದ ಕೆಲಸಗಳು ನಡೆಯುತ್ತಿರುತ್ತವೆ. ಇದೇ ಜಾಗದಲ್ಲಿ ಪ್ರತಿ ವರ್ಷವೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಈಗ ಜಾಗ ಕಳೆದುಕೊಂಡರೆ ರೈತರಿಗೆ ಮಾಹಿತಿ ನೀಡುವಂತಹ ಚಟುವಟಿಕೆ ನಡೆಸುವುದು ಕಷ್ಟಕರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.