ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ನಿರ್ದೇಶಕರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಆಗುವಂತೆ ಈವರೆಗೆ ನೋಡಿಕೊಳ್ಳುತ್ತಿದ್ದ ಮಾಜಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರಿಗೆ ಈ ಬಾರಿ ಗುಬ್ಬಿ ಸೇರಿದಂತೆ ಆರು ತಾಲ್ಲೂಕಿನಲ್ಲಿ ಸವಾಲು ಎದುರಾಗಿದೆ.
ತಮ್ಮ ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನ ತಪ್ಪಿಸಿದರು ಎಂಬ ಕಾರಣಕ್ಕೆ ರಾಜಣ್ಣ ವಿರುದ್ಧ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತೊಡೆತಟ್ಟಿದ್ದಾರೆ. ಅವಿರೋಧ ಆಯ್ಕೆ ಆಗದಂತೆ ನೋಡಿಕೊಂಡಿರುವ ಶ್ರೀನಿವಾಸ್, ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ರಾಜಣ್ಣ ಅವರಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ರಾಜಣ್ಣ ಸಹ ಸಹಕಾರ ಕ್ಷೇತ್ರದಲ್ಲಿ ತಮ್ಮ ಹಿಡಿತ ಕೈ ಜಾರದಂತೆ ನೋಡಿಕೊಳ್ಳಲು, ಶ್ರೀನಿವಾಸ್ ಹಾಕಿರುವ ಸವಾಲು ಸ್ವೀಕರಿಸಿದ್ದಾರೆ. ಈ ಬಾರಿ ಗುಬ್ಬಿ ತಾಲ್ಲೂಕು ತೀವ್ರ ಹಣಾಹಣಿಯ ಕ್ಷೇತ್ರವಾಗಿ ಪರಿಣಮಿಸಿದೆ.
ಹಿಂದಿನ ವರ್ಷಗಳಲ್ಲಿ ಅವಿರೋಧವಾಗಿ ಆಯ್ಕೆ ಆಗುವಂತೆ ಕಾರ್ಯತಂತ್ರ ರೂಪಿಸಿ, ರಾಜಣ್ಣ ಯಶಸ್ಸು ಕಾಣುತ್ತಾ ಬಂದಿದ್ದರು. ಯಾವುದೇ ವಿರೋಧ ಇಲ್ಲದೆ ಸತತವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದರು. ದಶಕಗಳ ಕಾಲ ಬ್ಯಾಂಕ್‌ಅನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಆದರೆ ಈಗ ಸಚಿವ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆ ಅವರ ಮಾತಿಗೆ ಮನ್ನಣೆ ಸಿಕ್ಕಂತೆ ಕಾಣುತ್ತಿಲ್ಲ. ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ಕುಣಿಗಲ್ ತಾಲ್ಲೂಕಿನಲ್ಲಿ ಚುನಾವಣೆ ಎದುರಾಗಿದೆ.
ಒಟ್ಟು 14 ನಿರ್ದೇಶಕರ ಸ್ಥಾನಗಳಲ್ಲಿ ಈಗಾಗಲೇ 8 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ಆರು ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದ್ದು, ಅದರಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರು ಆಯ್ಕೆಯಾದರೂ ರಾಜಣ್ಣ ಅಧಿಕಾರ ಹಿಡಿಯಲು ಯಾವುದೇ ಅಡ್ಡಿಯಾಗುವುದಿಲ್ಲ.
ಎಲ್ಲಿ ಚುನಾವಣೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ (ಎ–ವರ್ಗ) ಆರು ತಾಲ್ಲೂಕಿನಲ್ಲಿ ಚುನಾವಣೆ ನಡೆಯಲಿದೆ.
ಗುಬ್ಬಿ ತಾಲ್ಲೂಕಿನಲ್ಲಿ ಎಂ.ಎಸ್.ಚನ್ನಮಲ್ಲಿಕಾರ್ಜುನ ಹಾಗೂ ಹಾಲಿ ನಿರ್ದೇಶಕ ಎಚ್.ಸಿ.ಪ್ರಭಾಕರ್ ನಡುವೆ ಪೈಪೈಟಿ ಏರ್ಪಟ್ಟಿದೆ. ತಮ್ಮ ಬೆಂಬಲಿಗ ಚನ್ನಮಲ್ಲಿಕಾರ್ಜುನ ಪರ ಶಾಸಕ ಎಸ್.ಆರ್.ಶ್ರೀನಿವಾಸ್ ಈಗಾಗಲೇ ಅಖಾಡಕ್ಕೆ ಇಳಿದಿದ್ದಾರೆ. ಶತಾಯಗತಾಯ ಗೆಲ್ಲಿಸಿಕೊಂಡು ರಾಜಣ್ಣ ಅವರಿಗೆ ಮುಖಭಂಗ ಮಾಡಲೇಬೇಕು ಎಂಬ ಹಟಕ್ಕೆ ಬಿದ್ದವರಂತೆ ಕಾಣುತ್ತಿದ್ದಾರೆ. ತಮ್ಮ ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನ ತಪ್ಪಿಸಿದ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ರಾಜಣ್ಣ ಬೆಂಬಲದೊಂದಿಗೆ ಪ್ರಭಾಕರ್ ತುರುಸಿನ ಸ್ಪರ್ಧೆ ಒಡ್ಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸಾಧಿಸಿರುವ ತಮ್ಮ ಹಿಡಿತವನ್ನೆಲ್ಲ ಪ್ರಭಾಕರ್ ಗೆಲುವಿಗೆ ಬಳಸುತ್ತಿದ್ದಾರೆ. ನೇರ ಹಣಾಹಣಿ ಏರ್ಪಟ್ಟಿದ್ದು, ಕಣ ಕುತೂಹಲ ಕೆರಳಿಸಿದೆ.
ಕುಣಿಗಲ್ ತಾಲ್ಲೂಕಿನಲ್ಲಿ ನಾಲ್ಕು ಬಾರಿ ನಿರ್ದೇಶಕರಾಗಿ ಅಧಿಕಾರ ಅನುಭವಿಸಿರುವ ಬಿ.ಶಿವಣ್ಣ ಎದುರು ಮಧುಸುದೂನ ಸ್ಪರ್ಧಿಸಿದ್ದಾರೆ. ಜೆಡಿಎಸ್ ಬೆಂಬಲದೊಂದಿಗೆ ಶಿವಣ್ಣ ಆಯ್ಕೆ ಆಗುತ್ತಾ ಬಂದಿದ್ದು, ಪರೋಕ್ಷವಾಗಿ ಕಾಂಗ್ರೆಸ್, ಬಿಜೆಪಿ ಬೆಂಬಲ ನೀಡುತ್ತಾ ಬಂದಿದ್ದವು. ಶಾಸಕ ಡಾ.ಎಚ್.ಡಿ.ರಂಗನಾಥ್ ಅವರು ಜೆಡಿಎಸ್ ‘ಕೊಂಡಿ ಕಳಚುವ’ ಸಲುವಾಗಿ ಮಧುಸೂದನ ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ. ಪೈಪೋಟಿ ತುಸು ಬಿರುಸು ಪಡೆದುಕೊಳ್ಳುವಂತೆ ಕಾಣುತ್ತಿದೆ.
ತಿಪಟೂರು ತಾಲ್ಲೂಕಿನಲ್ಲಿ ಹಾಲಿ ನಿರ್ದೇಶಕ ಹಾಗೂ ಶಾಸಕ ಕೆ.ಷಡಾಕ್ಷರಿ ವಿರುದ್ಧ ಕೆ.ಎಸ್.ಮಧುಸೂದನ ಪೈಪೋಟಿಗೆ ಇಳಿದಿದ್ದಾರೆ. ಮಧುಸೂದನ ಅವರಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ತುರುಸಿನ ಸ್ಪರ್ಧೆ ಕಾಣುತ್ತಿಲ್ಲ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಾಲಿ ನಿರ್ದೇಶಕರಾಗಿದ್ದ ಎಸ್.ಆರ್.ರಾಜಕುಮಾರ (ಸಿಂಗದಹಳ್ಳಿ ರಾಜಕುಮಾರ) ಎದುರು ವೈ.ಎಸ್.ನಂಜೇಗೌಡ ಸ್ಪರ್ಧಿಸಿದ್ದಾರೆ. ರಾಜಕುಮಾರ ಅವರಿಗೆ ಜೆಡಿಎಸ್, ಕಾಂಗ್ರೆಸ್ ಹಾಗೂ ಕೆ.ಎನ್.ರಾಜಣ್ಣ ಬೆಂಬಲವಿದೆ. ನಂಜೇಗೌಡ ಅವರನ್ನು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೆಂಬಲಿಸಿದ್ದಾರೆ. ತೀವ್ರ ಪೈಪೋಟಿ ಕಂಡು ಬರುತ್ತಿಲ್ಲ.
ಶಿರಾ ತಾಲ್ಲೂಕಿನಲ್ಲಿ ಸತತವಾಗಿ ಐದು ಬಾರಿ ನಿರ್ದೇಶಕರಾಗಿದ್ದ ಕಾಂಗ್ರೆಸ್‌ನ ಜಿ.ಎಸ್.ರವಿ ವಿರುದ್ಧ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಕಣಕ್ಕಿಳಿದಿದ್ದಾರೆ. ರವಿಗೆ ಕಾಂಗ್ರೆಸ್, ಗೌಡಗೆ ಜೆಡಿಎಸ್ ಬೆಂಬಲವಿದೆ. ಇಬ್ಬರು ಅನುಭವಿಗಳ ನಡುವೆ ಕಾದಾಟ ಜೋರಾಗಲಿದೆ. ಗೆಲುವಿಗೆ ಇಬ್ಬರೂ ಪ್ರಯತ್ನ ನಡೆಸಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಹಾಗೂ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎ.ಈರಣ್ಣ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈವರೆಗೆ ತಾಳೆಮರದಹಳ್ಳಿ ನರಸಿಂಹಯ್ಯ ಆಯ್ಕೆ ಆಗುತ್ತಾ ಬಂದಿದ್ದರು. ಹಿಂದೆ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗಲೂ ಕಾಂಗ್ರೆಸ್ ಬೆಂಬಲಿಗರೇ ಆಯ್ಕೆ ಆಗುತ್ತಿದ್ದರು. ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಷ್ಟು ಹಿಡಿತವಿಲ್ಲ. ಈ ಬಾರಿ ಈರಣ್ಣ ಸ್ಪರ್ಧೆಗೆ ಸೀಮಿತವಾದಂತೆ ಕಾಣುತ್ತಿದೆ.
ಅವಿರೋಧ ಆಯ್ಕೆ:
(ಎ–ವರ್ಗ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ:
ಕೆ.ಎನ್.ರಾಜಣ್ಣ (ತುಮಕೂರು ತಾಲ್ಲೂಕು) ಎಂ.ಸಿದ್ದಲಿಂಗಪ್ಪ (ತುರುವೇಕೆರೆ) ಎಸ್.ಹನುಮಾನ್ (ಮಧುಗಿರಿ) ಜಿ.ಜೆ.ರಾಜಣ್ಣ (ಕೊರಟಗೆರೆ ತಾಲ್ಲೂಕು).
(ಬಿ– ವರ್ಗ) ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘಗಳ ಕ್ಷೇತ್ರ: ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ.
(ಸಿ–ವರ್ಗ) ಜಿಲ್ಲೆಯ ಎಲ್ಲ ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ತುಮಕೂರಿನ ಎಸ್.ಲಕ್ಷ್ಮಿನಾರಾಯಣ.
(ಡಿ–ವರ್ಗ) ಜಿಲ್ಲೆಯಲ್ಲಿರುವ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ (ಮಹಿಳಾ ಸಂಘ ಹೊರತುಪಡಿಸಿ): ಮಧುಗಿರಿ ತಾಲ್ಲೂಕಿನ ಬಿ.ನಾಗೇಶ್.
(ಡಿ–ವರ್ಗ) ಜಿಲ್ಲೆಯಲ್ಲಿನ ಎಲ್ಲ ವರ್ಗದ ಮಹಿಳಾ ಸಹಕಾರ ಸಂಘಗಳ ಕ್ಷೇತ್ರ: ತುಮಕೂರಿನ ಮಾಲತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.