ADVERTISEMENT

ತುಮಕೂರು: ರೈತರಿಗೆ ಸಾಲ ನೀಡುವುದರಲ್ಲಿ ತಾರತಮ್ಯ, ಕಾಂಗ್ರೆಸ್ ನಾಯಕರಿಗೆ ಅಸಮಾಧಾನ

ಕೆ.ಜೆ.ಮರಿಯಪ್ಪ
Published 25 ಡಿಸೆಂಬರ್ 2025, 5:27 IST
Last Updated 25 ಡಿಸೆಂಬರ್ 2025, 5:27 IST
<div class="paragraphs"><p>ತುಮಕೂರು ಡಿಸಿಸಿ ಬ್ಯಾಂಕ್</p></div>

ತುಮಕೂರು ಡಿಸಿಸಿ ಬ್ಯಾಂಕ್

   

ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಮೂಲಕ ಜಿಲ್ಲೆಯ ರೈತರಿಗೆ ಬೆಳೆ ಸಾಲ ನೀಡುವ ವಿಚಾರದಲ್ಲಿ ನಡೆಯುತ್ತಿರುವ ತಾರತಮ್ಯ ಕಾಂಗ್ರೆಸ್ ನಾಯಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಏಕವಚನದಲ್ಲಿ ನಿಂದಿಸುವುದು ಆರಂಭವಾಗಿದೆ.

ಡಿಸಿಸಿ ಬ್ಯಾಂಕ್‌ಗೆ ಆರನೇ ಬಾರಿಗೆ ಅಧ್ಯಕ್ಷರಾಗಿರುವ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ನಡುವೆ ವಾಕ್ ಸಮರ ಮುಂದುವರಿದಿದೆ. ಕುಣಿಗಲ್ ತಾಲ್ಲೂಕಿನ ರೈತರಿಗೆ ಸಾಲ ನೀಡುವಲ್ಲಿ ರಾಜಣ್ಣ ತಾರತಮ್ಯ ಮಾಡುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ರಂಗನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಜಣ್ಣ ‘ನನ್ನನ್ನು ಕೇಳಲು ಇವನ್ಯಾರು? ನಾನೇನು ಇವರ ದುಡ್ಡು ತೆಗೆದುಕೊಂಡಿದಿನಾ? ಮುಂದಿನ ದಿನಗಳಲ್ಲಿ ಮಧುಗಿರಿ ತಾಲ್ಲೂಕಿಗೆ ಇನ್ನೂ ಹೆಚ್ಚು ಕೊಡುತ್ತೇನೆ. ಇದು ಸರ್ಕಾರದ ಹಣವಲ್ಲ. ಜನರ ಠೇವಣಿ ಹಣದಲ್ಲಿ ಸಾಲ ನೀಡಲಾಗಿದೆ. ಮಧುಗಿರಿ ನನ್ನ ಕ್ಷೇತ್ರ. ಪರಿಶಿಷ್ಟರು, ಹಿಂದುಳಿದವರ ಜನಸಂಖ್ಯೆ ಶೇ 80ರಷ್ಟಿದೆ. ಕುಣಿಗಲ್‌ನಲ್ಲಿ ಶೇ 80ರಷ್ಟು ಒಕ್ಕಲಿಗರು ಇದ್ದಾರೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನಾನು ಪ್ರತಿನಿಧಿಸುವ ಕ್ಷೇತ್ರಕ್ಕೆ ಹೆಚ್ಚು ಸಾಲ ಕೊಡುತ್ತೇನೆ’ ಎಂದು ಪ್ರತಿಪಾದಿಸಿದ್ದಾರೆ.

ಅಧಿವೇಶನದ ನಂತರವೂ ಇದು ತಣ್ಣಗಾಗಿಲ್ಲ. ಇಬ್ಬರು ನಾಯಕರ ಬೆಂಬಲಿಗರು ಪರಸ್ಪರ ಆರೋಪ– ಪ್ರತ್ಯಾರೋಪ ಮುಂದುವರಿಸಿದ್ದಾರೆ. ರಾಜಣ್ಣ– ರಂಗನಾಥ್ ನಡುವಿನ ‘ಸಮರ’ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಇದು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.

ಮಧುಗಿರಿ ಮುಂಚೂಣಿ: ಸಾಲ ನೀಡುವಲ್ಲಿ ತಾರತಮ್ಯ ಮಾಡಲಾಗಿದೆಯೇ? ಎಂಬುದನ್ನು ಗಮನಿಸಿದರೆ ಇದು ಎಂತಹವರಿಗೂ ಎದ್ದು ಕಾಣುತ್ತದೆ.

2024–25ನೇ ಸಾಲಿನಲ್ಲಿ (ಕಳೆದ ಮಾರ್ಚ್ ಅಂತ್ಯಕ್ಕೆ) ಡಿಸಿಸಿ ಬ್ಯಾಂಕ್ ಒಟ್ಟು ₹701.87 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡಿದ್ದು, ಅದರಲ್ಲಿ ₹154.15 ಕೋಟಿಯನ್ನು ಮಧುಗಿರಿ ತಾಲ್ಲೂಕಿನಲ್ಲಿ ವಿತರಿಸಲಾಗಿದೆ. ಅತಿ ಕಡಿಮೆ ₹37.51 ಕೋಟಿಯನ್ನು ಕುಣಿಗಲ್ ತಾಲ್ಲೂಕಿಗೆ ನೀಡಲಾಗಿದೆ. ಕುಣಿಗಲ್ ತಾಲ್ಲೂಕಿಗಿಂತ ಮಧುಗಿರಿ ಭಾಗಕ್ಕೆ ಸರಿ ಸುಮಾರು ನಾಲ್ಕು ಪಟ್ಟು ಹೆಚ್ಚು ಸಾಲ ಕೊಟ್ಟಿರುವುದು ಇಷ್ಟೆಲ್ಲ ರಾದ್ಧಾಂತಕ್ಕೆ ದಾರಿ ಮಾಡಿಕೊಟ್ಟಿದೆ. ಅತಿ ಕಡಿಮೆ ಸಾಲ ಪಡೆದ ತಾಲ್ಲೂಕಿನಲ್ಲಿ ಕುಣಿಗಲ್ ಬಿಟ್ಟರೆ ಗುಬ್ಬಿ (₹46.27 ಕೋಟಿ) ಎರಡನೇ ಸ್ಥಾನದಲ್ಲಿ ಬರುತ್ತದೆ.

ಶಿರಾ ₹101.48 ಕೋಟಿ, ತುರುವೇಕೆರೆ ₹76.66 ಕೋಟಿ, ಪಾವಗಡ ₹65.09 ಕೋಟಿ, ತುಮಕೂರು ತಾಲ್ಲೂಕಿನಲ್ಲಿ ₹55.05 ಕೋಟಿ ರೈತರಿಗೆ ಸಾಲ ನೀಡಲಾಗಿದೆ.

ಮಧ್ಯಮಾವಧಿ ಸಾಲ ನೀಡುವಲ್ಲೂ ಮಧುಗಿರಿ ಮುಂಚೂಣಿಯಲ್ಲಿದ್ದು (₹6.72 ಕೋಟಿ), ಅತಿ ಕಡಿಮೆ ಕೊರಟಗೆರೆ (₹51 ಲಕ್ಷ), ಕುಣಿಗಲ್ (₹1.57 ಕೋಟಿ) ಕೊಡಲಾಗಿದೆ.

ಈ ತಾರತಮ್ಯವೇ ರಂಗನಾಥ್ ಅವರನ್ನು ಕೆರಳಿಸುವಂತೆ ಮಾಡಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಹಾಗೂ ಸಾರ್ವಜನಿಕವಾಗಿ ಕೇಳಿ ಬಂದಿವೆ.

‘ಮಧುಗಿರಿ ತಾಲ್ಲೂಕು ಹಿಂದುಳಿದಿದೆ. ಪರಿಶಿಷ್ಟರು, ಒಬಿಸಿ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಧಿಕ ಮೊತ್ತದ ಸಾಲ ನೀಡಲಾಗಿದೆ’ ಎಂದು ರಾಜಣ್ಣ ನೀಡುವ ಹೇಳಿಕೆ ಸರಿ ಇದೆ. ಆದರೆ ಮಧುಗಿರಿಗಿಂತ ತೀರ ಹಿಂದುಳಿದಿರುವ ಬರದ ನಾಡು, ಗಡಿನಾಡು, ಪರಿಶಿಷ್ಟ ಜಾತಿಗೆ ಮೀಸಲಾದ ಪಾವಗಡ ತಾಲ್ಲೂಕಿಗೆ ಏಕೆ ತಾರತಮ್ಯ ಮಾಡಲಾಗಿದೆ? ಎಂದು ರಂಗನಾಥ್ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ.

ಜಿಲ್ಲೆಯ ಮತ್ತೊಂದು ಮೀಸಲು ಕ್ಷೇತ್ರ, ಸಚಿವ ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ತಾಲ್ಲೂಕಿಗೂ ನ್ಯಾಯ ಸಿಕ್ಕಿಲ್ಲ. ಮಧುಗಿರಿಗಿಂತ ಮೂರುಪಟ್ಟು ಕಡಿಮೆ ಸಾಲ ಕೊಡಲಾಗಿದೆ. ಮಧುಗಿರಿ ತಾಲ್ಲೂಕಿನಷ್ಟೇ ಕೊರಟಗೆರೆ ಸಹ ಹಿಂದುಳಿದಿದೆ. ಮೀಸಲು ಕ್ಷೇತ್ರವಾಗಿದೆ. ಆದರೂ ಏಕೆ ಆದ್ಯತೆ ನೀಡಿಲ್ಲ ಎಂಬುದು ಪರಮೇಶ್ವರ ಬೆಂಬಲಿಗರ ವಾದ. ರಂಗನಾಥ್ ಬಾಯಿಬಿಟ್ಟು ಕೇಳಿದ್ದಾರೆ. ಪರಮೇಶ್ವರ ಅವರು ಮಾತನಾಡುವುದು ಕಷ್ಟಕರವಾಗಿದೆ ಎಂಬುದು ಅವರ ಬೆಂಬಲಿಗರ ವಿವರಣೆ.

ಇದೇ ರೀತಿಯಲ್ಲಿ ತಾರತಮ್ಯ ಮುಂದುವರಿದರೆ ಮತ್ತೊಂದು ರೀತಿಯ ರಾಜಕೀಯ ಬೆಳವಣಿಗೆಗೂ ನಾಂದಿ ಹಾಡಬಹುದು ಎಂದು ಜಿಲ್ಲೆಯ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಅಲ್ಪಾವಧಿ ಸಾಲದ ವಿವರ:

ಮಧ್ಯಮಾವಧಿ ಸಾಲದ ವಿವರ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.