
ತುಮಕೂರು: ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಗೌಡನಹಳ್ಳಿಯ ರೈತ ಕುಟುಂಬಗಳ ಭೂ ಸ್ವಾಧೀನಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.
ತಾಲ್ಲೂಕಿನ ಬೆಳ್ಳಾವಿ ಹೋಬಳಿ ಗೌಡನಹಳ್ಳಿಯ ರೈತರ ಜಮೀನಿಗೆ 2014ನೇ ಸಾಲಿನಲ್ಲಿ ಕೆಐಎಡಿಬಿ ವತಿಯಿಂದ ಭೂ ಸ್ವಾಧೀನ ತಿಳಿವಳಿಕೆ ಪತ್ರ ನೀಡಲಾಗಿತ್ತು. 10 ವರ್ಷದ ನಂತರ ಮತ್ತೆ ಜಮೀನಿನಲ್ಲಿ ಜೆಎಂಸಿ ಮಾಡಲು ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ಬಂದಿದ್ದಾರೆ. ಇದಕ್ಕೆ ರೈತರು ಒಪ್ಪಿಗೆ ನೀಡದೆ ಪ್ರತಿಭಟಿಸಿದ್ದಾರೆ.
ಮತ್ತೆ ಒಂದು ವಾರ ಬಿಟ್ಟು ಬರಲಾಗುವುದು. ಆಗ ತಡೆಯೊಡ್ಡದೆ, ಒಪ್ಪಿಗೆ ನೀಡಬೇಕು ಎಂದು ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಹಿಂದಿನ ಹಾಗೂ ಈಗಿನ ಜಿಲ್ಲಾಧಿಕಾರಿ ರೈತರ ಸಂಕಷ್ಟಕ್ಕೆ ಪರಿಹಾರ ನೀಡುವುದಾಗಿ ನೀಡಿದ ಭರವಸೆಯನ್ನು ಗಾಳಿಗೆ ತೂರುತ್ತಿರುವುದನ್ನು ಸಂಘ ಖಂಡಿಸಿದೆ.
ಸಂಘದ ಕಾರ್ಯದರ್ಶಿ ಬಿ.ಉಮೇಶ್, ‘ಜಿಲ್ಲೆಯಲ್ಲಿ ಹೇಮಾವತಿ ನಾಲೆ, ಕೈಗಾರಿಕಾ ಪ್ರದೇಶ ಅಭಿವೃದ್ಧಿ, ರೈಲ್ವೆ ಯೋಜನೆ, ಎತ್ತಿನಹೊಳೆ, ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಹೆಚ್ಚಿನ ಪರಿಹಾರಕ್ಕೆ ಕೋರ್ಟ್ ಆದೇಶ ನೀಡಿದ್ದರೂ ಪರಿಹಾರ ನೀಡದೆ ಸಾವಿರಾರು ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.
ನಂದಿಹಳ್ಳಿ- ಮಲ್ಲಸಂದ್ರ- ವಸಂತನರಸಾಪುರ ವರ್ತುಲ ರಸ್ತೆ ಭೂ ಸ್ವಾಧೀನ ಸೇರಿದಂತೆ ರಿಯಲ್ ಎಸ್ಟೇಟ್ ದಂಧೆ ನಡೆಸಲು ಭೂ ಸ್ವಾಧೀನವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ದೊಡ್ಡನಂಜಯ್ಯ, ‘ಉದ್ಯೋಗ, ಆಹಾರ ಭದ್ರತೆಗೆ ಧಕ್ಕೆ ತರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಡಬೇಕು. ಹಲವು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು’ ಎಂದು ಒತ್ತಾಯಿಸಲು ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಒತ್ತಾಯಿಸಲಾಯಿತು’ ಎಂದು ಹೇಳಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಆರ್.ಎಸ್.ಚನ್ನಬಸವಣ್ಣ, ಸಹಕಾರ್ಯದರ್ಶಿ ಭೋಜರಾಜ್, ಖಜಾಂಚಿ ರಾಜಮ್ಮ, ಮುಖಂಡರಾದ ರಾಜಶೇಖರ್, ಕೋದಂಡರಾಮ, ಲಿಂಗರಾಜು, ರತ್ನಮ್ಮ, ನಾಗರತ್ನಮ್ಮ, ಗೌಡನಹಳ್ಳಿ ರೈತ ಶಿವಶಂಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.