ತೋವಿನಕೆರೆ: ಗೊಲ್ಲರಹಟ್ಟಿಗಳಲ್ಲಿ ನಡೆಯುತ್ತಿರುವ ಮೌಢ್ಯಾಚರಣೆ ನಿಮ್ಮ ಗಮನಕ್ಕೆ ಬಂದರೂ ಯಾಕೆ ತಡೆಯುವ ಪ್ರಯತ್ನ ಮಾಡಲಿಲ್ಲ. ಮಗು, ಬಾಣಂತಿ ಸತ್ತ ಮೇಲೆ ಕ್ರಮಕೈಗೊಳ್ಳುತ್ತೀರಾ? ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೋಬಳಿಯ ಬಿಸಾಡಿಹಳ್ಳಿ ಗೊಲ್ಲರಹಟ್ಟಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಟ್ಟಿಯ ಜನರ ಸಮಸ್ಯೆ ಆಲಿಸಿದರು.
‘ಹಟ್ಟಿಗಳಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದರೂ ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ. ಊರಾಚೆ ಇರುವ ಹೆಣ್ಣು ಮಕ್ಕಳಿಗೆ ಯಾವ ಸೌಲಭ್ಯ ಕಲ್ಪಿಸಲಾಗಿದೆ. ಬಾಣಂತಿ, ಮಗುವನ್ನು ಗುಡಿಸಲಿನಲ್ಲಿ ಇರಲು ಯಾಕೆ ಬಿಟ್ಟಿದ್ದೀರಿ? ಇದಕ್ಕೆ ಪರ್ಯಾಯ ವ್ಯವಸ್ಥೆ ಯಾಕೆ ಮಾಡಲಿಲ್ಲ. ಮೌಢ್ಯಾಚರಣೆ ತಡೆಯುವುದು ನಿಮ್ಮ ಕರ್ತವ್ಯ ಅಲ್ಲವೇ? ಎಂದು ತಾ.ಪಂ ಇಒ ಅಪೂರ್ವ, ತಹಶೀಲ್ದಾರ್ ಮಂಜುನಾಥ್ ಅವರನ್ನು ಪ್ರಶ್ನಿಸಿದರು.
ಕೇವಲ ಜಾಗೃತಿ ಕಾರ್ಯಕ್ರಮ ಮಾಡಲಷ್ಟೇ ಸೀಮಿತವಾಗಬೇಡಿ. ಇಂತಹ ಎಷ್ಟೇ ಕಾರ್ಯಕ್ರಮ ಆಯೋಜಿಸಿದರೂ ಬಾಣಂತಿಯನ್ನು ಊರಾಚೆ ಗುಡಿಸಲಿನಲ್ಲಿ ಇಡುವುದು ತಪ್ಪುತ್ತಿಲ್ಲ. ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಸರ್ಕಾರದ ಯೋಜನೆಗಳು ಹಟ್ಟಿಯ ಜನರಿಗೆ ತಲುಪಿಲ್ಲ. ಶೌಚಾಲಯ ಕಟ್ಟಿಕೊಳ್ಳಲು ಜಾಗ ಇಲ್ಲ ಎಂದು ಜನ ದೂರುತ್ತಿದ್ದಾರೆ. ನೀವೆಲ್ಲಾ ಎಲ್ಲಿದ್ದೀರಾ? ಜನರಿಗೆ ಯಾವ ಸೇವೆ ಕೊಡುತ್ತೀರಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಅಧಿಕಾರಿಗಳು ಯಾವುದಕ್ಕೂ ಉತ್ತರ ನೀಡಲಿಲ್ಲ. ಮೌನ ವಹಿಸಿ ತಲೆಬಗ್ಗಿಸಿ ನಿಂತಿದ್ದರು.
‘ಶುದ್ಧ ಕುಡಿಯುವ ನೀರು ಕೊಡುತ್ತಿಲ್ಲ. ಕಲುಷಿತ ನೀರು ಪೂರೈಕೆ ಮಾಡುತ್ತಿದ್ದಾರೆ. ನಮ್ಮ ತಾತನ ಕಾಲದ ವಿದ್ಯುತ್ ಕಂಬಗಳಿದ್ದು, ಬೀಳುವ ಹಂತ ತಲುಪಿವೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
‘ಹಟ್ಟಿಯ ಕೃಷ್ಣ ಕುಟೀರದಲ್ಲಿದ್ದ ಬಾಣಂತಿ, ಮಕ್ಕಳನ್ನು ಭೇಟಿಯಾಗಿ ಅಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುತ್ತಿರುವ ಬಗ್ಗೆ ಪರಿಶೀಲಿಸಿದರು. ಹೆಣ್ಣು ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ಅವರನ್ನು ಮೌಢ್ಯಾಚರಣೆಯಿಂದ ಹೊರ ತರುವ ನಿಟ್ಟಿನಲ್ಲಿ ಬಿಸಾಡಿಹಳ್ಳಿ ಗೊಲ್ಲರಹಟ್ಟಿಯನ್ನು ದತ್ತು ಪಡೆಯಲಾಗುವುದು. 10ನೇ ತರಗತಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪದ್ಧತಿ ಕೈಬಿಡಬೇಕು’ ಎಂದು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎಸ್.ಶ್ರೀಧರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.