ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಿ 14 ಗ್ರಾಮ ಪಂಚಾಯಿತಿಗಳ 54 ಹಳ್ಳಿಗಳ ಸೇರ್ಪಡೆಗೆ ಬೃಹತ್ ತುಮಕೂರು ಮಹಾನಗರ ಪಾಲಿಕೆ ವಿಸ್ತರಣೆ ವಿರೋಧಿ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಉದ್ದೇಶಿತ ಪ್ರಸ್ತಾಪ ಅನುಷ್ಠಾನಕ್ಕೆ ಬಂದರೆ ನಗರ, ಗ್ರಾಮಗಳ ಜನರ ಜೀವನ ದುಸ್ತರವಾಗಲಿದೆ. ಉದ್ದೇಶಿತ ಯೋಜನೆ ಕೈಬಿಡಬೇಕು ಎಂದು ನಗರದಲ್ಲಿ ಶುಕ್ರವಾರ ನಡೆದ ಹೋರಾಟ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಯಿತು.
ಪಾಲಿಕೆ ವಿಸ್ತರಣೆಯಿಂದ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಮಾತ್ರ ಅನುಕೂಲವಾಗಲಿದೆ. ಇದರಿಂದ ಸಾಮಾನ್ಯರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ನಿವೇಶನ ಬೆಲೆ ಗಗನಕ್ಕೇರಲಿದೆ. ಆಸ್ತಿ ತೆರಿಗೆ ದುಬಾರಿಯಾಗಲಿದ್ದು, ಇದು ಜನರಿಗೆ ಹೊರೆಯಾಗಲಿದೆ. ಈ ಹಿಂದೆ ನಗರಕ್ಕೆ ಸೇರ್ಪಡೆಗೊಂಡ 22 ಹಳ್ಳಿಗಳಿಗೆ ಈವರೆಗೂ ಸಮರ್ಪಕವಾಗಿ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಈ ಭಾಗದ ಜನರು ದುಪ್ಪಟ್ಟು ಆಸ್ತಿ ತೆರಿಗೆ ಪಾವತಿಸುವಂತಾಗಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ನಗರದ ಅಭಿವೃದ್ಧಿ ಕಡೆಗಣಿಸಿದ್ದು, ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಾಲಿಕೆ ವಿಫಲವಾಗಿದೆ. ಪಾಲಿಕೆ ಆಡಳಿತ ನೋಡಿದ ಜನರಿಗೆ ಅಸಹ್ಯ ಬರುವಂತಾಗಿದೆ. ಹೊಸದಾಗಿ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡರೂ ಅಭಿವೃದ್ಧಿಗೆ ಹಣ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಸಿಗದಾಗುತ್ತದೆ. ಅತಿಯಾದ ನಗರೀಕರಣದಿಂದ ಆರ್ಥಿಕ ಮಾನದಂಡ ಮುನ್ನೆಲೆಗೆ ಬರಲಿದೆ ಎಂದು ಹೇಳಿದರು.
ಸಭೆಗೆ ಮಾಹಿತಿ ನೀಡಿದ ಹೋರಾಟ ಸಮಿತಿ ಸಂಚಾಲಕ ಕೆ.ಪಿ.ಮಹೇಶ್, ‘ಸ್ವಾತಂತ್ರ್ಯ ಬಂದಾಗ 1947ರಲ್ಲಿ ಪುರಸಭೆಯಾಗಿ ತುಮಕೂರು ನಗರ ಅಸ್ತಿತ್ವಕ್ಕೆ ಬಂತು. 1975ರಲ್ಲಿ ನಗರಸಭೆ, 1995ರಲ್ಲಿ ನಗರ ಸುತ್ತಮುತ್ತಲಿನ 22 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. 2013ರಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಯಾವುದೇ ಕಾರಣಕ್ಕೂ ಹೊಸದಾಗಿ ಹಳ್ಳಿಗಳನ್ನು ಸೇರ್ಪಡೆ ಮಾಡಬಾರದು’ ಎಂದು ಆಗ್ರಹಿಸಿದರು.
ಜಿ.ಪಂ ಮಾಜಿ ಸದಸ್ಯ ಜಿ.ಎಸ್.ಶಿವಕುಮಾರ್, ಮಲ್ಲಸಂದ್ರ ಗ್ರಾ.ಪಂ ಸದಸ್ಯರಾದ ನವರತ್ನ ಕುಮಾರ್, ರತ್ನಮ್ಮ, ಮೈದಾಳ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ, ದೊಡ್ಡನಾರವಂಗಲದ ರವೀಶ್, ಕೆಸರುಮಡು ಕೃಷ್ಣಪ್ಪ, ನಗರದ ರಫೀಕ್ ಅಹಮದ್, ವಿವೇಕ್ ಮಾತನಾಡಿದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವರಾಜು, ಗೂಳೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ನಾಗರತ್ನ ಹುಚ್ಚೀರಪ್ಪ, ಸದಸ್ಯರಾದ ರಾಮಣ್ಣ, ಕೃಷ್ಣಮೂರ್ತಿ, ಶಿವಮ್ಮ, ಕೆ.ಪಾಲಸಂದ್ರ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಜಯಮ್ಮ ನಾಗರಾಜು, ಸ್ವಾಂದೇನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಕೆ.ಎಸ್.ನಾಗರತ್ನಮ್ಮ, ಕೆಸರುಮಡು ಗ್ರಾ.ಪಂ ಸದಸ್ಯರಾದ ಮಲ್ಲಿಕಾರ್ಜುನ, ಕೃಷ್ಣಪ್ಪ, ಮಲ್ಲಸಂದ್ರ ಗ್ರಾ.ಪಂ ಅಧ್ಯಕ್ಷೆ ಮಂಜಮ್ಮ ಪಾತರಾಜು, ಸದಸ್ಯರಾದ ಶಿವದಾನಯ್ಯ, ಮಂಜುನಾಥ್, ಗಾಯಿತ್ರಮ್ಮ ಗಂಗಣ್ಣ, ಮೈದಾಳ ಗ್ರಾ.ಪಂ ಸದಸ್ಯರಾದ ನವೀನ್ ಕುಮಾರ್, ಎಂ.ಶಿವಕುಮಾರ್, ದೊಡ್ಡನಾರವಂಗಲ ಗ್ರಾ.ಪಂ ಸದಸ್ಯ ಕೊಟ್ಟನಹಳ್ಳಿ ಶಿವಕುಮಾರ್, ಹೀರೇಹಳ್ಳಿಯ ಮದನ್, ಮುಖಂಡರಾದ ಶಬ್ಬೀರ್ ಅಹಮ್ಮದ್, ಎಸ್.ರಾಮಚಂದ್ರರಾವ್, ಶಶಿಧರ್, ಸುಬ್ರಹ್ಮಣ್ಯ, ಇಮ್ರಾನ್, ರವೀಶಯ್ಯ, ಹನುಮಂತಪುರ ಶಿವಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.