
ತುಮಕೂರು: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಆಸ್ಪತ್ರೆ, ತುರ್ತು ತೀವ್ರ ನಿಗಾ ಘಟಕ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನರ್ಸಿಂಗ್ ಕಾಲೇಜು– ಹಾಸ್ಟೆಲ್ ಕಟ್ಟಡ ಉದ್ಘಾಟನೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ ಇದುವರೆಗೆ ಕಾರ್ಯಾರಂಭ ಮಾಡಿಲ್ಲ.
2025ರ ನ. 7ರಂದು ಉದ್ಘಾಟಿಸಲಾಗಿದೆ. ಪ್ರಸ್ತುತ ಬೃಹತ್ ಕಟ್ಟಡಗಳು ಖಾಲಿ ಖಾಲಿಯಾಗಿವೆ. ಉದ್ಘಾಟನೆಯಾದ ಮರು ದಿನದಿಂದ ಬಾಗಿಲು ತೆಗೆದಿಲ್ಲ. ದೊಡ್ಡಾಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರತ್ಯೇಕವಾದ ಐಸಿಯು ಇಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ತೀವ್ರ ನಿಗಾ ಘಟಕದ ಸೌಲಭ್ಯ ಕಲ್ಪಿಸಿಲ್ಲ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಮಕ್ಕಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಪೋಷಕರು ಲಕ್ಷಾಂತರ ರೂಪಾಯಿ ಹಣ ವ್ಯಯಿಸುತ್ತಿದ್ದಾರೆ.
ಹೊಸದಾಗಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಐಸಿಯು ಸೌಕರ್ಯ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಜಿಲ್ಲಾಧಿಕಾರಿ ಶುಭ ಕಲ್ಯಾಣ ಹೇಳುತ್ತಾ ಬರುತ್ತಿದ್ದಾರೆ. ಇಲ್ಲಿ ಯಾವಾಗ ಚಿಕಿತ್ಸೆ ಲಭ್ಯವಾಗುತ್ತದೆ ಎಂಬುವುದನ್ನು ಯಾರೊಬ್ಬರೂ ನಿಖರವಾಗಿ ಹೇಳುತ್ತಿಲ್ಲ. ಹೀಗಾಗಿಯೇ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪರದಾಡುತ್ತಿದ್ದಾರೆ. ದುಡಿದ ಹಣವೆಲ್ಲಾ ಖಾಸಗಿ ಆಸ್ಪತ್ರೆಯ ಶುಲ್ಕ ಪಾವತಿಗೆ ಸುರಿಯುತ್ತಿದ್ದಾರೆ.
ಜಿಲ್ಲೆ ಒಳಗೊಂಡಂತೆ ಅಕ್ಕಪಕ್ಕದ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದೆ. ಉದ್ದೇಶ ಈಡೇರುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಈ ಆಸ್ಪತ್ರೆ ಕಟ್ಟಡ ಕೇವಲ ಉದ್ಘಾಟನೆಗೆ ಸೀಮಿತವಾಗಿದೆ. ರೋಗಿಗಳು ರಾಜಧಾನಿಗೆ ಹೋಗುವುದು ನಿಲ್ಲುತ್ತಿಲ್ಲ.
ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕೊಠಡಿಗಳ ಕೊರತೆಯಿಂದ ಇವತ್ತಿಗೂ ಪಾಠಕ್ಕಾಗಿ ಅಲೆಯುತ್ತಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡರೆ, ಇನ್ನುಳಿದವರು ತರಗತಿಯಲ್ಲಿ ಉಳಿಯುತ್ತಿದ್ದಾರೆ. ಹೊಸ ಕಟ್ಟಡ ಬಳಕೆಗೆ ನೀಡಿದರೆ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುತ್ತದೆ.
ಅಪಘಾತ ಚಿಕಿತ್ಸಾ ಕೇಂದ್ರದ (ಟ್ರಾಮಾ ಕೇರ್ ಸೆಂಟರ್) ಎದುರುಗಡೆ ನಿರ್ಮಿಸಿರುವ ತುರ್ತು ತೀವ್ರ ನಿಗಾ ಘಟಕದ ಪರಿಸ್ಥಿತಿಯೂ ಹೀಗೆಯೇ ಇದೆ.
ಮೂರು ತಿಂಗಳ ಹಿಂದೆ ಉದ್ಘಾಟನೆ ಬೃಹತ್ ಕಟ್ಟಡಗಳು ಖಾಲಿ ಖಾಲಿ ವೈದ್ಯರ ನೇಮಕಕ್ಕೆ ಟೆಂಡರ್
ಯಂತ್ರೋಪಕರಣಕ್ಕೆ ₹41 ಕೋಟಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಬಳಿಕ ₹41 ಕೋಟಿ ವೆಚ್ಚದಲ್ಲಿ ಯಂತ್ರೋಪಕರಣ ಅಳವಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದ್ದರು. ಸಚಿವರು ಭರವಸೆ ನೀಡಿ ಹಲವು ತಿಂಗಳುಗಳೇ ಕಳೆದಿದ್ದರೂ ಯಂತ್ರಗಳ ಖರೀದಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ತುರ್ತು ತೀವ್ರ ನಿಗಾ ಘಟಕಕ್ಕೆ ₹42.05 ಕೋಟಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ₹22.28 ಕೋಟಿ ಕ್ಯಾನ್ಸರ್ ಆಸ್ಪತ್ರೆಗೆ ₹69.96 ಕೋಟಿ ನರ್ಸಿಂಗ್ ಕಾಲೇಜು– ಹಾಸ್ಟಲ್ ಕಟ್ಟಡಕ್ಕೆ ₹22 ಕೋಟಿ ಖರ್ಚು ಮಾಡಲಾಗಿದೆ.
ಆದಷ್ಟು ಶೀಘ್ರ ಶುರು ಮುಂದಿನ ವಾರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತದೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಿದ್ವಾಯಿ ಆಸ್ಪತ್ರೆ ಉಸ್ತುವಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಕೆಲಸಗಳು ನಡೆಯಲಿವೆ. ವೈದ್ಯರು ಸಿಬ್ಬಂದಿ ನೇಮಕಕ್ಕೆ ಟೆಂಡರ್ ಆಗಿದೆ. ಯಂತ್ರ ಖರೀದಿ ಪ್ರಕ್ರಿಯೆಯೂ ನಡೆಯುತ್ತಿದೆ. ಡಾ.ಅಸ್ಗರ್ ಬೇಗ್ ಜಿಲ್ಲಾ ಶಸ್ತ್ರಚಿಕಿತ್ಸಕ ಜಿಲ್ಲಾ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.