ಕುಣಿಗಲ್: ಸತತ ಮೂರುವರೆ ವರ್ಷಗಳ ಕಾನೂನು ಹೋರಾಟದ ಮೂಲಕ ಪುರಸಭೆ 7ನೇ ವಾರ್ಡ್ ಸದಸ್ಯತ್ವ ಪಡೆದಿರುವ ಅನ್ಸರ್ ಪಾಷಾ ಅವರ ಆಯ್ಕೆಯನ್ನು ಘೋಷಿಸುವಂತೆ ಒತ್ತಾಯಿಸಿ ಜೆಡಿಎಸ್ ಪದಾಧಿಕಾರಿಗಳು ಗ್ರೇಡ್– 2 ತಹಶೀಲ್ದಾರ್ ಯೋಗೀಶ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್, ಸದಸ್ಯ ಅನ್ಸರ್ ಪಾಷಾ ಮೂರು ವರ್ಷದ ಹಿಂದೆ ನಡೆದಿದ್ದ ಪುರಸಭೆ ಚುನಾವಣೆಯಲ್ಲಿ ಅನ್ಯಾಯವಾಗಿರುವುದನ್ನು ಪ್ರಶ್ನಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಮೊಕ್ಕದಮ್ಮೆ ಹೂಡಿ ಜಯಗಳಿಸಿದ್ದರು. ನಂತರ ಹೈಕೋರ್ಟ್‌ನಲ್ಲಿಯೂ ಅನ್ಸರ್ ಪಾಷಾ ಆಯ್ಕೆ ಊರ್ಜಿತಗೊಳಿಸಿ ನೀಡಿದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ರಾಜ್ಯಪತ್ರದಲ್ಲೂ ಅನ್ಸರ್ ಪಾಷ ಆಯ್ಕೆಯನ್ನು ಘೋಷಿಸಿ ಪ್ರಕಟಣೆ ಹೊರಡಿಸಿದ್ದರು.
ಪುರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಸಹ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಮುಂದೂಡಿದ ಸಮಯದಲ್ಲಿ ಸದಸ್ಯ ಅನ್ಸರ್ ಪಾಷಾ ಅವರಿಗೆ ಲಿಖಿತ ಮಾಹಿತಿ ನೀಡಿದ್ದರೂ, ಪುರಸಭೆ ದಾಖಲೆಗಳಲ್ಲಿ ಅನ್ಸರ್ ಪಾಷಾ ಹೆಸರನ್ನು ದಾಖಲಿಸಲು ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಕಳೆದ 23ರಂದು ತಹಶೀಲ್ದಾರ್ ರಶ್ಮಿ, ಪುರಸಭೆ ಪ್ರಭಾರ ಮುಖ್ಯಾಧಿಕಾರಿಯಾಗಿ ನೇಮಕವಾದ ಕೆಲವೇ ಗಂಟೆಗಳಲ್ಲಿ ಪುರಸಭೆ ದಾಖಲೆಗಳಲ್ಲಿ ಹೆಸರು ಬದಲಾಗಿದೆ. ನ್ಯಾಯಾಲಯದ ಆದೇಶ, ರಾಜ್ಯ ಪತ್ರದಲ್ಲಿ ಪ್ರಕಟವಾಗಿದ್ದರೂ ಪುರಸಭೆ ದಾಖಲೆಗಳಲ್ಲಿ ನಮೂದು ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ರಶ್ಮಿ ಅವರನ್ನು ವಿಚಾರಿಸಿದಾಗ ಸ್ಥಳೀಯ ರಾಜಕಾರಣದಿಂದ ಅಸಹಾಯಕರಾಗಿರುವುದಾಗಿ ತಿಳಿಸಿದ್ದಾರೆ ಎಂದರು.
ಜೆಡಿಎಸ್ ಸದಸ್ಯನೊಬ್ಬನ ಕಾನೂನು ಹೋರಾಟದ ಜಯವನ್ನು ಸಹಿಸದ ಶಾಸಕ ಡಾ.ರಂಗನಾಥ ಪುರಸಭೆ ಅಧ್ಯಕ್ಷ ಚುನಾವಣೆ ಮುಂದೂಡಿದ್ದಲ್ಲದೆ ಪ್ರತಿಸ್ಪರ್ಧಿ ಕಾಂಗ್ರೆಸ್ ಸದಸ್ಯ ಸೆಮಿಉಲ್ಲಾ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ದಾಖಲೆಗಳಲ್ಲಿ ಜೆಡಿಎಸ್ ಸದಸ್ಯನ ಹೆಸರು ದಾಖಲಿಸುವುದನ್ನು ತಡೆದು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರಿಗಳು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಅನ್ಸರ್ ಪಾಷಾ, ಶ್ರೀನಿವಾಸ ಮೂರ್ತಿ, ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಸದಸ್ಯ ಈ ಮಂಜು, ಎಡೆಯೂರು ಹೋಬಳಿ ಅಧ್ಯಕ್ಷ ಜಗದೀಶ್, ನಾಗರಾಜು, ದಾಸೆಗೌಡ, ವಕ್ತಾರ ತರಿಕೆರೆ ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.