
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಗೆ ನಗರದ ಸುತ್ತಮುತ್ತಲಿನ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳ ಸೇರ್ಪಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.
ನಗರದ ಗಾಜಿನ ಮನೆಯಲ್ಲಿ ಸೋಮವಾರ ಆರಂಭವಾದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು– ತುಮಕೂರು ನಡುವೆ ಮುಂದಿನ ಐದು ವರ್ಷಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇಲ್ಲದ ರೀತಿಯಲ್ಲಿ ಅಭಿವೃದ್ಧಿ ಕಾಣಲಿದೆ. ನಗರಕ್ಕೆ ಮೆಟ್ರೊ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸುವ ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ. ಅದಕ್ಕೆ ಪೂರಕವಾಗಿ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಸ್ತಾವಕ್ಕೆ ಸಚಿವ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನಗರ ಸಮೀಪ ಕಲಾ ಗ್ರಾಮ ನಿರ್ಮಾಣಕ್ಕೆ ಜಾಗ ನೀಡಲಾಗುವುದು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನಗಳಲ್ಲಿ ಆಡಳಿತದ ಬಗ್ಗೆ ಚರ್ಚೆಗಳು ನಡೆದು ಸರ್ಕಾರಕ್ಕೆ ಕಟುವಾಗಿ ಸಲಹೆ, ಸೂಚನೆ ನೀಡುತ್ತಾ ಬರಲಾಗಿದೆ. ಆದರೆ ಇತ್ತೀಚೆಗೆ ಅಂತಹ ಬೆಳವಣಿಗೆ ಕಡಿಮೆಯಾಗಿದೆ. ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಸರ್ಕಾರ ಮನ್ನಣೆ ನೀಡದಿರಬಹುದು. ಹಾಗಂತ ಪೂರ್ಣ ನಿರ್ಲಕ್ಷ್ಯಿಸಿಲ್ಲ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಕಲಾಗ್ರಾಮ ನಿರ್ಮಾಣಕ್ಕೆ ಬೆಳ್ಳಾವಿ ಬಳಿ ಜಾಗ ಗುರುತಿಸಿದ್ದು, ಅದರಲ್ಲಿ 5 ಎಕರೆ ಜಾಗ ಮಂಜೂರು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ, ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ದುಬೈನಲ್ಲಿ ಕನ್ನಡ ಶಾಲೆ ನಡೆಸುತ್ತಿರುವ ಜಿಲ್ಲೆಯವರಾದ ನೀಲೇಶ್, ಎನ್.ಬಿ.ಪ್ರದೀಪ್ ಕುಮಾರ್, ಪರಿಷತ್ತು ಪದಾಧಿಕಾರಿಗಳಾದ ಡಿ.ಎನ್.ಯೋಗೇಶ್ವರಪ್ಪ, ಕೆ.ಎಸ್.ಉಮಾಮಹೇಶ್, ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.