ADVERTISEMENT

ಪಾವಗಡ | ರೈತರ ಪ್ರತಿಭಟನೆ: ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:48 IST
Last Updated 27 ಜೂನ್ 2025, 15:48 IST
<div class="paragraphs"><p>ಪಾವಗಡದಲ್ಲಿ ರೈತ ಸಂಘ, ಕಾರ್ಮಿಕರ ಸಂಘ, ದಲಿತ ಸಂಘಟನೆಯಿಂದ ಗುರುವಾರ ಪ್ರತಿಭಟನೆ ನಡೆಯಿತು</p></div>

ಪಾವಗಡದಲ್ಲಿ ರೈತ ಸಂಘ, ಕಾರ್ಮಿಕರ ಸಂಘ, ದಲಿತ ಸಂಘಟನೆಯಿಂದ ಗುರುವಾರ ಪ್ರತಿಭಟನೆ ನಡೆಯಿತು

   

ಪಾವಗಡ: ಕಾರ್ಪೊರೇಟ್ ಕಂಪನಿಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಫಲವತ್ತಾದ ಕೃಷಿಭೂಮಿ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಜ್ಯದಾದ್ಯಂತ ರೈತರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ, ಕಾರ್ಮಿಕರ ಸಂಘ, ದಲಿತ ಸಂಘಟನೆ ಗುರುವಾರ ತಹಶೀಲ್ದಾರ್‌ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತು.

ADVERTISEMENT

ಸರ್ಕಾರ ರೈತರ ಬದುಕಿಗೆ ಆಧಾರವಾಗಿದ್ದ ಕೃಷಿ ಭೂಮಿಯನ್ನು ಕಿತ್ತು ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡುತ್ತಿದೆ. ಕೈಗಾರಿಕಾ ಉದ್ದೇಶಕ್ಕೆ ನೀಡಲಾದ ಭೂಮಿಯನ್ನು ಉದ್ಯಮಿಗಳು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿದ್ದಾರೆ. ನೆಪ ಮಾತ್ರಕ್ಕೆ ಕೈಗಾರಿಕೆ ಆರಂಭಿಸಿ ನಷ್ಟದ ಲೆಕ್ಕ ನೀಡಿ ಭೂಮಿ ಕಬಳಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರ ಸರ್ವಾಧಿಕಾರಿಯಂತೆ ರೈತರ ಭೂಮಿ ಕಿತ್ತುಕೊಂಡು ಬೀದಿಗೆ ತಳ್ಳುತ್ತಿದೆ. ಅಧಿಕಾರ ಇಲ್ಲದಿದ್ದಾಗ ರೈತರ ಬಗ್ಗೆ ಕಾಳಜಿ ತೋರುವ ನಾಯಕರು ಅಧಿಕಾರ ಹಿಡಿದ ಕೂಡಲೇ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೇವನಹಳ್ಳಿ ಬಳಿ ರೈತರಿಂದ 1,177 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಿವು, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ರಾಮಾಂಜನೇಯ, ಗೋವಿಂದಪ್ಪ, ರಮೇಶ್, ಸದಾಶಿವಪ್ಪ, ಪಾತಣ್ಣ, ಕನ್ನಮೆಡಿ ಕೃಷ್ಣಮೂರ್ತಿ ರಮೇಶ್, ಚಿತ್ತಯ್ಯ, ರೈತ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.