ADVERTISEMENT

ಕಳಪೆ ಕಾಮಗಾರಿ: ದಿಬ್ಬೂರಿಗೆ ಹೋಗಲು ಪೌರ ಕಾರ್ಮಿಕರ ಹಿಂದೇಟು

52 ಮನೆಗೆ ₹3.89 ಕೋಟಿ ವೆಚ್ಚ; ಕಳಪೆ ಕಾಮಗಾರಿ; ಪಾಚಿ ಕಟ್ಟಿದ ಗೋಡೆ; ಹಲವು ಮನೆಗಳು ಖಾಲಿ ಖಾಲಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:24 IST
Last Updated 24 ಜನವರಿ 2026, 7:24 IST
ತುಮಕೂರು ಹೊರ ವಲಯದ ದಿಬ್ಬೂರು ಬಳಿ ನಿರ್ಮಿಸಿರುವ ಪೌರ ಕಾರ್ಮಿಕರ ಮನೆಗಳು
ತುಮಕೂರು ಹೊರ ವಲಯದ ದಿಬ್ಬೂರು ಬಳಿ ನಿರ್ಮಿಸಿರುವ ಪೌರ ಕಾರ್ಮಿಕರ ಮನೆಗಳು   

ತುಮಕೂರು: ಎರಡು ವರ್ಷಗಳ ಹಿಂದಷ್ಟೇ ಪೌರ ಕಾರ್ಮಿಕರಿಗೆ ನಿರ್ಮಿಸಿ ಕೊಟ್ಟಿದ್ದ ಮನೆಗಳು ಬಿರುಕು ಬಿಡುತ್ತಿವೆ. ನಿರಂತರವಾಗಿ ನೀರು ಸೋರಿಕೆಯಿಂದ ಗೋಡೆಗಳು ಪಾಚಿ ಕಟ್ಟುತ್ತಿವೆ. ಇನ್ನೂ ಹತ್ತಾರು ಮನೆಗಳು ಖಾಲಿ ಖಾಲಿಯಾಗಿವೆ.

ಮಹಾನಗರ ಪಾಲಿಕೆಯ ಕಾಯಂ ಪೌರ ಕಾರ್ಮಿಕರಿಗೆ ವಸತಿ ಕಲ್ಪಿಸಲು, ನಗರ ಹೊರವಲಯದ ದಿಬ್ಬೂರಿನ ಬಳಿ 2 ಎಕರೆ ಪ್ರದೇಶದಲ್ಲಿ 52 ಮನೆ ನಿರ್ಮಿಸಲಾಗಿದೆ. ಇದಕ್ಕಾಗಿ ಪಾಲಿಕೆ ₹3.89 ಕೋಟಿ ವ್ಯಯಿಸಿದೆ. 2016ರಲ್ಲಿ ‘ಗೃಹ ಭಾಗ್ಯ’ ಯೋಜನೆಯಡಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸುಮಾರು 9 ವರ್ಷಗಳ ನಂತರ ಕಾಮಗಾರಿ ಪೂರ್ಣಗೊಂಡಿತ್ತು.

2023ರ ಸೆ. 23ರಂದು ಪೌರ ಕಾರ್ಮಿಕರ ದಿನಾಚರಣೆ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಜಿ.ಪರಮೇಶ್ವರ ಸಾಂಕೇತಿಕವಾಗಿ ಮನೆಗಳ ಬೀಗವನ್ನು ಕಾರ್ಮಿಕರಿಗೆ ನೀಡಿದ್ದರು. ಹಂಚಿಕೆಯಾದ ಎಲ್ಲ ಮನೆಗಳಲ್ಲಿ ಪೌರ ಕಾರ್ಮಿಕರು ವಾಸಿಸುತ್ತಿಲ್ಲ. ಮೂಲಭೂತ ಸೌಲಭ್ಯದ ಕೊರತೆ ಕಾರಣಕ್ಕೆ ಹಲವು ಮನೆಗಳಿಗೆ ಬೀಗ ಹಾಕಲಾಗಿದೆ.

ADVERTISEMENT

ಸಮುಚ್ಚಯದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿಲ್ಲ. ಇಲ್ಲಿನ ಜನ ಕೊಳವೆ ಬಾವಿ ನೀರೇ ಕುಡಿಯುತ್ತಿದ್ದಾರೆ. ನೀರು ಕುಡಿಯಲು ಯೋಗ್ಯವೇ ಎಂಬುವುದನ್ನು ಪರಿಶೀಲಿಸುವ ಕಾರ್ಯವೂ ಆಗಿಲ್ಲ. ಇದು ಜನರ ಆರೋಗ್ಯ ಕೆಡಿಸುತ್ತಿದೆ. ನೀರಿನ ಘಟಕ ತೆರೆಯುವಂತೆ ಸ್ಥಳೀಯರು ಮನವಿ ಮಾಡಿದರೂ ಆಡಳಿತ ವರ್ಗದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.

ಅನರ್ಹರಿಗೆ ಮನೆ ಹಂಚಿಕೆ: ಮನೆ ಇಲ್ಲದ ಪೌರ ಕಾರ್ಮಿಕರಿಗೆ ವಸತಿ ನೀಡುವ ಉದ್ದೇಶದಿಂದ ಗೃಹ ನಿರ್ಮಾಣ ಕಾರ್ಯ ನಡೆಸಲಾಗಿದೆ. ಆದರೆ, ಈಗಾಗಲೇ ಮನೆ ಇದ್ದವರಿಗೂ ಸಮುಚ್ಚಯದಲ್ಲಿ ಮನೆ ಹಂಚಿಕೆ ಮಾಡಲಾಗಿದೆ. ಬಾಡಿಗೆ ಮನೆಯಲ್ಲಿ ಇರುವವರು ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಸ್ವಂತ ಮನೆ ಇದ್ದವರು ಇಲ್ಲಿನ ಬಂಡವಾಳ ಕಂಡು ಸ್ಥಳಾಂತರಕ್ಕೆ ಹೆದರುತ್ತಿದ್ದಾರೆ. ಹೀಗಾಗಿ ಹಲವು ಮನೆಗಳು ಖಾಲಿಯಾಗಿವೆ.

ಪೌರ ಕಾರ್ಮಿಕರು ಹೊತ್ತು ಮೂಡುವ ಮುನ್ನವೇ ಕೆಲಸಕ್ಕೆ ತೆರಳಬೇಕಾಗುತ್ತದೆ. ವಸತಿ ಸಮುಚ್ಚಯದಿಂದ ನಗರಕ್ಕೆ ಬರಲು ಬಸ್‌, ಆಟೊ ವ್ಯವಸ್ಥೆ ಇಲ್ಲ. ಸ್ವಂತ ವಾಹನ ಇದ್ದವರು ಮಾತ್ರ ನಗರದ ಕಡೆಗೆ ಬರುವಂತಾಗಿದೆ. ಅನಿವಾರ್ಯವಾಗಿ ಬರಲೇಬೇಕಾದವರು ಆಟೊಗಳಿಗೆ ದುಬಾರಿ ಹಣ ಪಾವತಿಸಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಈವರೆಗೂ ಈಡೇರಿಲ್ಲ.

ಪಾಚಿ ಕಟ್ಟಿದ ಮನೆಯ ಗೋಡೆ

‘ಸಮುಚ್ಚಯದಲ್ಲಿ ಸಂಧಿ ಮನೆಗಳು ಜಾಸ್ತಿ ಇದೆ. ಇದೇ ಕಾರಣಕ್ಕೆ ಪೌರ ಕಾರ್ಮಿಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಊರಿಂದ ಆಚೆ ಮನೆ ಕೊಟ್ಟಿದ್ದಾರೆ. ಅಗತ್ಯ ಸೌಲಭ್ಯ ಕಲ್ಪಿಸದಿದ್ದರೆ ಬದುಕು ಸಾಗಿಸುವುದು ಹೇಗೆ? ಅಡುಗೆ ಕೋಣೆಯ ಬಟನ್‌ ಒತ್ತಿದರೆ ಶೌಚಾಲಯದಲ್ಲಿ ಲೈಟ್‌ ಬೆಳಗುತ್ತದೆ. ವಿದ್ಯುತ್‌ ಸಂಪರ್ಕ ಸರಿಯಾಗಿ ಇಲ್ಲದೆ ಅನೇಕ ಮೋಟರ್‌ಗಳು ಸುಟ್ಟು ಹೋಗಿವೆ’ ಎಂದು ಮಂಜುಳಾ ಇಲ್ಲಿನ ವಾಸ್ತವದ ಸ್ಥಿತಿ ತೆರೆದಿಟ್ಟರು.

ಹಸ್ತಾಂತರದ ನಂತರವೂ ಬೀಗ ತೆಗೆಯದ ಮನೆಗಳು

ಭೂಮಿ ಪೂಜೆಗೆ ಸೀಮಿತ

ಮಹಾನಗರ ಪಾಲಿಕೆ ಸಿಬ್ಬಂದಿಗೆ ದಿಬ್ಬೂರಿನಲ್ಲಿ ಗೃಹ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ತಿಂಗಳು ಕಳೆದಿದ್ದು ಇದುವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ಪೌರ ಕಾರ್ಮಿಕರಿಗೆ ನೀಡಿರುವ ಮನೆಗಳ ಅನತಿ ದೂರದಲ್ಲಿಯೇ ಸಿಬ್ಬಂದಿಗೂ ವಸತಿ ಗೃಹ ನಿರ್ಮಿಸಲಾಗುತ್ತಿದೆ. ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಬೇಸಿಗೆಯಲ್ಲಿ ಸಮಸ್ಯೆ

ವಸತಿ ಸಮುಚ್ಚಯದ ಬಳಿ ಕೊಳವೆ ಬಾವಿ ಕೊರೆಸಲಾಗಿದೆ. ಅದರಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಬೇಸಿಗೆ ಸಮಯದಲ್ಲಿ ಕೊಳವೆ ಬಾವಿ ನೀರು ಕಡಿಮೆಯಾಗಿ ತುಂಬಾ ಸಮಸ್ಯೆಯಾಗುತ್ತದೆ. ನೀರಿಗಾಗಿ ದಿಬ್ಬೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಚಂದ್ರು, ಸ್ಥಳೀಯರು

ಕಾಮಗಾರಿ ಕಳಪೆ

ಮನೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಎಲ್ಲ ಕಡೆ ಗೋಡೆಗಳು ಬಿರುಕು ಬಿಟ್ಟಿವೆ. ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪ್ರಾರಂಭದಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಪೌರ ಕಾರ್ಮಿಕರೇ ತಮ್ಮ ಹಣದಲ್ಲಿ ಎಲ್ಲವನ್ನು ಸರಿಮಾಡಿಕೊಂಡಿದ್ದಾರೆ.
ಮಂಜುಳಾ, ಸ್ಥಳೀಯರು

ವಾಹನ ಸೌಲಭ್ಯ ಬೇಕು

ನಗರದಿಂದ ಮನೆಗೆ ಬರಲು ಬಸ್‌ಗಳ ಸೌಲಭ್ಯ ಇಲ್ಲ. ಆಟೊಗಳನ್ನೇ ನೆಚ್ಚಿಕೊಳ್ಳಬೇಕು. ದುಬಾರಿ ಹಣ ನೀಡಬೇಕು. ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಮಕ್ಕಳು ಶಾಲೆ– ಕಾಲೇಜುಗಳಿಗೆ ಹೋಗಲು ಪರದಾಡುವಂತಹ ಪರಿಸ್ಥಿತಿ ಇದೆ. ಮನೆ ಹಂಚಿಕೆ ಮಾಡಿದ ನಂತರ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ.
ಲತಾ, ಸ್ಥಳೀಯರು

ರಕ್ಷಣೆ ಕಲ್ಪಿಸಿ

ವಸತಿ ಸಮುಚ್ಚಯ ಊರಿಂದ ಹೊರಗಿದೆ. ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮನೆ ಬಳಿ ಯಾವುದೇ ವಸ್ತುಗಳನ್ನು ಇಡುವಂತಿಲ್ಲ. ಎಲ್ಲವೂ ನಾಪತ್ತೆಯಾಗುತ್ತಿವೆ. ರಕ್ಷಣೆಗೆ ಸಿಬ್ಬಂದಿ ನಿಯೋಜಿಸಬೇಕು. ಪೊಲೀಸ್‌ ಗಸ್ತು ಹೆಚ್ಚಿಸಬೇಕು. ಜನ ಸಮುದಾಯಕ್ಕೆ ರಕ್ಷಣೆ ಕಲ್ಪಿಸಬೇಕು.
ಕವಿತಾ, ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.