ತುಮಕೂರು: ಜಿಲ್ಲೆಯಿಂದ ಆಯ್ಕೆಯಾಗಿರುವ ಸಂಸದರು ರೈಲ್ವೆ ಮಂತ್ರಿಯಾದರೂ ನಗರದ ರೈಲು ನಿಲ್ದಾಣದ ಚಿತ್ರಣ ಮಾತ್ರ ಬದಲಾಗಿಲ್ಲ. ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಮೂರು ವರ್ಷಗಳಿಂದ ಶೌಚಾಲಯದ ಬಾಗಿಲು ತೆಗೆದಿಲ್ಲ. ರೈಲು ಪ್ರಯಾಣಿಕರು, ಸಾರ್ವಜನಿಕರ ಪರದಾಟ ತಪ್ಪಿಲ್ಲ.
ನಗರದಿಂದ ಪ್ರತಿ ದಿನ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಬೆಳಿಗ್ಗೆ, ಸಂಜೆ ಸಮಯದಲ್ಲಿ ಸಂಚರಿಸುವ ಎಲ್ಲ ರೈಲುಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುತ್ತವೆ. ಇಲ್ಲಿಂದ ರಾಜ್ಯದ ವಿವಿಧ ಭಾಗಗಳಿಗೆ ಹೋಗುವ ಜನರೂ ಇದ್ದಾರೆ. ಆದರೆ ಅವರಿಗೆ ಬೇಕಾದ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿವೆ.
ಕೇಂದ್ರ ಸರ್ಕಾರದ ‘ಅಮೃತ ಭಾರತ್ ಮಿಷನ್’ ಯೋಜನೆಯಡಿ ರೈಲು ನಿಲ್ದಾಣದಲ್ಲಿ ಹಲವು ಸೌಲಭ್ಯ ಕಲ್ಪಿಸಲು ಸಿದ್ಧತೆ ಆರಂಭವಾಗಿದೆ. ವಾಹನಗಳ ನಿಲುಗಡೆಗೆ ಬಹು ಹಂತದ ಕಟ್ಟಡದ ವ್ಯವಸ್ಥೆ ಮಾಡಲಾಗುವುದು ಎಂದು ಮೂರು ವರ್ಷಗಳಿಂದ ಭರವಸೆ ನೀಡಲಾಗುತ್ತಿದೆ. ಇದುವರೆಗೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲು ಸಾಧ್ಯವಾಗಿಲ್ಲ. ನಿತ್ಯ ಸಾವಿರಾರು ವಾಹನಗಳನ್ನು ರೈಲು ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ.
ರೈಲು ನಿಲ್ದಾಣದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಸುಮಾರು 1 ಸಾವಿರ ವಾಹನ ಮಾತ್ರ ನಿಲ್ಲಿಸಲು ಅವಕಾಶ ಇದೆ. ಕಿರಿದಾದ ಜಾಗದಲ್ಲಿ ಸಾವಿರಾರು ವಾಹನಗಳು ನಿಲ್ಲುತ್ತಿವೆ. ನಿಲುಗಡೆ ಸ್ಥಳವೂ ಸರಿಯಾಗಿಲ್ಲ. ಮಳೆ ಬಂದರೆ ಕೆಸರುಗದ್ದೆಯಂತಾಗುತ್ತದೆ. ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಮಂಡಳಿ ಬಹುಮಹಡಿ ಕಟ್ಟಡಕ್ಕೆ ಒಪ್ಪಿಗೆ ಸೂಚಿಸಿತ್ತು. ನಮ್ಮ ಪರದಾಟ ತಪ್ಪಲಿದೆ ಎಂದು ರೈಲು ಪ್ರಯಾಣಿಕರು ನಂಬಿದ್ದರು. ಆದರೆ ಈವರೆಗೆ ಒಂದು ಪೈಸೆಯ ಕೆಲಸವೂ ಆಗಿಲ್ಲ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ, ಗಾಂಧಿನಗರ ರಸ್ತೆ, ಪ್ರವಾಸಿ ಮಂದಿರದ ಮುಂಭಾಗ ಯಾವಾಗ ನೋಡಿದರೂ ಸಾಲು ಸಾಲಾಗಿ ವಾಹನಗಳು ನಿಂತಿರುತ್ತವೆ. ಇಲ್ಲಿ ನಿಲ್ಲಿಸುವ ಬೈಕ್‌ಗಳಿಗೆ ಯಾವುದೇ ರಕ್ಷಣೆ ಇಲ್ಲ. ಕಳೆದ ವರ್ಷ ರೈಲ್ವೆ ಸಿಬ್ಬಂದಿಯೊಬ್ಬರು ಕಾಲೇಜು ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಬೈಕ್ ನಿಲ್ಲಿಸಿ ಹೋಗಿದ್ದರು. ಒಂದು ತಾಸು ಬಿಟ್ಟು ಬಂದು ನೋಡಿದರೆ ಬೈಕ್ ಕಾಣೆಯಾಗಿತ್ತು. ಇಂತಹ ಹತ್ತಾರು ಪ್ರಕರಣಗಳು ರೈಲು ನಿಲ್ದಾಣದ ಬಳಿ ವರದಿಯಾಗಿವೆ. ಕಳ್ಳತನಕ್ಕೆ ಕಡಿವಾಣ ಬೀಳುತ್ತಿಲ್ಲ. ವಾಹನ ನಿಲುಗಡೆ ಹಾಗೂ ಭದ್ರತೆಗೆ ಒಂದು ವ್ಯವಸ್ಥೆ ಕಲ್ಪಿಸಿಲ್ಲ.
‘ಸಂಸದ ವಿ.ಸೋಮಣ್ಣ ಕೇಂದ್ರದ ಮಂತ್ರಿಯಾದ ನಂತರ ನಗರದ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ ಮಾಡಿರುವುದು ಬಿಟ್ಟರೆ ಬೇರೆ ಬೆಳವಣಿಗೆ ಕಂಡಿಲ್ಲ. ಮೊದಲು ಜನರ ಸಮಸ್ಯೆಗೆ ಸ್ಪಂದಿಸಿ, ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಗಾಂಧಿನಗರದ ಮಾರುತೇಶ್ ಒತ್ತಾಯಿಸಿದರು.
ಸದಾ ಮುಚ್ಚಿರುವ ಮಳಿಗೆ
ತೆಂಗು ಉತ್ಪನ್ನದ ಪರಿಚಯ ಮತ್ತು ಪ್ರೋತ್ಸಾಹದ ಉದ್ದೇಶದಿಂದ ರೈಲು ನಿಲ್ದಾಣದಲ್ಲಿ ಆರಂಭಿಸಿದ್ದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆ ಸದಾ ಬಾಗಿಲು ಹಾಕಿರುತ್ತದೆ. ಕೊಬ್ಬರಿ ತೆಂಗಿನ ಕಾಯಿ ಕೊಬ್ಬರಿಯಿಂದ ತಯಾರಿಸಿದ ಸಿಹಿ ತಿನಿಸು ವಿವಿಧ ಕಲಾಕೃತಿ ಮತ್ತು ಕೊಬ್ಬರಿ ಎಣ್ಣೆ ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಪ್ರತಿ ದಿನ ಸಾವಿರಾರು ಜನರು ಓಡಾಡುವ ಕಡೆಗಳಲ್ಲಿ ಜಿಲ್ಲೆಯ ಉತ್ಪನ್ನಗಳ ಪ್ರಚಾರ ಮಾಡುವುದು ಇದರ ಹಿಂದಿನ ಉದ್ದೇಶವಾಗಿತ್ತು. ಸುಮಾರು ₹3 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಮಳಿಗೆ ಯಾವಾಗಲೂ ಬಂದ್ ಆಗಿರುತ್ತದೆ. ಅಪರೂಪಕ್ಕೊಮ್ಮೆ ತೆರೆದರೂ ಹೆಚ್ಚಿನ ಉತ್ಪನ್ನಗಳೇ ಇರುವುದಿಲ್ಲ. ‘ಹೊರಗಡೆಯಿಂದ ನೋಡಲು ಮಾತ್ರ ಮಳಿಗೆ ತುಂಬಾ ಚೆನ್ನಾಗಿ ಕಾಣುತ್ತದೆ. ಬಾಗಿಲು ತೆಗೆಯುವುದು ಅಪರೂಪ. ತೆಗೆದಿದ್ದರೂ ನಮಗೆ ಬೇಕಾದ ವಿಶಿಷ್ಟ ಎನಿಸುವ ಉತ್ಪನ್ನಗಳು ಸಿಗುವುದಿಲ್ಲ. ಸುಮ್ಮನೆ ಕಾಟಾಚಾರಕ್ಕೆ ಅಂಗಡಿ ಶುರು ಮಾಡಿದಂತೆ ಕಾಣುತ್ತಿದೆ’ ಎಂದು ಬನಶಂಕರಿಯ ಸುಹಾಸ್ ಪ್ರತಿಕ್ರಿಯಿಸಿದರು.
ಶೌಚಕ್ಕೆ ಬಯಲೇ ಗತಿ
ರೈಲು ನಿಲ್ದಾಣದಲ್ಲಿರುವ ಶೌಚಾಲಯಗಳಿಗೆ ಹಲವು ವರ್ಷಗಳಿಂದ ಬೀಗ ಹಾಕಲಾಗಿದೆ. ಇದುವರೆಗೆ ಅದನ್ನು ತೆಗಿಸಿಲ್ಲ. ಇದರ ಪಕ್ಕದಲ್ಲಿಯೇ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯವಿದ್ದು ಬಳಕೆಗೆ ನೀಡುತ್ತಿಲ್ಲ. ಇಲ್ಲಿಗೆ ಬಂದವರ ಶೌಚಕ್ಕೆ ಬಯಲೇ ಗತಿ. ರೈಲಿಗಾಗಿ ಗಂಟೆಗಟ್ಟಲೇ ಕಾಯುವ ಪ್ರಯಾಣಿಕರು ಶೌಚಾಲಯದ ಅಲಭ್ಯತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ತುಮಕೂರಿನ ಸಂಸದರೇ ರೈಲ್ವೆ ಸಚಿವರಾಗಿದ್ದು ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುವುದು ಪ್ರಯಾಣಿಕರ ಒತ್ತಾಯ.
ಹೆಚ್ಚಿನ ಸಮಸ್ಯೆ ಇಲ್ಲ
ರೈಲು ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಬಿಟ್ಟರೆ ಬೇರೆ ಸಮಸ್ಯೆಗಳಿಲ್ಲ. ನಿತ್ಯ ಸಾವಿರಾರು ವಾಹನಗಳನ್ನು ಇಲ್ಲಿ ನಿಲ್ಲಿಸುತ್ತಿದ್ದು ಪಾರ್ಕಿಂಗ್‌ಗೆ ಅಗತ್ಯ ಜಾಗ ಕಲ್ಪಿಸಬೇಕು. ಅರಸಿಕೆರೆ–ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಮಹಿಳಾ ಬೋಗಿಗಳ ಸಂಖ್ಯೆ ಹೆಚ್ಚಿಸಬೇಕು.
- ಕರಣಂ ರಮೇಶ್ ಅಧ್ಯಕ್ಷ ರೈಲ್ವೆ ಪ್ರಯಾಣಿಕರ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.