ADVERTISEMENT

ತುಮಕೂರು: 41 ಸ್ಕ್ಯಾನಿಂಗ್‌ ಸೆಂಟರ್‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:21 IST
Last Updated 21 ಜುಲೈ 2025, 4:21 IST
ಸ್ಕ್ಯಾನಿಂಗ್‌ ಕೇಂದ್ರ (ಸಾಂದರ್ಭಿಕ ಚಿತ್ರ)
ಸ್ಕ್ಯಾನಿಂಗ್‌ ಕೇಂದ್ರ (ಸಾಂದರ್ಭಿಕ ಚಿತ್ರ)   

ತುಮಕೂರು: ಸಮರ್ಪಕ ದಾಖಲೆ ನಿರ್ವಹಣೆಯಲ್ಲಿ ವಿಫಲ, ಸರ್ಕಾರದ ಮಾನದಂಡ ಪಾಲಿಸದೆ ನಿರ್ಲಕ್ಷ್ಯ ವಹಿಸಿದ ಸ್ಕ್ಯಾನಿಂಗ್‌ ಕೇಂದ್ರಗಳ ವಿರುದ್ಧ ಆರೋಗ್ಯ ಇಲಾಖೆ ಚಾಟಿ ಬೀಸಿದ್ದು, ಇಂತಹ 41 ಕೇಂದ್ರಗಳಿಗೆ ಬೀಗ ಜಡಿಯಲಾಗಿದೆ.

ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‌ಡಿಟಿ) ವ್ಯಾಪ್ತಿಯಲ್ಲಿ ಸ್ಕ್ಯಾನಿಂಗ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಕಾಯ್ದೆಯ ನಿಯಮ ಪಾಲಿಸದ ಕೇಂದ್ರಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಸ್ಕ್ಯಾನಿಂಗ್‌ ಯಂತ್ರ ಸುಸ್ಥಿತಿಯಲ್ಲಿ ಇಲ್ಲದ, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ ಸಮಯದಲ್ಲಿ ವೈದ್ಯರು, ಸಿಬ್ಬಂದಿ ವಿವರ ಇರುವ ನಾಮಫಲಕ ಅಳವಡಿಸಿದ ಕೇಂದ್ರಗಳ ಮೇಲೆಯೂ ಕ್ರಮಕೈಗೊಳ್ಳಲಾಗಿದೆ.

ಭ್ರೂಣಲಿಂಗ ಪತ್ತೆ ತಡೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲ ರೀತಿಯಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಭಾಗವಾಗಿ ಜಿಲ್ಲೆಯಲ್ಲಿರುವ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ವೇಳೆ ಅಗತ್ಯ ದಾಖಲೆ ಸಲ್ಲಿಸದ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಲ್ಲಿ ಹಿಂದುಳಿದ ಕೇಂದ್ರಗಳ ಬಾಗಿಲು ಮುಚ್ಚುವ ಕೆಲಸವಾಗುತ್ತಿದೆ.

ADVERTISEMENT

ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ರೆಫೆರಲ್‌ ಸ್ಲಿಪ್ ಹಾಗೂ ವೈದ್ಯರ ಹೆಸರು ಇಲ್ಲದಿದ್ದರೆ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಕೇಂದ್ರಗಳಲ್ಲಿನ ಸ್ಕ್ಯಾನಿಂಗ್‌ ಯಂತ್ರ ಜಪ್ತಿ ಮಾಡಿ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ. ಆರೋಪ ಸಾಬೀತಾದರೆ ಶಿಕ್ಷೆ ವಿಧಿಸಲಾಗುತ್ತದೆ.

ಅನುಮತಿ ಪಡೆಯದೆ ಸ್ಕ್ಯಾನಿಂಗ್‌ ಸೆಂಟರ್‌ ಆರಂಭಿಸಿದ, ಪರವಾನಗಿ ನವೀಕರಣ ಮಾಡಿಸದೆ ಉದಾಸೀನತೆ ತೋರಿದವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗಿದೆ. ಸ್ಕ್ಯಾನಿಂಗ್‌ ಸೆಂಟರ್‌ನಲ್ಲಿ ಸೂಕ್ತ ಕಟ್ಟಡ, ಉತ್ತಮ ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆ ಇರಬೇಕು. ಬರುವ ರೋಗಿಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸದ ಕೇಂದ್ರಗಳು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿವೆ.

ಕೇಂದ್ರಗಳಲ್ಲಿ ಸ್ಕ್ಯಾನಿಂಗ್‍ಗೆ ವಿಧಿಸಲಾಗುವ ಶುಲ್ಕದ ದರದ ಪಟ್ಟಿ ಪ್ರದರ್ಶಿಸಬೇಕು ಎಂಬ ನಿಯಮ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ತುಂಬಾ ಕಡೆಗಳಲ್ಲಿ ಇಂತಹ ಪಟ್ಟಿ ಕಾಣೆಯಾಗಿದೆ. ಇದೇ ಕಾರಣಕ್ಕೆ ಕೇಂದ್ರಗಳು ಬಂದ್‌ ಆಗುತ್ತಿವೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಸ್ಕ್ಯಾನಿಂಗ್‌ ಸೆಂಟರ್‌ಗಳ ಕಾರ್ಯ ಪರೀಕ್ಷಿಸಲಾಗುತ್ತಿದೆ. ಇದುವರೆಗೆ ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 19 ಸೆಂಟರ್‌ಗಳಿಗೆ ಬೀಗ ಹಾಕಲಾಗಿದೆ. ಇದರ ನಂತರದ ಸ್ಥಾನವನ್ನು ತಿಪಟೂರು 6 ಪಡೆದುಕೊಂಡಿದೆ.

ಕಾಲ ಕಾಲಕ್ಕೆ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ಪಿಸಿಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸಿದ ಕೇಂದ್ರದ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ
ಡಾ.ಬಿ.ಎಂ.ಚಂದ್ರಶೇಖರ್‌ ಡಿಎಚ್‌ಒ

10 ಸರ್ಕಾರಿ ಸೆಂಟರ್‌

ಜಿಲ್ಲೆಯಲ್ಲಿ 155 ಖಾಸಗಿ 10 ಸರ್ಕಾರಿ ಸೇರಿ ಒಟ್ಟು 165 ಸ್ಕ್ಯಾನಿಂಗ್‌ ಕೇಂದ್ರಗಳಿವೆ. ಇಲ್ಲಿಯೂ ಕೂಡ ಖಾಸಗಿ ಸಂಸ್ಥೆಗಳ ಪ್ರಾಬಲ್ಯವೇ ಹೆಚ್ಚಿದೆ. ಎಲ್ಲ ಕಡೆಗಳಲ್ಲಿ ಒಂದೇ ರೀತಿಯ ಶುಲ್ಕ ಪಡೆಯುತ್ತಿಲ್ಲ. ಹೀಗಾಗಿ ಸರ್ಕಾರಿ ಸ್ಕ್ಯಾನಿಂಗ್‌ ಸೆಂಟರ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳ ಹಳೆಯದು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಖಾಸಗಿ ಸೆಂಟರ್‌ಗಳಲ್ಲಿ 195 ಸರ್ಕಾರಿ ಕೇಂದ್ರಗಳಲ್ಲಿ 13 ಒಳಗೊಂಡಂತೆ 208 ಸ್ಕ್ಯಾನಿಂಗ್‌ ಯಂತ್ರಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.