ADVERTISEMENT

ತುಮಕೂರು: ಎಸ್‌ಪಿ ಕಚೇರಿಯೇ ಸೀಲ್‌ಡೌನ್

ಒಂದೇ ದಿನ 25 ಮಂದಿಗೆ ಕೊರೊನಾ, 14ಕ್ಕೆ ಹೆಚ್ಚಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 14:56 IST
Last Updated 12 ಜುಲೈ 2020, 14:56 IST
ತುಮಕೂರು ಎಸ್ಪಿ ಕಚೇರಿ ಸೀಲ್ ಡೌನ್
ತುಮಕೂರು ಎಸ್ಪಿ ಕಚೇರಿ ಸೀಲ್ ಡೌನ್   

ತುಮಕೂರು: ಜಿಲ್ಲೆಯಲ್ಲಿ ಭಾನುವಾರ 3 ಮಂದಿ ಗರ್ಭಿಣಿಯರು ಸೇರಿದಂತೆ 25 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಬ್ಬರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 478ಕ್ಕೆ ಹಾಗೂ ಮೃತರ ಸಂಖ್ಯೆ 14ಕ್ಕೆ ಏರಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು ಎರಡು ದಿನ ಎಸ್‌ಪಿ ಕಚೇರಿ ಸೀಲ್‌ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಂದೇ ದಿನ 3 ಮಂದಿ ಗರ್ಭಿಣಿಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು. ಇನ್ನೂ ರೋಗಲಕ್ಷಣವಿದ್ದ 11 ಮಂದಿಗೆ ಹಾಗೂ ರೋಗಲಕ್ಷಣ ಇಲ್ಲದ 11 ಮಂದಿಗೆ ಸೋಂಕು ತಗುಲಿದೆ.

ಎಸ್ಪಿ ಕಚೇರಿಯ 37 ವರ್ಷದ ಸಿಬ್ಬಂದಿಗೆ ಸೋಂಕು ತಗುಲಿದೆ. ಉಳಿದಂತೆ ಕೆಎಸ್‌ಆರ್‌ಪಿಯ 32 ಹಾಗೂ 33 ವರ್ಷದ ಸಿಬ್ಬಂದಿ, ನಗರದ ಸರಸ್ವತಿಪುರಂನ 51 ವರ್ಷದ ವ್ಯಕ್ತಿಗೆ, ಟಿಪ್ಪುನಗರದ 67 ವರ್ಷದ ವ್ಯಕ್ತಿಗೆ, ಎಸ್‌ಐಟಿ ಬಡಾವಣೆಯ 64 ವರ್ಷದ ವ್ಯಕ್ತಿಗೆ, ಎಸ್‌ಐಟಿ ಬಡಾವಣೆಯ 48 ವರ್ಷದ ಮಹಿಳೆಗೆ, ವೀರಸಾಗರ ನಗರಸಭೆ ಕಚೇರಿಯ 20 ವರ್ಷದ ಯುವಕನಿಗೆ, ಸಪ್ತಗಿರಿ ಬಡಾವಣೆಯ 64 ವರ್ಷದ ವ್ಯಕ್ತಿಗೆ, ಎಸ್‌ಐಟಿ ಬಡಾವಣೆಯ 20 ವರ್ಷದ ಯುವಕನಿಗೆ, ಶಿರಾಗೇಟ್‌ನ 19 ವರ್ಷದ ಯುವಕನಿಗೆ ಸೋಂಕು ತಗುಲಿದೆ.

ADVERTISEMENT

ಭಾನುವಾರ ಸೋಂಕಿತರ ಪ್ರಾಥಮಿಕ ಸಂರ್ಪಕ್ಕಕ್ಕೆ ಬಂದ 3 ಮಂದಿಗೆ ಮಾತ್ರವೇ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದಂತೆ ಉಳಿದ 22 ಮಂದಿಗೆ ಸೋಂಕು ಹೇಗೆ ತಗುಲಿದೆ ಇವರ ಸಂಪರ್ಕಕ್ಕೆ ಯಾರೆಲ್ಲಾ ಬಂದಿದ್ದಾರೆ ಎಂದು ತಿಳಿದು ಬಂದಿಲ್ಲ. ಇದು ಸಹಜವಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಬಗ್ಗೆ ಪುಷ್ಠಿ ನೀಡಿದೆ.

ಮಧುಗಿರಿ ಮಹಿಳೆ ಸಾವು

ಮಧುಗಿರಿ ನಗರದ 60 ವರ್ಷದ ಮಹಿಳೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಭಾನುವಾರ ಬಂದ ವರದಿಯಲ್ಲಿ ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರ ಪ್ರಯಾಣದ ಮಾಹಿತಿ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚಲಾಗುತ್ತಿದೆ.

ಒಂದೇ ದಿನ 20 ಮಂದಿ ಮನೆಗೆ

ಜಿಲ್ಲೆಯಲ್ಲಿ ಈವರೆಗೆ 478 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ 126 ಮಂದಿ ಸೋಂಕಿತರು ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಮನೆಗಳಿಗೆ ಮರಳಿದ್ದಾರೆ.. ಭಾನುವಾರ ಒಂದೇ ದಿನ 20 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 24,148 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 19,893 ವರದಿಗಳು ನೆಗೆಟಿವ್ ಬಂದಿವೆ.

ತಾಲ್ಲೂಕು ಇಂದಿನ ಸೋಂಕಿತರು (ಜು.12) ಒಟ್ಟು ಸೋಂಕಿತರು ಮರಣ
ಚಿ.ನಾ.ಹಳ್ಳಿ; 0 10 0
ಗುಬ್ಬಿ; 0 24 0
ಕೊರಟಗೆರೆ; 1 24 1
ಕುಣಿಗಲ್; 2 22 1
ಮಧುಗಿರಿ; 1 30 1
ಪಾವಗಡ; 3 31 0
ಶಿರಾ; 0 27 1
ತಿಪಟೂರು; 0 11 0
ತುಮಕೂರು; 11 66 10
ತುರುವೇಕೆರೆ; 7 7 0
ಒಟ್ಟು; 25 478 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.