ADVERTISEMENT

ತುಮಕೂರು | ಟ್ಯಾಂಕರ್ ನೀರು: ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪರಮೇಶ್ವರ ಕಿಡಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 6:16 IST
Last Updated 15 ಫೆಬ್ರುವರಿ 2026, 6:16 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ನಗರದಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದರು.

ADVERTISEMENT

ನಗರ ಪ್ರದೇಶಗಳಲ್ಲಿ ಈಗಾಗಲೇ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವುದು ಸರಿಯಲ್ಲ. ಈವರೆಗೆ ನೀರು ಸಂಗ್ರಹಕ್ಕೆ ನಗರಾಡಳಿತದಿಂದ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ನೀರು ಸಂಗ್ರಹಕ್ಕೆ ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದು ಈಗ ಸಂಕಷ್ಟ ತಂದೊಡ್ಡಿದೆ. ಬೇಸಿಗೆ ಬಂದ ಕೂಡಲೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಎಂಬ ಉತ್ತರ ಬರುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳ ನಿಧಾನ ಧೋರಣೆಯಿಂದ ನೀರು ಸಂಗ್ರಹಕ್ಕೆ ಸಂಬಂಧಿಸಿದ ಕಾಮಗಾರಿಗಳು ವಿಳಂಬವಾಗಿವೆ. ಸಾರ್ವಜನಿಕರಿಂದ ಸಮಸ್ಯೆ ಹಾಗೂ ದೂರುಗಳು ಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು. ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಬೇಸಿಗೆ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ, ಜಾತ್ರೆ ಆಚರಿಸಲಾಗುತ್ತದೆ. ಯಾವುದೇ ಜಾತ್ರೆ, ಹಬ್ಬ ಆಚರಿಸಲು ಸ್ಥಳೀಯ ಆಡಳಿತದಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅನುಮತಿ ಇಲ್ಲದೆ ನಡೆದ ಜಾತ್ರೆಯಲ್ಲಿ ಏನಾದರೂ ಸಮಸ್ಯೆಗಳಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.