ADVERTISEMENT

ತುಮಕೂರು | ಭವಿಷ್ಯದ ಬಗ್ಗೆ ಹತಾಶೆ ಬೇಡ: ಡಾ.ಸಿ.ಆರ್.ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:44 IST
Last Updated 5 ಸೆಪ್ಟೆಂಬರ್ 2025, 5:44 IST
ತುಮಕೂರು ವಿ.ವಿಯಲ್ಲಿ ಬುಧವಾರ ನಡೆದ ಪ್ರೇರಣಾ ಉಪನ್ಯಾಸವನ್ನು ಜಪಾನಂದ ಸ್ವಾಮೀಜಿ ಉದ್ಘಾಟಿಸಿದರು. ಡಾ.ಸಿ.ಆರ್.ಚಂದ್ರಶೇಖರ್, ಪ್ರೊ.ಎಂ.ವೆಂಕಟೇಶ್ವರಲು, ಪ್ರೊ.ಎನ್.ಸತೀಶ್ ಗೌಡ, ಪ್ರೊ.ಬಿ.ರವೀಂದ್ರ ಕುಮಾರ್, ಪ್ರೊ.ಎಸ್.ಶ್ರೀನಿವಾಸ್ ಉಪಸ್ಥಿತರಿದ್ದರು
ತುಮಕೂರು ವಿ.ವಿಯಲ್ಲಿ ಬುಧವಾರ ನಡೆದ ಪ್ರೇರಣಾ ಉಪನ್ಯಾಸವನ್ನು ಜಪಾನಂದ ಸ್ವಾಮೀಜಿ ಉದ್ಘಾಟಿಸಿದರು. ಡಾ.ಸಿ.ಆರ್.ಚಂದ್ರಶೇಖರ್, ಪ್ರೊ.ಎಂ.ವೆಂಕಟೇಶ್ವರಲು, ಪ್ರೊ.ಎನ್.ಸತೀಶ್ ಗೌಡ, ಪ್ರೊ.ಬಿ.ರವೀಂದ್ರ ಕುಮಾರ್, ಪ್ರೊ.ಎಸ್.ಶ್ರೀನಿವಾಸ್ ಉಪಸ್ಥಿತರಿದ್ದರು   

ತುಮಕೂರು: ಭವಿಷ್ಯದ ಬಗ್ಗೆ ಹತಾಶೆ ತಳೆದು ಸಾಕಷ್ಟು ಮಂದಿ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹತಾಶೆ ಬಿಟ್ಟು ಉತ್ಸಾಹದಿಂದ ಜೀವನ ಅನುಭವಿಸುವಂತೆ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ ಮಾಡಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯುವಜನತೆ ಮತ್ತು ಮಾನಸಿಕ ಆರೋಗ್ಯ’ ಕುರಿತು ಮಾತನಾಡಿದರು.

ಯುವಕರು ಆತ್ಮಹತ್ಯೆಯ ಯೋಚನೆ ಬಂದಾಗ ಹೆತ್ತವರ ಶ್ರಮವನ್ನು ನೆನಪಿಸಿಕೊಳ್ಳಬೇಕು. ಸಮಸ್ಯೆಗಳು ಎದುರಾದಾಗ ಪರಿಹಾರದ ಬಗ್ಗೆ ಯೋಚಿಸಬೇಕು. ಸರಿಯಾದ ಪ್ರಯತ್ನ, ದೃಢ ನಿರ್ಧಾರದಿಂದ ಯಶಸ್ಸು ಕಾಣಬಹುದು. ಇತರರನ್ನು ಅನುಸರಿಸುವ ಬದಲು ನಿಮ್ಮ ವ್ಯಕ್ತಿತ್ವವನ್ನು ನೀವೇ ರೂಪಿಸಿಕೊಳ್ಳಬೇಕು. ಇನ್ನೊಬ್ಬರ ನೆರವಿಗಾಗಿ ಕಾಯದೆ ಸ್ವಸಾಮರ್ಥ್ಯದಿಂದ ಬದುಕು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

‘ಮನರಂಜನೆಗಾಗಿ ಮೊಬೈಲ್ ಬಳಸುವ ಬದಲು, ವಿದ್ಯಾಭ್ಯಾಸ, ಜ್ಞಾನಾರ್ಜನೆಗೆ ಬಳಸಿಕೊಳ್ಳಬಹುದು. ಅತಿಯಾದ ಮೊಬೈಲ್ ಬಳಕೆ ಕಡಿಮೆ ಮಾಡಿ, ಸ್ನೇಹಿತರೊಂದಿಗೆ ಮುಖಾಮುಖಿ ಸಂವಹನ ಬೆಳೆಸಿಕೊಳ್ಳಿ. ದ್ವೇಷ, ದುಃಖ, ಕೋಪ, ಭಯದಂತಹ ನಕಾರಾತ್ಮಕ ಭಾವನೆಗಳನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಪ್ರೀತಿ ಹಂಚಿ, ಸ್ನೇಹ ಪಡೆದರೆ ಹತಾಶೆಯಿಂದ ದೂರ ಇರಬಹುದು’ ಎಂದು ತಿಳಿಸಿದರು.

ಪದವಿ ಪಡೆದರೂ ಸಾಮಾನ್ಯ ಜ್ಞಾನ, ಕೌಶಲಗಳ ಕೊರತೆ ಇರುತ್ತದೆ. ಇದರಿಂದ ಉದ್ಯೋಗ ಸಂದರ್ಶನಗಳಲ್ಲಿ ವಿಫಲರಾಗುತ್ತಿದ್ದಾರೆ. ಕಾರಣವನ್ನು ಅರ್ಥಮಾಡಿಕೊಂಡು, ಸರಿಪಡಿಸಿಕೊಳ್ಳದೆ ತಮಗೆ ಭವಿಷ್ಯವಿಲ್ಲವೆಂದು ಕೊರಗುವುದರಲ್ಲಿ ಅರ್ಥವಿಲ್ಲ ಎಂದರು.

ಪಾವಗಡದ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ, ‘ವಿದ್ಯಾರ್ಥಿಗಳು ಇತರರನ್ನು ಅನುಸರಿಸುತ್ತ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಸ್ವಂತಿಕೆ, ದೃಢ ಸಂಕಲ್ಪದಿಂದ ಮುನ್ನಡೆಯಬೇಕು’ ಎಂದು ಹೇಳಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಸತೀಶ್ ಗೌಡ, ಪ್ರೇರಣಾ ಉಪನ್ಯಾಸ ಸಮಿತಿ ಅಧ್ಯಕ್ಷ ಪ್ರೊ.ಬಿ.ರವೀಂದ್ರ ಕುಮಾರ್, ವಿ.ವಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್.ಶ್ರೀನಿವಾಸ್ ಉಪಸ್ಥಿತರಿದ್ದರು. ಸಿಬಂತಿ ಪದ್ಮನಾಭ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.