ADVERTISEMENT

ತುಮಕೂರು: ವಿಧಾನ ಪರಿಷತ್‌ ಚುನಾವಣೆ- ಅಭ್ಯರ್ಥಿಗಳಿಗೆ ಬಿಜೆಪಿ, ಜೆಡಿಎಸ್‌ ಶೋಧ

ಕೆ.ಜೆ.ಮರಿಯಪ್ಪ
Published 15 ನವೆಂಬರ್ 2021, 19:20 IST
Last Updated 15 ನವೆಂಬರ್ 2021, 19:20 IST
ಬಿ.ಸುರೇಶ್‌ ಗೌಡ
ಬಿ.ಸುರೇಶ್‌ ಗೌಡ   

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಂಗಳವಾರದಿಂದ ಆರಂಭವಾಗಲಿದ್ದು, ರಾಜಕೀಯ ಪಕ್ಷಗಳುಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದ್ದು, ಅವರು ಈಗಾಗಲೇ ಒಂದು ಸುತ್ತು ಪ್ರಚಾರ ಮುಗಿಸಿದ್ದಾರೆ. ಜೆಡಿಎಸ್, ಬಿಜೆಪಿಯಲ್ಲಿ ಅಭ್ಯರ್ಥಿಗಾಗಿ ಶೋಧ ಮುಂದುವರೆದಿದ್ದು, ಯಾರನ್ನು ನಿಲ್ಲಿಸಿದರೆ ‘ಬಲ’ ಬರಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದ್ದಂತಿಲ್ಲ. ಜೆಡಿಎಸ್, ಬಿಜೆಪಿಯಲ್ಲಿ ದಿನೇ ದಿನೇ ಗೊಂದಲ ಹೆಚ್ಚುತ್ತಿದೆ.

ಕೆಎಎಸ್ ಹಿರಿಯ ಅಧಿಕಾರಿ ಹಾಗೂ ಕೆಐಎಡಿಬಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅನಿಲ್ ಅವರನ್ನುರಾಜೀನಾಮೆ ಕೊಡಿಸಿ ಕಣಕ್ಕೆ ಇಳಿಸುವ ಪ್ರಯತ್ನದಲ್ಲಿ ಜೆಡಿಎಸ್ ಮುಖಂಡರು ತೊಡಗಿದ್ದಾರೆ. ಎರಡು ತಿಂಗಳ ಹಿಂದೆಯೇ ರಾಜೀನಾಮೆ ಕೊಡಿಸಿದ್ದು, ಇನ್ನು ಅಂಗೀಕಾರವಾಗಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದ್ದು, ಅಂಗೀಕರಿಸಿದರೆ ಸ್ಪರ್ಧಿಸಲಿದ್ದಾರೆ. ಈ ಪ್ರಯತ್ನದ ನಡುವೆಯೂ ಪರ್ಯಾಯ ಅಭ್ಯರ್ಥಿಗೆ ದಳಪತಿಗಳು ಹುಡುಕಾಟ ನಡೆಸಲಿದ್ದಾರೆ.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹಿಂದೆ ಕೆಲಸ ಮಾಡಿದ್ದ ಗೋವಿಂದರಾಜು ಅವರನ್ನು ಕರೆತರುವ ಪ್ರಯತ್ನ ಯಶಸ್ವಿಯಾಗಿಲ್ಲ. ಜಿಲ್ಲೆಯಲ್ಲಿ ಕೆಲಸ ಮಾಡಿದ ಅನುಭವ, ಹಳ್ಳಿಗಳ ಪರಿಚಯ, ಜನರ ಒಡನಾಟ ಇರುವುದರಿಂದ ಸ್ಪರ್ಧಿಸುವಂತೆ ಜೆಡಿಎಸ್ ವರಿಷ್ಠರು ಮಾಡಿದ ಮನವಿಗೆ ಅವರು ಸ್ಪಂದಿಸಿಲ್ಲ. ಬಿಜೆಪಿ ಸಹ ಇದೇ ರೀತಿ ಪ್ರಯತ್ನ ಮಾಡಿದ್ದು, ಅದಕ್ಕೂ ಅವರು ಒಪ್ಪಿಕೊಂಡಿಲ್ಲ.

ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಡಿ.ನಾಗರಾಜಯ್ಯ ಪುತ್ರ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ ಹೆಸರು ಸಹ ಮುಂಚೂಣಿಗೆ ಬಂದಿದೆ. ಮಾಜಿ ಶಾಸಕ ಎಚ್.ನಿಂಗಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜನಪ್ಪ ಟಿಕೆಟ್ ಕೇಳಿದ್ದಾರೆ. ಈಗ ಪ್ರಸ್ತಾಪವಾಗಿರುವ ಹೆಸರು ಬಿಟ್ಟು ಕೊನೆಗಳಿಗೆಯಲ್ಲಿ ಬೇರೊಬ್ಬರು ಅಭ್ಯರ್ಥಿಯಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಗೂ ಅಭ್ಯರ್ಥಿ ಬರ: ಬಿಜೆಪಿಗೂ ಸಮರ್ಥ ಅಭ್ಯರ್ಥಿ ಸಿಗದಾಗಿದೆ. ಕಾಂಗ್ರೆಸ್, ಜೆಡಿಎಸ್‌ನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದನ್ನು ನೋಡಿಕೊಂಡು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆಗೂ ಮೊದಲೇ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಕಳೆದ ಬಾರಿ ಸ್ಪರ್ಧಿಸಿ ಸೋತಿರುವ ಡಾ.ಎಂ.ಆರ್.ಹುಲಿನಾಯ್ಕರ್ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದರೂ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಒಲವು ತೋರಿಲ್ಲ. ಬದಲಿಗೆ ಅವರ ಪುತ್ರಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಅಂಬಿಕಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ.

ಇದರ ನಡುವೆ ಡಿ.ವಿ.ಸದಾನಂದಗೌಡ ಬೆಂಬಲಿಗ ಚೇತನ್,ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಬೆಂಬಲಿಗ ಅನಿಲ್, ಎಂ.ಟಿ.ಬಿ.ನಾಗರಾಜ್ ಪುತ್ರನ ಹೆಸರನ್ನು ತೇಲಿ ಬಿಡಲಾಗಿದೆ. ಜಿಲ್ಲೆ ಪ್ರತಿನಿಧಿಸುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿದೇಶ ಪ್ರವಾಸದಲ್ಲಿದ್ದು, ಮಂಗಳವಾರ ವಾಪಸಾದ ನಂತರ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸುರೇಶ್‌ಗೌಡ ಷರತ್ತು?

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರನ್ನು ಸ್ಪರ್ಧಿಸುವಂತೆ ವರಿಷ್ಠರು ಒತ್ತಡ ಹಾಕಿದ್ದಾರೆ. ಅವರು ಕೆಲವು ‘ಷರತ್ತು’ ಹಾಕಿದ್ದು, ಬೇಡಿಕೆ ಈಡೇರಿದರೆ ಸ್ಪರ್ಧೆಗೆ ಇಳಿಯಬಹುದು. ಪರಿಷತ್‌ಗೆ ಸ್ಪರ್ಧಿಸಿ ಆಯ್ಕೆಯಾದರೆ ಗ್ರಾಮಾಂತರ ಕ್ಷೇತ್ರ ಕೈತಪ್ಪಲಿದೆ ಎಂಬ ಆತಂಕದಲ್ಲಿ ಇದ್ದಾರೆ.

ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಪ್ರಯತ್ನಿಸಿ, ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಯಲಚವಾಡಿ ನಾಗರಾಜ್ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ, ವರಿಷ್ಠರು ಒಲವು ತೋರಿಸಿಲ್ಲ. ಕಾಂಗ್ರೆಸ್ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಕರೆತಂದು ನಿಲ್ಲಿಸುವ ಪ್ರಯತ್ನವೂ ಫಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.