ADVERTISEMENT

ಕೊರೊನಾ ಅಮ್ಮ ಪೂಜೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:02 IST
Last Updated 1 ಏಪ್ರಿಲ್ 2020, 13:02 IST
ತುರುವೇಕೆರೆ ತಾಲ್ಲೂಕಿನ ಮುದ್ದನಹಳ್ಳಿ ಹೊಸೂರಿನಲ್ಲಿ ಕೊರೊನಾ ಅಮ್ಮನ ಪೂಜೆ ಮಾಡಲಾಯಿತು
ತುರುವೇಕೆರೆ ತಾಲ್ಲೂಕಿನ ಮುದ್ದನಹಳ್ಳಿ ಹೊಸೂರಿನಲ್ಲಿ ಕೊರೊನಾ ಅಮ್ಮನ ಪೂಜೆ ಮಾಡಲಾಯಿತು   

ತುರುವೇಕೆರೆ: ಕೊರೊನಾ ಸೋಂಕಿನ ಭೀತಿ ನಗರ, ಪಟ್ಟಣವನ್ನು ದಾಟಿ ಗ್ರಾಮೀಣ ಪ್ರದೇಶವನ್ನೂ ಆವರಿಸಿದ್ದು, ತಾಲ್ಲೂಕಿನ ಬೇರೆಬೇರೆ ಗ್ರಾಮಸ್ಥರು ಪ್ಲೇಗ್‌ ಅಮ್ಮನಂತೆಯೇ ಕೊರೊನಾ ಮಾರಿಯನ್ನು ಸಾಗುಹಾಕುವ ಹಲವು ಆಚರಣೆಗಳನ್ನು ಮಾಡಲು ಮುಂದಾಗಿದ್ದಾರೆ.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಕುರುಬರಹಳ್ಳಿ ಬ್ಯಾಲದ ಗ್ರಾಮಸ್ಥರು ಪಿರೆಪಟ್ಟಣದಮ್ಮನಿಗೆ ಹಾಗೂ ಹೊರಗಿನಮ್ಮನಿಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಇದರ ಅಂಗವಾಗಿ ಊರಿನ ಬೀದಿಗಳನ್ನೆಲ್ಲಾ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ದೇವರಿಗೆ ತೊಂಬಿಟ್ಟಿನ ಆರತಿ ಮಾಡಿ ಪೂಜೆ ಸಲ್ಲಿಸಿದರು. ಯಾವುದೇ ದುಷ್ಟ ಶಕ್ತಿ ಗ್ರಾಮದೊಳಕ್ಕೆ ಬಾರದಿರಲೆಂದು ದೇವರಲ್ಲಿ ಮನವಿ ಮಾಡಿದರು.

ಇನ್ನು ಅಕ್ಕಳಸಂದ್ರ ಗೊಲ್ಲರಹಟ್ಟಿಯಲ್ಲಿ ಊರಿನ ಗಡಿಭಾಗದ ನಾಲ್ಕು ಕಡೆಗಳಲ್ಲಿನ ಕರಗಲ್ಲಿಗೆ ಹಣ್ಣು, ಹೂವು, ಕಾಯಿ, ಇಟ್ಟು ಪ್ಲೇಗಿನಮ್ಮನನ್ನು ಊರಿನ ಸುತ್ತ ವಾದ್ಯದೊಂದಿಗೆ ಮೆರವಣಿಗೆ ಮಾಡಿಸಿ ಕರಗಲ್ಲುಗೆ ಪೂಜೆ ಸಲ್ಲಿಸಿದರು. ನಂತರ ಶಾಂತಿಮುನಿಯನ್ನೂ ಆಚರಣೆ ಮಾಡಿದರು.

ADVERTISEMENT

‘ಹಿಂದೆ ಪ್ಲೇಗ್‌ನಂತಹ ಸಾಂಕ್ರಾಮಿಕ ರೋಗ ಜನರನ್ನು ಬಾಧಿಸಿತ್ತು. ಈಗ ಕೊರೊನಾ ಮಾರಿ ಎಲ್ಲರಲ್ಲಿಯೂ ಭಯಭೀತಿ ಹುಟ್ಟಿಸುತ್ತಿದೆ. ಹಾಗಾಗಿ ಗ್ರಾಮಸ್ಥರೆಲ್ಲ ಸೇರಿ ಕೊರೊನಾ ಹೆಮ್ಮಾರಿಯನ್ನು ಸಾಗಾಕಲು ಪೂಜೆ ಮಾಡಲಾಗುತ್ತಿದೆ’ ಎಂದು ಗ್ರಾಮದ ಹಾಲೇಗೌಡ ತಿಳಿಸಿದರು.

ಅದೇ ರೀತಿ ಮುದ್ದನಹಳ್ಳಿ ಹೊಸೂರಿನಲ್ಲಿ ಕೊರೊನಾ ಅಮ್ಮನ ಪೂಜೆ ಹಮ್ಮಿಕೊಂಡು ಮುತ್ತೈದೆಯರು ಊರಿನ ದೊಡ್ಡಮ್ಮನಿಗೆ ಆರತಿ ಪೂಜೆ ಸಲ್ಲಿಸಿದರು. ಹೀಗೆ ತಾಲ್ಲೂಕಿನ ಹಲವೆಡೆ ಕೊರೊನಾ ಸೋಂಕು ಸಾಗುಹಾಕುವ ಪೂಜೆಗಳನ್ನು ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.