ADVERTISEMENT

ಮೇಯರ್, ಆಯುಕ್ತರ ನಡುವೆ ಶೀತಲ ಸಮರ

ಕರೆ ಸ್ವೀಕರಿಸಿದ ಆಯುಕ್ತರು; ಕೊರೊನಾ ನೆಪ ಹೇಳಿ ಕೆಲಸ ಮಾಡದ ಅಧಿಕಾರಿಗಳು; ಆರೋಪ

​ಪ್ರಜಾವಾಣಿ ವಾರ್ತೆ
Published 28 ಮೇ 2020, 17:13 IST
Last Updated 28 ಮೇ 2020, 17:13 IST
ಫರೀದಾ ಬೇಗಂ
ಫರೀದಾ ಬೇಗಂ   

ತುಮಕೂರು: ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಹಾಗೂ ಮೇಯರ್ ಫರೀದಾಬೇಗಂ ಹಾಗೂ ಕೆಲವು ಸದಸ್ಯರ ನಡುವಿನ ಜಟಾಪಟಿ ಬೀದಿಗೆ ಬಂದಿದೆ. ಇಬ್ಬರ ನಡುವಿನ ಶೀತಲ ಸಮರದಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ.

ಹಿಂದಿನಿಂದಲೂ ಮೇಯರ್, ಕೆಲ ಸದಸ್ಯರು ಹಾಗೂ ಆಯುಕ್ತರ ನಡುವೆ ಶೀತಲ ಸಮರವಿತ್ತು. ಕೆಲ ವೇಳೆ ಅದು ಬಹಿರಂಗಗೊಳ್ಳುತ್ತಿತ್ತು. ಈ ಹಿಂದಿನ ಮೇಯರ್ ಲಲಿತಾ ರವೀಶ್ ಹಾಗೂ ಆಯುಕ್ತರ ನಡುವೆ ನಡೆಯುತ್ತಿದ್ದ ಜಟಾಪಟಿ ಮತ್ತೆ ಈಗ ಮುಂದುವರಿದಿದೆ.

ಗುರುವಾರ ಸುದ್ದಿಗೋಷ್ಠಿ ನಡೆಸಿದ ಮೇಯರ್ ಫರೀದಾಬೇಗಂ ‘ಆಯುಕ್ತರು ಪಾಲಿಕೆಯಲ್ಲಿ ಹೆಚ್ಚು ಕೆಲಸ ಮಾಡುತ್ತಿಲ್ಲ. ಇದರಿಂದ ಕೆಳಹಂತದ ಅಧಿಕಾರಿಗಳು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪಾಲಿಕೆ ಆಡಳಿತ ಸರಾಗವಾಗಿ ನಡೆಯುತ್ತಿಲ್ಲ’ ಎಂದು ಗಂಭೀರ ಆರೋಪ ಮಾಡಿದರು.

ADVERTISEMENT

‘ಕೊಳೆಗೇರಿಗಳಲ್ಲಿ ಯುಜಿಡಿ ಕೆಲಸ ನಡೆಯುತ್ತಿಲ್ಲ. ಮೇಯರ್ ಆದ ನಾನೇ ಕರೆ ಮಾಡಿದರೂ ಆಯುಕ್ತರು ಪ್ರತಿಕ್ರಿಯಿಸುವುದಿಲ್ಲ. ಸದಸ್ಯರು ಸಂಪರ್ಕಿಸಿದರೂ ಸಿಗುತ್ತಿಲ್ಲ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಆಡಳಿತ ನಿರ್ವಹಿಸುವುದು ಹೇಗೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಾಗೂ ಆಯುಕ್ತರು ಸ್ಮಾರ್ಟ್ ಸಿಟಿ ಕೆಲಸ ಎನ್ನುತ್ತಾರೆ. ಅಧಿಕಾರಿಗಳು ಕೊರೊನಾ ಕಾರಣ ಹೇಳಿ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಸದಸ್ಯರನ್ನು ಕೊರೊನಾ ಹೆಸರು ಹೇಳಿ ಯಾಮಾರಿಸುತ್ತಿದ್ದಾರೆ. ಇದರಿಂದ ಕೆಲಸ ಮಾಡಲು ಆಗುತ್ತಿಲ್ಲ. ನಗರದಲ್ಲಿ ಸೀಲ್‍ಡೌನ್ ಆಗಿರುವ ಪ್ರದೇಶಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ. ಆ ಪ್ರದೇಶಗಳಲ್ಲಿ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಅಲ್ಲಿರುವವರಿಗೆ ಕನಿಷ್ಠ ಊಟ ಪೂರೈಸಿಲ್ಲ ಎಂದು ದೂರಿದರು.

ಸೀಲ್‍ಡೌನ್ ಪ್ರದೇಶದಲ್ಲಿ ವಾಸಿಸುವವರಿಗೆ ದುಡಿಮೆ ಇಲ್ಲ. ಅಲ್ಲಿರುವವರಿಗೆ ಅಗತ್ಯ ಸೌಲಭ್ಯಗಳನ್ನು ನೀಡದಿದ್ದರೆ ಜೀವನ ನಡೆಸುವುದು ಹೇಗೆ? ದುಡಿಮೆ ಇಲ್ಲದ ಮೇಲೆ ಜನರು ಬದುಕುವುದು ಹೇಗೆ? ಜನಪ್ರತಿನಿಧಿಗಳ ಮೇಲೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಕುಮಾರ್, ‘ಈ ಹಿಂದೆ ಚೆನ್ನಾಗಿ ಕೆಲಸ ಮಾಡುತ್ತಿದ್ದ ಆಯುಕ್ತರು ಈಗ ಬದಲಾಗಿದ್ದಾರೆ. ಕನಿಷ್ಠ ದೂರವಾಣಿ ಕರೆಯನ್ನೂ ಸ್ವೀಕರಿಸುವುದಿಲ್ಲ’ ಎಂದರು.

ಉಪಮೇಯರ್ ಶಶಿಕಲಾ, ಸದಸ್ಯರಾದ ಮಹೇಶ್, ಕುಮಾರ್, ಇನಾಯತ್‍ವುಲ್ಲಾಖಾನ್, ಮಲ್ಲಿಕಾರ್ಜುನ್, ವಿಷ್ಣುವರ್ಧನ್ ಇದ್ದರು.

ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಲಿ

‘ನಾನು ಕಚೇರಿಗೆ ಹೋಗುತ್ತೇನೋ ಇಲ್ಲವೊ ಎನ್ನುವುದನ್ನು ಕಚೇರಿಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಪರಿಶೀಲಿಸಲಿ. ನನ್ನ ಕೆಲಸವನ್ನು ನಾಗರಿಕರು ಗಮನಿಸುತ್ತಿದ್ದಾರೆ’ ಎಂದು ಆಯಕ್ತ ಟಿ.ಭೂಬಾಲನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯಗಳಿವೆ. ಅವುಗಳಿಗೆ ಭೇಟಿ ನೀಡಬೇಕಿದೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೊ ಕಾನ್ಫರೆನ್ಸ್, ಸಭೆಗಳು ಹೀಗೆ ವಿವಿಧ ಕೆಲಸಗಳು ಇರುತ್ತವೆ. ಇಡೀ ದಿನ ಕಚೇರಿಯಲ್ಲಿಯೇ ಕುಳಿತು ಕೆಲಸ ಮಾಡಲು ಸಾಧ್ಯವಿಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡುವುದು ನನ್ನ ಕೆಲಸವಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಎಲ್ಲ ಕಡತಗಳನ್ನೂ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಿದ್ದೇನೆ. ಯಾವುದೂ ಬಾಕಿ ಉಳಿದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.