ತುಮಕೂರು: ಕೀಡಾಕೂಟದಲ್ಲೂ ಮೋಸದಾಟ ಮುಂದುವರೆದಿದ್ದರೂ, ಎಲ್ಲರೂ ನೋಡಿಕೊಂಡು ಕಣ್ಣು ಕಾಣಿಸದಂತೆ, ಕಿವಿ ಕೇಳಿಸದಂತೆ ಕುಳಿತಿದ್ದಾರೆ. ಅನರ್ಹರಿಗೆ ಪ್ರಶಸ್ತಿ ಪಟ್ಟ ಕಟ್ಟಲಾಗುತ್ತಿದೆ. ಕ್ರೀಡಾ ಕ್ಷೇತ್ರಕ್ಕೂ ವಂಚನೆ ಕಾಲಿಟ್ಟಿರುವುದು ಕ್ರೀಡಾ ಪ್ರೇಮಿಗಳನ್ನು ಆತಂಕಕ್ಕೆ ದೂಡಿದೆ.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅನರ್ಹರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ ನಗರದಲ್ಲಿ ನಡೆಯುತ್ತಿರುವ ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲೂ ಅಂತಹುದೇ ಎಡವಟ್ಟು ಮಾಡಲಾಗಿದೆ. ಇದೇನು ಗೊತ್ತಿದ್ದೂ ನಡೆಯುತ್ತಿದೆಯೇ? ಎಂಬ ಅನುಮಾನ ಹುಟ್ಟು ಹಾಕಿದೆ.
ಜಿಲ್ಲಾ ಹಾಗೂ ಬೆಂಗಳೂರು ವಿಭಾಗ ಮಟ್ಟದಲ್ಲಿ ನಡೆದ 1,500 ಮೀಟರ್, 5 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸದೇ ಇರುವ ಕ್ರೀಡಾಪಟುಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಪುರುಷರ ವಿಭಾಗದಲ್ಲಿ ರಘುವೀರ್ 1,500 ಮೀಟರ್ ಓಟದಲ್ಲಿ ದ್ವಿತೀಯ ಮತ್ತು 5 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಫಲಿತಾಂಶದ ಪಟ್ಟಿಯಲ್ಲಿ ಇವರ ಹೆಸರೇ ಕಾಣೆಯಾಗಿದೆ. ಇವರ ಬದಲಾಗಿ ಕ್ರಮವಾಗಿ ಎಚ್.ವಿ.ದರ್ಶನ್ ಮತ್ತು ಚಿರೇಶ್‌ಗೌಡ ಹೆಸರು ಸೇರಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸದವರ ಹೆಸರನ್ನು ವಿಜೇತರ ಪಟ್ಟಿಯಲ್ಲಿ ಸೇರಿಸಿ ಚಮತ್ಕಾರ ಮೆರೆದಿದ್ದಾರೆ!
ಜಿಲ್ಲಾ ಮಟ್ಟದಲ್ಲೂ: ಗುರುಪ್ರಸಾದ್ ಜಿಲ್ಲಾ ಮಟ್ಟದ ಕ್ರೀಡಾಕೂಟದ 1,500 ಮೀಟರ್, 5 ಸಾವಿರ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಮತ್ತೊಬ್ಬ ಕ್ರೀಡಾಪಟು ಟಿ.ಎಸ್.ಸಂದೀಪ್ 5 ಸಾವಿರ ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಈ ಇಬ್ಬರು ತಾಲ್ಲೂಕು ಮಟ್ಟದ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. ನೇರವಾಗಿ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಮೂಲಕ ಸಂಘಟಕರು ಎಡವಟ್ಟು ಮಾಡಿದ್ದರು. ನಂತರ ಸರಿಪಡಿಸಿದ್ದರು.
ಅವ್ಯವಸ್ಥೆ: ಕ್ರೀಡಾಕೂಟದಲ್ಲಿನ ಅವ್ಯವಸ್ಥೆ ಹೇಳತೀರದಾಗಿದೆ. ಕ್ರೀಡಾಕೂಟ ನಡೆಸಲು ಸಾಕಷ್ಟು ಅನುದಾನ ಬಿಡುಗಡೆಯಾಗುತ್ತದೆ. ಆದರೆ ಇಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ ಶೌಚಾಲಯ ಸ್ವಚ್ಛವಾಗಿಲ್ಲ. ಊಟದ ವ್ಯವಸ್ಥೆಯೂ ಸರಿಯಾಗಿಲ್ಲ. ಚಿತ್ರಾನ್ನ, ಪುಲಾವ್ ಕೊಟ್ಟು ಸುಮ್ಮನಾಗುತ್ತಾರೆ ಎಂದು ಕ್ರೀಡಾಪಟುಗಳು ದೂರಿದರು.
‘ವಿವಿಧ ಕ್ರೀಡೆಗಳನ್ನು ನಡೆಸಲು ಬೇಕಾದ ತರಬೇತುದಾರರೇ ಇಲ್ಲ. ಕ್ರೀಡಾಂಗಣ ಚೆನ್ನಾಗಿದೆ ಎಂಬುದನ್ನು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಇಲ್ಲ. ವಿಭಾಗೀಯ ಮಟ್ಟದ ಕ್ರೀಡಾಕೂಟ ನಡೆಸಲು ಅಗತ್ಯ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ’ ಎಂದು ಕ್ರೀಡಾಕೂಟದಲ್ಲಿ ಭಾಗವಹಿಸಿದವರು ಆಕ್ರೋಶ ವ್ಯಕ್ತಪಡಿಸಿದರು.
‘ಒಂದು ಕ್ರೀಡಾಕೂಟ ನಡೆಸಲು ಆಗದಿದ್ದರೆ ಹೇಗೆ? ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಜಿಲ್ಲಾ ಮಟ್ಟದ ಕ್ರೀಡಾಕೂಟದ ವೇಳೆಯೂ ಇದೇ ರೀತಿಯಾಗಿತ್ತು. ಇನ್ನು ಸರಿ ಹೋಗಿಲ್ಲ. ಅನರ್ಹರನ್ನು ಆಯ್ಕೆ ಮಾಡುವ ಪ್ರವೃತ್ತಿ ಕೊನೆಗಾಣಬೇಕು’ ಎಂದು ಕ್ರೀಡಾಪಟುವೊಬ್ಬರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.