ADVERTISEMENT

ತುಮಕೂರು | ಡಿಸಿಸಿ ಬ್ಯಾಂಕ್‌: ಸೊನ್ನೆ ಸುತ್ತಿದ ಶ್ರೀನಿವಾಸ್‌

ಮತ್ತೊಮ್ಮೆ ಡಿಸಿಸಿ ಬ್ಯಾಂಕ್‌ ಅಧಿಪತ್ಯ ಸಾಧಿಸಿದ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 3:57 IST
Last Updated 25 ಆಗಸ್ಟ್ 2025, 3:57 IST
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನೂತನ ನಿರ್ದೇಶಕರು
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನೂತನ ನಿರ್ದೇಶಕರು   

ತುಮಕೂರು: ಮಾಜಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ‘ಮಿತ್ರಕೂಟ’ ಮತ್ತೊಮ್ಮೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಡಿಸಿಸಿ) ಚುಕ್ಕಾಣಿ ಹಿಡಿದಿದೆ. ರಾಜಣ್ಣ ವಿರುದ್ಧ ತೊಡೆತಟ್ಟಿದ್ದ ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಬೆಂಬಲಿಗ ಅಭ್ಯರ್ಥಿ ಸೊನ್ನೆ ಸುತ್ತಿದ್ದು, ಕನಿಷ್ಠ ಒಂದು ಮತವನ್ನೂ ಕೊಡಿಸಲು ಸಾಧ್ಯವಾಗಿಲ್ಲ.

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ತಿಪಟೂರು ತಾಲ್ಲೂಕಿನಿಂದ ಶಾಸಕ ಕೆ.ಷಡಕ್ಷರಿ, ಪಾವಗಡದಿಂದ ಶಾಸಕ ಎಚ್‌.ವಿ.ವೆಂಕಟೇಶ್‌, ಶಿರಾ– ಜಿ.ಎಸ್.ರವಿ, ಚಿಕ್ಕನಾಯಕನಹಳ್ಳಿ– ಎಸ್.ಆರ್.ರಾಜಕುಮಾರ (ಸಿಂಗದಹಳ್ಳಿ ರಾಜಕುಮಾರ), ಗುಬ್ಬಿ– ಎಚ್.ಸಿ.ಪ್ರಭಾಕರ್, ಕುಣಿಗಲ್– ಬಿ.ಶಿವಣ್ಣ ವಿಜೇತರಾಗಿದ್ದಾರೆ.

ರಾಜಣ್ಣ ಯಾರ ವಿರೋಧವೂ ಇಲ್ಲದೆ ಸತತವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಪ್ರತಿ ಬಾರಿ ಅವಿರೋಧವಾಗಿ ಆಯ್ಕೆ ಆಗುವಂತೆ ಕಾರ್ಯತಂತ್ರ ರೂಪಿಸುತ್ತಿದ್ದರು. ಈ ಸಲವೂ ಪ್ರಯತ್ನ ನಡೆಸಿದ್ದರು. ಇದಕ್ಕೆ ಶ್ರೀನಿವಾಸ್‌ ಅಡ್ಡಗಾಲು ಹಾಕಿದ್ದರು. ತಮ್ಮ ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನ ತಪ್ಪಿಸಿದರು ಎಂಬ ಕಾರಣಕ್ಕೆ ರಾಜಣ್ಣ ವಿರುದ್ಧ ತೊಡೆತಟ್ಟಿ ನಿಂತಿದ್ದರು. ಗುಬ್ಬಿ ತಾಲ್ಲೂಕಿನಿಂದ ಮಧುಸೂದನ ಅವರನ್ನು ಕಣಕ್ಕಿಳಿಸಿದ್ದರು.

ADVERTISEMENT

ಗುಬ್ಬಿಯ ಹಾಲಿ ನಿರ್ದೇಶಕ ಎಚ್.ಸಿ.ಪ್ರಭಾಕರ್ ತಾಲ್ಲೂಕಿನ ಎಲ್ಲ 21 ಮತ ಪಡೆದು ಗೆಲುವಿನ ಕೇಕೆ ಹಾಕಿದ್ದಾರೆ. ಶ್ರೀನಿವಾಸ್‌ ತೀವ್ರ ಮುಖಭಂಗ ಅನುಭವಿಸಿದ್ದಾರೆ. ರಾಜಣ್ಣ ಸಹಕಾರ ಕ್ಷೇತ್ರದಲ್ಲಿ ತಮ್ಮ ಹಿಡಿತ ತಪ್ಪದಂತೆ ಎಚ್ಚರ ವಹಿಸಿದ್ದಾರೆ. 14 ಸ್ಥಾನಗಳಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನ ಇಬ್ಬರು ಶಾಸಕರು ಗೆಲುವು ದಾಖಲಿಸಿದರು. ಪಾವಗಡದಿಂದ ಎಚ್‌.ವಿ.ವೆಂಕಟೇಶ್‌ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಬ್ಯಾಂಕ್‌ ಪ್ರವೇಶಿಸಿದರು. ತಿಪಟೂರಿನಿಂದ ಕೆ.ಷಡಕ್ಷರಿ ಮತ್ತೊಮ್ಮೆ ಚುನಾಯಿತರಾದರು. ಚಿಕ್ಕನಾಯಕನಹಳ್ಳಿಯ ಹಾಲಿ ನಿರ್ದೇಶಕ ಎಸ್.ಆರ್.ರಾಜಕುಮಾರ ಎದುರು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಆಪ್ತ ವೈ.ಎಸ್.ನಂಜೇಗೌಡ ಕಣಕ್ಕೆ ಇಳಿದಿದ್ದರು. 16 ಮತ ಪಡೆದು ರಾಜಕುಮಾರ ಗೆಲುವು ಸಾಧಿಸಿದರು.

ಶಿರಾ ತಾಲ್ಲೂಕಿನ ನಿರ್ದೇಶಕರಾಗಿ ಜಿ.ಎಸ್.ರವಿ 6ನೇ ಬಾರಿಗೆ ಆಯ್ಕೆಯಾದರು. ಇವರ ವಿರುದ್ಧ ಆಯ್ಕೆ ಬಯಸಿ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಸ್ಪರ್ಧಿಸಿದ್ದರು. ಅವರಿಗೆ 10 ಮತ ಪಡೆಯಲಷ್ಟೇ ಸಾಧ್ಯವಾಯಿತು.

8 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಕೆ.ಎನ್‌.ರಾಜಣ್ಣ, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ‘ಎ–ವರ್ಗ’ದ 6 ಸ್ಥಾನಗಳಿಗೆ ಮಾತ್ರ ಮತದಾನ ನಡೆಯಿತು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮತದಾನ ಮಾಡಲಾಯಿತು.

ತುಮಕೂರಿನ ಡಿಸಿಸಿ ಬ್ಯಾಂಕ್‌ ಬಳಿ ಸೇರಿದ್ದ ಜನ

ಗೆಲುವಿನ ನಾಗಾಲೋಟ ಮುಂದುವರಿಸಿದ ಶಿವಣ್ಣ

ಕುಣಿಗಲ್‌ ತಾಲ್ಲೂಕಿನಿಂದ ಹಿರಿಯ ಸಹಕಾರಿ ಬಿ.ಶಿವಣ್ಣ ಸತತ 9ನೇ ಬಾರಿಗೆ ಆಯ್ಕೆಯಾಗುವ ಮೂಲಕ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಜೆಡಿಎಸ್‌ ಬೆಂಬಲದೊಂದಿಗೆ ಆಯ್ಕೆಯಾಗುತ್ತಿದ್ದರು. ಕಾಂಗ್ರೆಸ್‌ ಬಿಜೆಪಿ ನಾಯಕರು ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿದ್ದರು. ಈ ಬಾರಿ ಶಾಸಕ ಎಚ್‌.ಡಿ.ರಂಗನಾಥ್‌ ತಮ್ಮ ಅಭ್ಯರ್ಥಿ ಮಧುಸೂದನ ಅವರನ್ನು ಕಣಕ್ಕೆ ಇಳಿಸಿದ್ದರು. ಹೀಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅನುಭವಿ ಶಿವಣ್ಣ 10 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಶಾಸಕರಿಗೆ ಭಾರಿ ಮುಖಭಂಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.