
ತುಮಕೂರು: ಜಿಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಆಸ್ಪತ್ರೆಗೆ ಖಾಸಗಿ ವೈದ್ಯಕೀಯ ಕಾಲೇಜಿನ ಸಹಭಾಗಿತ್ವ (ಪಿಪಿಪಿ) ಹೊಂದುವ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸಾವಿರಾರು ಕೋಟಿ ಬೆಲೆ ಬಾಳುವ 32 ಎಕರೆ ಜಾಗದಲ್ಲಿ ಜಿಲ್ಲಾ ಆಸ್ಪತ್ರೆ ಇದೆ. ಇಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದರೆ ಮುಂದೆ ಆಸ್ತಿ ಖಾಸಗಿಯವರ ಪಾಲಾಗಲಿದೆ. ಇದರಿಂದಾಗಿ ಬಡವರ ಮಕ್ಕಳು ವೈದ್ಯರಾಗುವ ಕನಸು ನನಸಾಗುವುದಿಲ್ಲ. ಇಂತಹ ಆಲೋಚನೆ ಕೈಬಿಟ್ಟು ಸರ್ಕಾರವೇ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ‘ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ನವೀಕರಿಸುವ ನೆಪದಲ್ಲಿ ಕಟ್ಟಡ ನೆಲಸಮ ಮಾಡಿ ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಸಲು ಸಿದ್ಧತೆ ನಡೆದಿದೆ. ಆಸ್ಪತ್ರೆಗೆ ಸೇರಿದ 32 ಎಕರೆಯಲ್ಲಿ 5 ಎಕರೆ ಒತ್ತುವರಿಯಾಗಿದೆ. ಕಡಿಮೆ ಬಂಡವಾಳದ ಮೂಲಕ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬದಲಿಗೆ ಖಾಸಗಿ ಸಹಭಾಗಿತ್ವದ ಮೊರೆ ಹೋಗಿರುವುದು ಸರಿಯಲ್ಲ. ಕೂಡಲೇ ಪಿಪಿಪಿ ಮಾದರಿ ಕೈಬಿಡಬೇಕು’ ಎಂದು ಆಗ್ರಹಿಸಿದರು.
ಪ್ರತಿದಿನ 1,500ರಿಂದ 2 ಸಾವಿರ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಫಾರ್ಮಸಿ, ನರ್ಸಿಂಗ್ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ನ. 7ರಂದು ಮುಖ್ಯಮಂತ್ರಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಉದ್ಘಾಟಿಸಲಿದ್ದಾರೆ. ಇಂತಹ ಸೌಲಭ್ಯ ಇರುವ ಆಸ್ಪತ್ರೆಗೆ ಖಾಸಗಿ ಸಹಭಾಗಿತ್ವದ ಅಗತ್ಯವಿಲ್ಲ ಎಂದು ಹೇಳಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್, ‘ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಅಭಿವೃದ್ಧಿಪಡಿಸುವುದು ಒಂದು ಹುನ್ನಾರವಾಗಿದೆ. ಯಾವುದೇ ಕಾರಣಕ್ಕೂ ಜಿಲ್ಲಾ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅವಕಾಶ ನೀಡದಂತೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.
ಫಿಟ್‍ವೆಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ಉಮೇಶ್, ಸಿಪಿಐ ಮುಖಂಡರಾದ ಕಂಬೇಗೌಡ, ರಾಜೇಶ್, ಮಂಜುನಾಥ್, ಅಶ್ವತ್ಥ್ ನಾರಾಯಣ್, ಜಿ.ಚಂದ್ರಶೇಖರ್, ಭೂತರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.