ADVERTISEMENT

ತುಮಕೂರು: ಕಾರ್ಮಿಕ ಮುಖಂಡ ಎನ್. ಶಿವಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 18 ಮೇ 2022, 11:41 IST
Last Updated 18 ಮೇ 2022, 11:41 IST
   

ತುಮಕೂರು: ಕಾರ್ಮಿಕ ಮುಖಂಡ ಎನ್.ಶಿವಣ್ಣ (80) ಹೃದಯಾಘಾತದಿಂದ ಬುಧವಾರ ಬೆಂಗಳೂರಿನಲ್ಲಿಮಗನ ಮನೆಯಲ್ಲಿ ನಿಧನರಾದರು.

ಪತ್ನಿ, ಪುತ್ರ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಶಿವಣ್ಣ ಅವರ ಇಚ್ಛೆಯಂತೆ ದೇಹವನ್ನು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು. ಗುಬ್ಬಿ ತಾಲ್ಲೂಕು ನಂದಿಹಳ್ಳಿ ಅವರ ಜನ್ಮಸ್ಥಳ.

ಎಐಟಿಯುಸಿ ರಾಜ್ಯ ಕಾರ್ಯದರ್ಶಿ, ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿ ಸಂಘಟನೆ ಮುನ್ನಡೆಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಒಂದು ರೀತಿಯಲ್ಲಿ ದೇವೇಗೌಡರ ಸೋಲಿಗೂ ಕಾರಣರಾದರು ಎಂದು ವಿಶ್ಲೇಷಿಸಲಾಗಿತ್ತು. ಒಮ್ಮೆ ತುರುವೇಕೆರೆ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು.

ADVERTISEMENT

ಡಿಪ್ಲೊಮಾ ಶಿಕ್ಷಣ ಮುಗಿಸಿ, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಅಲ್ಲೂ ಕಾರ್ಮಿಕ ಸಂಘಟನೆ ಕಟ್ಟಿ ಬೆಳೆಸುವ ಮೂಲಕ ಕಾರ್ಮಿಕರಿಗೆ ಹಲವು ಸವಲತ್ತು ಕೊಡಿಸಿದ್ದರು. ನಂತರ ಕಾರ್ಮಿಕ ಸಂಘಟನೆ, ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವ ವಹಿಸಿಕೊಂಡು, ಅವರಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.