ADVERTISEMENT

ತುಮಕೂರು: ಒಳ ಮೀಸಲಾತಿ ವರದಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 8:15 IST
Last Updated 7 ಆಗಸ್ಟ್ 2025, 8:15 IST
ತುಮಕೂರಿನಲ್ಲಿ ಬುಧವಾರ ನಡೆದ ಒಳ ಮೀಸಲಾತಿ ಹೋರಾಟ ಸಮಿತಿ ಸಭೆಯಲ್ಲಿ ಸಮಿತಿ ಸಂಚಾಲಕ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿದರು. ಚಿಂತಕ‌‌ ಕೆ.ದೊರೈರಾಜ್‌, ಮುಖಂಡರಾದ ಸಿ.ಚಂದ್ರಶೇಖರ್‌, ಬಸವರಾಜು, ಅಂಬಣ್ಣ, ಟಿ.ಡಿ.ವೆಂಕಟೇಶ್‌, ಕೃಷ್ಣಮೂರ್ತಿ, ನರಸೀಯಪ್ಪ ಇತರರು ಹಾಜರಿದ್ದರು
ತುಮಕೂರಿನಲ್ಲಿ ಬುಧವಾರ ನಡೆದ ಒಳ ಮೀಸಲಾತಿ ಹೋರಾಟ ಸಮಿತಿ ಸಭೆಯಲ್ಲಿ ಸಮಿತಿ ಸಂಚಾಲಕ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿದರು. ಚಿಂತಕ‌‌ ಕೆ.ದೊರೈರಾಜ್‌, ಮುಖಂಡರಾದ ಸಿ.ಚಂದ್ರಶೇಖರ್‌, ಬಸವರಾಜು, ಅಂಬಣ್ಣ, ಟಿ.ಡಿ.ವೆಂಕಟೇಶ್‌, ಕೃಷ್ಣಮೂರ್ತಿ, ನರಸೀಯಪ್ಪ ಇತರರು ಹಾಜರಿದ್ದರು   

ತುಮಕೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಆ. 11ರಿಂದ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕಾರ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಎಚ್ಚರಿಸಿದ್ದಾರೆ.

ನಗರದಲ್ಲಿ ಬುಧವಾರ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಒಳ ಮೀಸಲಾತಿ ಜಾರಿ ಕುರಿತ ಸಾಧಕ- ಬಾಧಕಗಳ ಚರ್ಚೆ ನಡೆಯಿತು. ಮೀಸಲಾತಿ ಜಾರಿ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ರಾಜ್ಯದಾದ್ಯಂತ ಬೃಹತ್‌ ಹೋರಾಟ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

‘ಒಳ ಮೀಸಲಾತಿ ವರದಿಗೆ ಸಂಪುಟದಲ್ಲಿ ಅನುಮೋದನೆ ದೊರೆತು, ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಕೂಡಲೇ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರ ಸಹಿಗೆ ಕಳುಹಿಸಬೇಕು. ನಿರ್ಲಕ್ಷ್ಯ ಮುಂದುವರಿಸಿದರೆ ಹೋರಾಟ ತೀವ್ರಗೊಳಿಸಬೇಕು’ ಎಂದು ಮುಖಂಡ ಅಂಬಣ್ಣ ಪ್ರಸ್ತಾಪಿಸಿದರು. ಇದಕ್ಕೆ ಸಭೆಯಲ್ಲಿ ಇದ್ದವರು ಸಹಮತ ವ್ಯಕ್ತಪಡಿಸಿದರು.

ADVERTISEMENT

ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ವೈ.ಕೆ.ಬಾಲಕೃಷ್ಣಪ್ಪ, ‘ಪರಿಶಿಷ್ಟ ಜಾತಿಯ 101 ಜಾತಿಗಳನ್ನು ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಸರ್ಕಾರ ಮುಂದಿನ ಅಧಿವೇಶನದಲ್ಲಿಯೇ ಇದಕ್ಕೆ ಅಂಗೀಕಾರ ಪಡೆಯಬೇಕು. ಕೂಡಲೇ ಜಾರಿಗೆ ಕ್ರಮ ವಹಿಸಬೇಕು. ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ಗಳಿಗೆ ಈಗಾಗಲೇ ಕೌನ್ಸೆಲಿಂಗ್‌ ನಡೆಯುತ್ತಿದ್ದು, ಒಳ ಮೀಸಲಾತಿ ಅನ್ವಯ ಪ್ರವೇಶಾತಿಗೆ ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಸರ್ಕಾರ ತಾಂತ್ರಿಕ ಕಾರಣ ಹೇಳಿ ಒಳ ಮೀಸಲಾತಿ ಜಾರಿ ಮಾಡದೆ, ಮುಂದೂಡಿದರೆ ರಾಜ್ಯದಾದ್ಯಂತ ಪ್ರತಿಭಟನೆ, ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಸಿ.ಚಂದ್ರಶೇಖರ್‌, ಬಸವರಾಜು, ಕುಂದೂರು ತಿಮ್ಮಯ್ಯ, ಕೆಂಚಮಾರಯ್ಯ, ವೇಣುಗೋಪಾಲ್‌ ಮೌರ್ಯ, ಶಿವಕುಮಾರ್,‌ ಟಿ.ಡಿ.ವೆಂಕಟೇಶ್‌, ಕೃಷ್ಣಮೂರ್ತಿ, ಹೆತ್ತೇನಹಳ್ಳಿ ಮಂಜುನಾಥ್‌, ನರಸೀಯಪ್ಪ, ನರಸಿಂಹಮೂರ್ತಿ ಮೊದಲಾದವರು ಭಾಗವಹಿಸಿದ್ದರು.

ಕಾದು ನೋಡಿ ನಿರ್ಧಾರ

ಸಚಿವ ಸಂಪುಟದ ತೀರ್ಮಾನ ಹೊರ ಬೀಳುವ ತನಕ ಕಾದು ನೋಡೋಣ. ನಂತರದ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸೋಣ. ವಿಧಾನಸಭೆಯಲ್ಲಿ ಚರ್ಚೆಯಾಗಿ ನಮಗೆ ಜಯ ಸಿಗುವ ತನಕ ಹೋರಾಟ ಮಾಡಬೇಕು. ಪರಿಸ್ಥಿತಿ ಏನೇ ಆದರೂ ಎಲ್ಲರು ಒಗ್ಗಟ್ಟಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಏಕತೆ ಹೋರಾಟಕ್ಕೆ ಆದ್ಯತೆ ನೀಡಬೇಕು. ಜನರ ಧ್ವನಿಗೆ ಮನ್ನಣೆ ಕೊಡಬೇಕು ಎಂದು ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೈರಾಜ್ ತಿಳಿಸಿದರು. ಈಗ ಆಗಿರುವ ಒಳ್ಳೆಯ ಬೆಳವಣಿಗೆಯನ್ನು ಕೆಡಿಸುವ ಕೆಲಸ ಆಗಬಾರದು. ನಮ್ಮ ಹೋರಾಟಕ್ಕೆ ಕಾನೂನು ಬದ್ಧವಾಗಿ ಜಯ ಸಿಕ್ಕಿದೆ. ಇದನ್ನು ಛಿದ್ರ ಮಾಡಲು ಹೋಗಬಾರದು. ಸರ್ಕಾರ ಮೀಸಲಾತಿ ಜಾರಿಗೆ ನಿರ್ಲಕ್ಷ್ಯ ವಹಿಸಿದರೆ ಎಲ್ಲರು ಒಂದಾಗಿ ಹೋರಾಟ ಕಟ್ಟೋಣ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.