ADVERTISEMENT

ಲಂಬಾಣಿಗರ ವಿರುದ್ಧ ತುಮಕೂರು ಸಂಸದ ಜಿ.ಎಸ್. ಬಸವರಾಜು ಅಸಮಾಧಾನ

ಜಿಲ್ಲಾಡಳಿತದಿಂದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತ್ಯುತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 15:24 IST
Last Updated 28 ಮಾರ್ಚ್ 2023, 15:24 IST
ತುಮಕೂರಿನಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಅಗ್ನಿವಂಶ ಕ್ಷತ್ರಿಯ ತಿಗಳ ಜನಾಂಗದ ಸಂಘದ ಆಶ್ರಯದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಆಚರಿಸಲಾಯಿತು. ಸಂಸದ ಜಿ.ಎಸ್. ಬಸವರಾಜು, ಮುಖಂಡರಾದ ಬಿ.ಸುರೇಶ್ ಗೌಡ, ಎನ್.ಗೋವಿಂದರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಯಜಮಾನರಾದ ಹನುಮಂತರಾಜು, ಶಿವಕುಮಾರ್, ಅಗ್ನಿ ಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂಬಯ್ಯ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಅಗ್ನಿವಂಶ ಕ್ಷತ್ರಿಯ ತಿಗಳ ಜನಾಂಗದ ಸಂಘದ ಆಶ್ರಯದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಆಚರಿಸಲಾಯಿತು. ಸಂಸದ ಜಿ.ಎಸ್. ಬಸವರಾಜು, ಮುಖಂಡರಾದ ಬಿ.ಸುರೇಶ್ ಗೌಡ, ಎನ್.ಗೋವಿಂದರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಯಜಮಾನರಾದ ಹನುಮಂತರಾಜು, ಶಿವಕುಮಾರ್, ಅಗ್ನಿ ಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂಬಯ್ಯ ಇತರರು ಉಪಸ್ಥಿತರಿದ್ದರು   

ತುಮಕೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಲಂಬಾಣಿ, ಕೊರಮ, ಕೊರಚ ಸಮುದಾಯದ ವಿರುದ್ಧ ಸಂಸದ ಜಿ.ಎಸ್. ಬಸವರಾಜು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಮತ್ತು ಅಗ್ನಿವಂಶ ಕ್ಷತ್ರಿಯ ತಿಗಳ ಜನಾಂಗದ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಉತ್ತರ ಭಾರತದಿಂದ ರಾಜ್ಯಕ್ಕೆ ವಲಸೆ ಬಂದವರು ಮೀಸಲಾತಿಯ ಲಾಭ ಪಡೆದು, ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಈಗ ಅವರೇ ಒಳ ಮೀಸಲಾತಿ ವರ್ಗೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ಸ್ವಾತಂತ್ರ್ಯ ಬಂದಾಗಿನಿಂದಲೂ ತುಳಿತಕ್ಕೆ ಒಳಗಾಗಿದ್ದ ಸಮುದಾಯಗಳಿಗೆ ಮೀಸಲಾತಿ ಹಂಚಿಕೆಯಾಗಿದೆ. ಇಷ್ಟು ದಿನ ಮೀಸಲಾತಿ ಕಿತ್ತು ತಿನ್ನುತ್ತಿದ್ದವರೇ ಈಗ ಬಿ.ಎಸ್‌. ಯಡಿಯೂರಪ್ಪ ಮನೆಗೆ ಕಲ್ಲು ಎಸೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ತಿಗಳ ಸಮುದಾಯದ ಜನರು ಸಂಘಟಿತರಾಗಬೇಕು‌. ಸರ್ಕಾರ ಜನಾಂಗದ ಮೇಲೆ ಕರುಣೆ ತೋರಿಸಿ, ಅಭಿವೃದ್ಧಿ ನಿಗಮ ಸ್ಥಾಪಿಸಿ, ಜಯಂತಿ ಘೋಷಣೆ ಮಾಡಿದೆ. ಸಮುದಾಯದ ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯ ಉಳಿಸಿಕೊಂಡು ಹೋಗದಿದ್ದರೆ‌ ನಾವೆಲ್ಲ ವ್ಯರ್ಥ. ಹಿಂದೂ,‌ ನಾವೆಲ್ಲ ಒಂದು ಎಂಬ ಭಾವನೆ ಇಟ್ಟುಕೊಂಡು ಮುಂದೆ ಸಾಗಬೇಕು. ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಉದಯ್ ಸಿಂಗ್, ‘ತಿಗಳರಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಸಮುದಾಯದ ಜನರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯಿಂದಲೇ ತಿಗಳ ಸಮುದಾಯದ ವ್ಯಕ್ತಿಯನ್ನು ಶಾಸಕರನ್ನಾಗಿ ಆಯ್ಕೆ‌ ಮಾಡಿ ವಿಧಾನಸೌಧಕ್ಕೆ ಕಳುಹಿಸಬೇಕು‘ ಎಂದು ಕೋರಿದರು.

ಬಿಜೆಪಿ ಮುಖಂಡ ಬಿ. ಸುರೇಶ್ ಗೌಡ, ‘ತಿಗಳರ ಕುಲಶಾಸ್ತ್ರ ಅಧ್ಯಯನ ಮಾಡಿ, ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬ ಕೂಗಿದೆ. ರಾಜಕೀಯವಾಗಿ ಮುನ್ನೆಲೆಗೆ ಬರಲು ಮೀಸಲಾತಿ ಅಗತ್ಯ‘ ಎಂದು ಹೇಳಿದರು.

‘ಅಭಿವೃದ್ಧಿ ನಿಗಮಕ್ಕೆ ₹200 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ನಗರದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ದೇವಸ್ಥಾನಕ್ಕೆ ಜಾಗ ನೀಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಕ್ಷತ್ರಿಯ ಜನಾಂಗದ ಅಧ್ಯಕ್ಷ ಸುಬ್ಬಣ್ಣ, ಯಜಮಾನರಾದ ಹನುಮಂತರಾಜು, ಶಿವಕುಮಾರ್, ಮಹಾನಗರ ಪಾಲಿಕೆ ಉಪ ಮೇಯರ್ ಟಿ.ಕೆ. ನರಸಿಂಹಮೂರ್ತಿ, ಅಗ್ನಿ ಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂಬಯ್ಯ, ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್. ಗೋವಿಂದರಾಜು, ತಿಗಳ ಸಮುದಾಯದ ಮುಖಂಡರಾದ ಟಿ.ಬಿ. ರಾಮು, ರೇವಣಸಿದ್ದಯ್ಯ, ಎ. ಬಸವರಾಜು, ಲಕ್ಷ್ಮೀಶ, ಎಂ. ಆಂಜನೇಯ, ಎಂ.ಶಿವಣ್ಣ, ಪ್ರೆಸ್ ರಾಜಣ್ಣ ಉಪಸ್ಥಿತರಿದ್ದರು.

ಯುವಕರ ಸಂಭ್ರಮ: ಜಯಂತಿ ಅಂಗವಾಗಿ ನಗರದ ಬಿಜಿಎಸ್ ವೃತ್ತದಿಂದ ಗಾಜಿನ ಮನೆ ವರೆಗೆ ಮೆರವಣಿಗೆ ನಡೆಯಿತು. ಅಲಂಕೃತ ರಥದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ಭಾವಚಿತ್ರದ ಮೆರವಣಿಗೆಯು ಅಶೋಕ ರಸ್ತೆ ಮುಖಾಂತರ ವೇದಿಕೆಯತ್ತ ಸಾಗಿ ಬಂತು.

ಪಟ ಕುಣಿತ, ಗೊಂಬೆ ಕುಣಿತ ಸೇರಿದಂತೆ ಜನಪದ ಕಲಾ ತಂಡಗಳು ಮೆರುಗು ನೀಡಿದವು. ಯುವಕರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನೂರಾರು ಜನರು ಹೆಜ್ಜೆ ಹಾಕಿದರು.

**

ಕಾಣಿಸದ ಅಧಿಕಾರಿಗಳು

ಸರ್ಕಾರದಿಂದ ಇದೇ ಮೊದಲ ಬಾರಿಗೆ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಆಚರಿಸಲಾಗುತ್ತಿದೆ. ಆದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದತ್ತ ಸುಳಿಯಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಬಿಟ್ಟರೆ ಬೇರೆ ಯಾವುದೇ ಅಧಿಕಾರಿಗಳು ಇರಲಿಲ್ಲ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಅಮಾನಿಕೆರೆ ಗಾಜಿನ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರೂ, ಅಧಿಕಾರಿಗಳು ಇತ್ತ ತಿರುಗಿಯೂ ನೋಡಲಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ಆಹ್ವಾನ ಪತ್ರಿಕೆಗೆ ಸೀಮಿತರಾದರು. ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಮಧ್ಯಾಹ್ನ1.30 ಗಂಟೆಗೆ ಶುರುವಾಯಿತು. ಅತಿಥಿಗಳು ಮಾತನಾಡುವ ವೇಳೆಗೆ ಖಾಲಿ ಕುರ್ಚಿಗಳೇ ಹೆಚ್ಚಾಗಿ ಕಾಣಿಸಿದವು.


**

ಮತಯಾಚನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬಿ. ಸುರೇಶ್ ಗೌಡ ‘ಮುಂದೆ ನನಗೂ, ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರಿಗೂ ಬೆಂಬಲ ಸೂಚಿಸುವಂತೆ’ ಕೋರಿದರು.

ಸಂಸದ ಬಸವರಾಜು ಅವರು ಕೂಡ ನಿಮ್ಮ ಬೆಂಬಲ ಸದಾ ಕಾಲ ಇರಬೇಕು. ನಿಮ್ಮ ಸಹಕಾರ ತುಂಬಾ ಮುಖ್ಯ ಎಂದು ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.