ADVERTISEMENT

ತುಮಕೂರು | ಅಧಿಕಾರಿಗಳ ನಿರ್ಲಕ್ಷ್ಯ: ಠಾಣೆಗಳ ₹10 ಲಕ್ಷ ವಿದ್ಯುತ್‌ ಬಿಲ್‌ ಬಾಕಿ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 6:38 IST
Last Updated 17 ಜೂನ್ 2025, 6:38 IST
ತುಮಕೂರಿನ ಸೆನ್‌ ಪೊಲೀಸ್ ಠಾಣೆ
ತುಮಕೂರಿನ ಸೆನ್‌ ಪೊಲೀಸ್ ಠಾಣೆ   

ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ ಅವರ ತವರು ಜಿಲ್ಲೆಯ ಪೊಲೀಸ್‌ ಠಾಣೆಗಳು ಲಕ್ಷಾಂತರ ರೂಪಾಯಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿವೆ. ಕಳೆದ ಕೆಲ ವರ್ಷಗಳಿಂದ ನಗರದ ವಿವಿಧ ಠಾಣೆಗಳ ₹10.19 ಲಕ್ಷ ವಿದ್ಯುತ್‌ ಬಿಲ್ ಪಾವತಿಯಾಗಿಲ್ಲ.

ತುಮಕೂರು ನಗರ ಠಾಣೆಯ ₹3.30 ಲಕ್ಷ ವಿದ್ಯುತ್‌ ಬಿಲ್‌ ಇನ್ನೂ ಕಟ್ಟಿಲ್ಲ. 2023ರ ಜನವರಿ ತಿಂಗಳಲ್ಲಿ ಕೊನೆಯ ಬಾರಿಗೆ ಬಿಲ್‌ ಪಾವತಿಸಲಾಗಿದೆ. ಅಲ್ಲಿಂದ ಈವರೆಗೆ ಬೆಸ್ಕಾಂಗೆ ಹಣ ಸಂದಾಯ ಮಾಡಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಂಗಲೆಯಲ್ಲಿರುವ ಎಸ್‌.ಪಿ ಕಚೇರಿಯ ಬಾಕಿ ಬಿಲ್‌ 878! ಇದೇ ವರ್ಷದ ಮಾರ್ಚ್‌ 1ರಂದು ವಿದ್ಯುತ್‌ ಬಿಲ್‌ ಪಾವತಿಸಿದ್ದು, ಕೊನೆಯ ಎರಡು ತಿಂಗಳ ಶುಲ್ಕ ಪಾವತಿಯಾಗಿಲ್ಲ.

ಈ ಹಿಂದೆ ಕುಣಿಗಲ್‌ ರಸ್ತೆಯಲ್ಲಿದ್ದ ಮಹಿಳಾ ಠಾಣೆಯ ₹3.16 ಲಕ್ಷ ಬಿಲ್‌ ಬಾಕಿ ಉಳಿದಿದೆ. ಠಾಣೆಯನ್ನು ಈಚೆಗೆ ಬಾರ್‌ಲೈನ್‌ ರಸ್ತೆಯ ಸಂಚಾರ ಪೊಲೀಸ್‌ ಠಾಣೆಗೆ ಸ್ಥಳಾಂತರಿಸಲಾಗಿದೆ. ಕಚೇರಿ ಸ್ಥಳಾಂತರದ ನಂತರವೂ ಬಿಲ್ ಪಾವತಿಸಿಲ್ಲ. ಒಂದು ವರ್ಷದಿಂದ ಒಂದು ರೂಪಾಯಿ ಸಹ ಬಿಲ್ ಕಟ್ಟಿಲ್ಲ.

ADVERTISEMENT

ಖಾಲಿ ಕಟ್ಟಡಕ್ಕೆ ಶುಲ್ಕ?: ವಿದ್ಯಾನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಹೊಸ ಬಡಾವಣೆ ಠಾಣೆಯನ್ನು 2022ರ ಜುಲೈನಲ್ಲಿ ಸ್ವಂತ ಕಟ್ಟಡಕ್ಕೆ ಠಾಣೆ ಸ್ಥಳಾಂತರಿಸಲಾಯಿತು. ಭದ್ರಮ್ಮ ಛತ್ರ ವೃತ್ತದಲ್ಲಿ ನಿರ್ಮಿಸಿರುವ ಹೊಸ ಕಟ್ಟಡದಲ್ಲಿ ಠಾಣೆಯ ಕೆಲಸಗಳು ನಡೆಯುತ್ತಿವೆ. ಆದರೆ, ಬಾಡಿಗೆ ಕಟ್ಟಡಕ್ಕೆ ಇಂದಿಗೂ ಬಿಲ್‌ ಪಾವತಿಸಲಾಗುತ್ತಿದೆ!

ಇದುವರೆಗೆ ಹೊಸ ಬಡಾವಣೆ ಠಾಣೆಯ ಹೆಸರಿಗೆ ಬಿಲ್‌ ಬರುತ್ತಿದೆ. ಕಟ್ಟಡ ಖಾಲಿ ಮಾಡಿದ ನಂತರವೂ 2025ರ ಮಾರ್ಚ್‌ ವರೆಗೆ ಬಿಲ್‌ ಪಾವತಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ವಿದ್ಯುತ್‌ ಶುಲ್ಕ ಕಟ್ಟುತ್ತಿಲ್ಲ. ಸೈಬರ್‌ ಠಾಣೆಯು ₹2.67 ಲಕ್ಷ ಬಾಕಿ ಉಳಿಸಿಕೊಂಡಿದೆ. 2023ರ ಮಾರ್ಚ್‌ನಲ್ಲಿ ಪಾವತಿಸಿದ್ದೇ ಕೊನೆ. ಈವರೆಗೂ ವಿದ್ಯುತ್‌ ಬಿಲ್‌ಗಾಗಿ ಬಿಡಿಗಾಸು ಬಿಡುಗಡೆ ಮಾಡಿಲ್ಲ.

‘ಬೆಸ್ಕಾಂ ವತಿಯಿಂದ ಹಲವು ಬಾರಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರೂ ಶುಲ್ಕ ಪಾವತಿ ಮಾತ್ರ ಆಗುತ್ತಿಲ್ಲ. ನೋಟಿಸ್‌ ಜಾರಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಅವರಿಗೆ ತೋಚಿದಾಗ ಬಿಲ್‌ ಪಾವತಿಸುತ್ತಿದ್ದಾರೆ. ಸಕಾಲಕ್ಕೆ ವಿದ್ಯುತ್‌ ಬಿಲ್‌ ಕಟ್ಟಿದರೆ ಯಾವುದೇ ತಲೆನೋವು ಇರುವುದಿಲ್ಲ. ಬಾಕಿ ಹಣ ವಸೂಲಿ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಬಿಲ್‌ ಬಾಕಿ ಉಳಿಸಿಕೊಂಡ ಪ್ರಮುಖ ಠಾಣೆ

ಕ್ರೀಡಾಂಗಣದ ₹15 ಲಕ್ಷ ಬಾಕಿ!
ನಗರದ ಮಹಾತ್ಮ ಗಾಂಧಿ‌ ಜಿಲ್ಲಾ ಕ್ರೀಡಾಂಗಣದಿಂದ ಸುಮಾರು ₹15 ಲಕ್ಷ ವಿದ್ಯುತ್ ಬಿಲ್ ಪಾವತಿಯಾಗಬೇಕಿದೆ! ಕಳೆದ 7 ತಿಂಗಳಿನಿಂದ ವಿದ್ಯುತ್‌ ಬಿಲ್‌ ಕಟ್ಟಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾಂಗಣದ ಜವಾಬ್ದಾರಿ ವಹಿಸಿಕೊಂಡಿದೆ. ಸ್ಮಾರ್ಟ್‌ ಸಿಟಿಯಿಂದ ಸುಮಾರು ₹62 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಇದರ ನಿರ್ವಹಣೆಗೆ ಇಲಾಖೆಯ ಅನುದಾನ ಸಾಲದಾಗಿದೆ. ಕನಿಷ್ಠ ವಿದ್ಯುತ್‌ ಬಿಲ್‌ ಪಾವತಿಸಲು ಹಣದ ಕೊರತೆ ಎದುರಾಗಿದೆ. ಕಳೆದ ಕೆಲ ದಿನಗಳಿಂದ ನಗರದ ವಿವಿಧೆಡೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಇಲಾಖೆಯ ಕಚೇರಿಗಳನ್ನು ಸಹ ಕ್ರೀಡಾಂಗಣದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೂ ನಿರ್ವಹಣೆಗಾಗಿ ಅಧಿಕಾರಿಗಳು ಪರದಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.