
ತುಮಕೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನ ಯಾವುದೇ ಗೊಂದಲಗಳು ಇಲ್ಲದಂತೆ ಸುಸೂತ್ರವಾಗಿ ನಡೆಯಿತು.
ಜಿಲ್ಲೆಯ 41 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕನ್ನಡ ವಿಷಯದ ಪರೀಕ್ಷೆ ಬರೆದರು. ಆದರೆ ಒಂದೇ ಕೇಂದ್ರದಲ್ಲಿ 369 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಎಲ್ಲ ಕೇಂದ್ರಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಭಯದಿಂದ ಕೇಂದ್ರದ ಒಳಗಡೆ ಹೋದ ವಿದ್ಯಾರ್ಥಿಗಳು ನಗುತ್ತಲೇ ಹೊರ ಬಂದರು. ಮಾತೃಭಾಷೆ ಕನ್ನಡ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿತು. ‘ಮುಂದಿನ ಎಲ್ಲ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸುತ್ತೇವೆ. ಪರೀಕ್ಷೆ ಹೇಗೆ ಎದುರಿಸಬೇಕು ಎಂಬುವುದನ್ನು ಕನ್ನಡ ಕಲಿಸಿದೆ’ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು.
ಮೊದಲ ದಿನವಾದ್ದರಿಂದ ಬೆಳಿಗ್ಗೆ 8 ಗಂಟೆಗೆ ವಿದ್ಯಾರ್ಥಿಗಳು ಕೇಂದ್ರಗಳ ಕಡೆಗೆ ಹೆಜ್ಜೆ ಹಾಕಿದರು. ಮಕ್ಕಳು ಪರೀಕ್ಷೆ ಬರೆಯುತ್ತಿದ್ದರೆ ಪೋಷಕರು ಕೇಂದ್ರದ ಹೊರಗಡೆ ಕಾಯುತ್ತಾ ಕುಳಿತಿದ್ದ ದೃಶ್ಯಗಳು ಕಂಡು ಬಂದವು.
ನಗರದ ಕೆಪಿಎಸ್ ಎಂಪ್ರೆಸ್ ಕಾಲೇಜು, ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದಲ್ಲಿ ಬೆಳಕು, ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು. ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕ ಬಾಲಗುರುಮೂರ್ತಿ ಹಾಜರಿದ್ದರು.
1080 ಜನ ಗೈರು ಕನ್ನಡ ಭಾಷಾ ಪರೀಕ್ಷೆಗೆ ಜಿಲ್ಲೆಯಾದ್ಯಂತ 21328 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 20248 ಮಂದಿ ಪರೀಕ್ಷೆ ಬರೆದರೆ 1080 ಜನ ಗೈರಾಗಿದ್ದರು. ನಗರದ ಶಿರಾ ಗೇಟ್ ಬಳಿಯ ಕಾಳಿದಾಸ ಪಿಯು ಕಾಲೇಜಿನ ಕೇಂದ್ರ ಒಂದರಲ್ಲಿಯೇ 369 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು 404 ಮಂದಿ ನೋಂದಾಯಿಸಿಕೊಂಡಿದ್ದರು. 35 ಜನ ಮಾತ್ರ ಪರೀಕ್ಷೆಗೆ ಹಾಜರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.