ತುಮಕೂರು: ರಾಗಿ ಬಿತ್ತನೆ ಕೊನೆ ಹಂತದಲ್ಲಿ ಚುರುಕು ಪಡೆದುಕೊಂಡಿದ್ದು, ಆಗಸ್ಟ್ ತಿಂಗಳ ಅಂತ್ಯದಲ್ಲಿ (ಒಂದು ವಾರದ ಅಂತರದಲ್ಲಿ) ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 1,51,375 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆಗಸ್ಟ್ ಅಂತ್ಯದವರೆಗೆ 1,47,101 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್ ಮಧ್ಯ ಭಾಗದವರೆಗೂ 90,334 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ, ಜುಲೈ ಅಂತ್ಯಕ್ಕೆ ಕೇವಲ 46,867 ಹೆಕ್ಟೇರ್‌ಗಳಲ್ಲಷ್ಟೇ ಬಿತ್ತನೆಯಾಗಿತ್ತು. ಆಗಸ್ಟ್ ಮೂರನೇ ವಾರದಲ್ಲಿ ರಾಗಿ ಬಿತ್ತನೆ ಚುರುಕು ಪಡೆದುಕೊಂಡಿತ್ತು.
ರಾಗಿ ಬಿತ್ತನೆ ಹಾಕಿಕೊಂಡಿದ್ದ ಗುರಿಯ ಸಮೀಪಕ್ಕೆ ಬಂದಿದ್ದರೆ, ಸಕಾಲಕ್ಕೆ ಮಳೆಯಾಗದೆ ಉಳಿದ ಬೆಳೆಗಳ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ನವೆಂಬರ್ ತಿಂಗಳ ಕೊನೆಯ ವರೆಗೂ ಮಳೆಯಾದರೆ ರಾಗಿ ಬೆಳೆಗೆ ಸಮಸ್ಯೆಯಾಗುವುದಿಲ್ಲ. ಕೊನೆಗಾಲದಲ್ಲಿ ಮಳೆ ಕೈಕೊಟ್ಟರೆ ಬೆಳೆ ಕೈ ಸೇರುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇಂಗಾ ಬಿತ್ತನೆ ಇಳಿಕೆಯಾಗುತ್ತಲೇ ಸಾಗದ್ದು, ಈ ಬಾರಿಯೂ ಇದೇ ಸ್ಥಿತಿ ಮುಂದುವರಿದಿದೆ. ಒಟ್ಟು 76,570 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೆ, ಈವರೆಗೆ 41,331 ಹೆಕ್ಟೇರ್‌ಗಳಲ್ಲಷ್ಟೇ ಶೇಂಗಾ ಬಿತ್ತನೆಯಾಗಿದೆ.
ಕಳೆದ ನಾಲ್ಕೈದು ವರ್ಷಗಳವರೆಗೂ 1.50 ಲಕ್ಷ ಹೆಕ್ಟೇರ್‌ವರೆಗೂ ಬಿತ್ತನೆ ಮಾಡಲಾಗುತಿತ್ತು. ಸಕಾಲಕ್ಕೆ ಮಳೆಯಾಗದಿರುವುದು, ರೋಗ ಬಾಧೆ, ಬೆಲೆ ಕುಸಿತ ಸೇರಿದಂತೆ ಹಲವು ಸಂಕಷ್ಟಗಳಿಗೆ ಸಿಲಿಕಿದ ರೈತರು ಶೇಂಗಾ ಬಿತ್ತನೆ ಕಡಿಮೆ ಮಾಡುತ್ತಲೇ ಬಂದಿದ್ದಾರೆ. ಈ ಬಾರಿಯೂ ಬಿತ್ತನೆ ಸಮಯದಲ್ಲಿ ಮಳೆ ಕೈಕೊಟ್ಟಿದ್ದು, ಶೇಂಗಾ ಬದಲು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಶೇಂಗಾ ಜಾಗಕ್ಕೆ ವಾಣಿಜ್ಯ ಬೆಳೆ ಕಾಲಿಟ್ಟಿದೆ.
ಈ ಬಾರಿ ಭತ್ತ, ಜೋಳ, ದ್ವಿದಳ ಧಾನ್ಯ ಬಿತ್ತನೆಯೂ ಗಣನೀಯವಾಗಿ ಕುಸಿತ ಕಂಡಿದೆ. ರಾಗಿ ಹೊರತುಪಡಿಸಿದರೆ ಉಳಿದ ಬೆಳೆಗಳ ಬಿತ್ತನೆಯಾಗಿಲ್ಲ. ಜಿಲ್ಲೆಯಲ್ಲಿ ವಿವಿಧ ಬೆಳೆಗಳನ್ನು ಒಟ್ಟು 3,20,280 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 2,56,676 ಹೆಕ್ಟೇರ್ (ಶೇ 80) ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಸಿರಿ ಧಾನ್ಯವೂ ಕುಸಿತ: ಒಂದು ಕಾಲಕ್ಕೆ ಸಿರಿ ಧಾನ್ಯಗಳ ತವರೂರು ಎನಿಸಿಕೊಂಡಿದ್ದ ಜಿಲ್ಲೆಯಲ್ಲಿ ಸಿರಿ ಧಾನ್ಯದ ಬೆಳೆ ಹುಡುಕುವಂತಾಗಿದೆ. ಸಜ್ಜೆ, ನವಣೆ, ಊದಲು, ಆರ್ಕ, ಕೊರ್ಲು, ಸಾಮೆಯನ್ನು ಸಾಕಷ್ಟು ಪ್ರದೇಶದಲ್ಲಿ ಬೆಳೆಯಲಾಗುತಿತ್ತು. ಈ ವರ್ಷ 4,460 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದರೂ, ಕೇವಲ 209 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಮಾಡಲಾಗಿದೆ.
ಸಿರಿ ಧಾನ್ಯ ಬೆಳೆಯುವ ರೈತರನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರೋತ್ಸಾಹ ಧನ ನೀಡುತ್ತಿವೆ. ಜಿಲ್ಲೆಯಲ್ಲಿ ಈ ಹಿಂದೆ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯ ಬಿತ್ತನೆ ಮಾಡಲಾಗುತಿತ್ತು. ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದ್ದು, ಈ ವರ್ಷವೂ ಮಳೆ ಕೊರತೆಯಿಂದಾಗಿ ಅತ್ಯಲ್ಪ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿರಿ ಧಾನ್ಯ ಬೆಳೆಯಲಾಗುತಿತ್ತು. ಈಗ ಎಲ್ಲಿ ಬಿತ್ತನೆಯಾಗಿದೆ ಎಂದು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರ ಸಿರಿ ಧಾನ್ಯ ಬೆಳೆಯನ್ನು ಪ್ರೋತ್ಸಾಹಿಸಲು ‘ಶ್ರೀ ಅನ್ನ’ ಯೋಜನೆ ಜಾರಿಗೆ ತಂದಿದೆ. ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಪ್ರೋತ್ಸಾಹ ಧನ ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ಸಿರಿ ಧಾನ್ಯಕ್ಕೆ ಬೇಡಿಕೆ ಹೆಚ್ಚುತ್ತಲೇ ಸಾಗಿದ್ದು, ಯಾವ ಧಾನ್ಯಕ್ಕೂ ಸಿಗದಷ್ಟು ಬೆಲೆ ಸಿಗುತ್ತಿದೆ. ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಿರಿ ಧಾನ್ಯದ ಮೊರೆ ಹೋಗಿದ್ದಾರೆ. ಅಧಿಕ ಪೌಷ್ಟಿಕಾಂಶದ ಕಾರಣಕ್ಕೆ ಜನರು ಬಳಸುವ ಪ್ರಮಾಣವೂ ಅಧಿಕವಾಗಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಧಾನ್ಯ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಕೊಟ್ಟು ಕೊಳ್ಳುವಂತಾಗಿದೆ. ಯಾವ ಬೆಳೆಗೂ ಇಲ್ಲದಷ್ಟು ಬೇಡಿಕೆ ಇದ್ದರೂ ಬೆಳೆಯುವ ಪ್ರದೇಶ ಮಾತ್ರ ವಿಸ್ತರಿಸುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.