ADVERTISEMENT

ಸ್ಮಾರ್ಟ್‌ ಸಿಟಿ ಗುತ್ತಿಗೆದಾರರಿಗೆ ₹ 65 ಲಕ್ಷ ದಂಡ

ಅಗತ್ಯ ಸುರಕ್ಷಾ ಕ್ರಮ ಇಲ್ಲ : ವಿಳಂಬ ಕಾಮಗಾರಿ : ವಿವರ ಸಲ್ಲಿಸಲು ತಡ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:26 IST
Last Updated 19 ಆಗಸ್ಟ್ 2019, 20:26 IST

ತುಮಕೂರು: ಕಾಮಗಾರಿಗಳಲ್ಲಿನ ವಿಳಂಬ ಮತ್ತು ಸಾರ್ವಜನಿಕ ಹಿತದೃಷ್ಟಿಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ವಹಿಸದ ಗುತ್ತಿಗೆದಾರರಿಗೆ ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌(ಟಿಎಸ್‌ಸಿಎಲ್‌) ₹ 65.09 ಲಕ್ಷ ದಂಡ ವಿಧಿಸಿದೆ.

ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ನವರು ಕಾಮಗಾರಿಗಳಿಗೆ ಸಂಬಂಧಿಸಿದ ನಕ್ಷೆ ಮತ್ತು ವಿವರಗಳನ್ನು ಸರಿಯಾದ ಸಮಯಕ್ಕೆ ನೀಡದೆ ಇರುವುದು ಹಾಗೂ ಮೇಲುಸ್ತುವಾರಿ ಮಾಡದೇ ಇರುವುದರಿಂದ ಕಾಮಗಾರಿಗಳ ಪ್ರಗತಿ ವಿಳಂಬ ಆಗುತ್ತಿದೆ ಎಂದು ಟಿಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ತೀವ್ರ ಅಸಮಾಧನ ವ್ಯಕ್ತಪಡಿಸಿದ್ದಾರೆ.

ಕೆಲವು ಪ್ರಮುಖ ಕಾಮಗಾರಿಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಎಂದು ಟಿಎಸ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ಅವರು ಕಡಕ್‌ ಸೂಚನೆ ನೀಡಿದ್ದಾರೆ.

ADVERTISEMENT

ದಂಡ ವಿವರ: ವಸತಿ ಪ್ರದೇಶದಲ್ಲಿ ಕೇಬಲ್‌ ಜೋಡಣಾ ಜಾಲ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಆರ್‌ಎಂಎನ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಗೆ ₹ 22.93 ಲಕ್ಷ, ಚಾಮುಂಡೇಶ್ವರಿ ದೇವಸ್ತಾನ ರಸ್ತೆ, ರಾಧಾಕೃಷ್ಣ ರಸ್ತೆ, ಬೆಳಗುಂಬ ರಸ್ತೆ ಅಭಿವೃದ್ಧಿ ಮಾಡಬೇಕಿರುವ ಶ್ರೀನಿವಾಸ ಕನ್‌ಸ್ಟ್ರಕ್ಷನ್‌ಗೆ ₹ 10.55 ಲಕ್ಷ, ಶಿವಕುಮಾರ ಸ್ವಾಮೀಜಿ ವೃತ್ತದಿಂದ ಗುಬ್ಬಿ ಗೇಟ್‌ ವರೆಗಿನ ಬಿ.ಎಚ್‌.ರಸ್ತೆಯನ್ನು ಸ್ಮಾರ್ಟ್‌ ರೋಡ್‌ ಮಾಡಬೇಕಿರುವ ಯು.ಎಸ್‌.ಕೆ.ಕನ್‌ಸ್ಟ್ರಕ್ಷನ್‌ಗೆ ₹ 10.20 ಲಕ್ಷ ವಿಧಿಸಲಾಗಿದೆ.

ಮಂಡಿಪೇಟೆ ರಸ್ತೆಗಳು, ಖಾಸಗಿ ಬಸ್‌ ನಿಲ್ದಾಣದ ಉತ್ತರ ಮತ್ತು ದಕ್ಷಿಣಕ್ಕೆ ಇರುವ ರಸ್ತೆ, ಭಗವಾನ್‌ ಮಹಾವೀರ ರಸ್ತೆಗಳ ಅಭಿವೃದ್ಧಿಯ ಗುತ್ತಿಗೆ ಪಡೆದಿರುವ ಸುಧಾಕರ ಪೆರಿಟಾಲ, ಸಿದ್ಧಾರ್ಥ ಸಿವಿಲ್‌ ವರ್ಕ್ಸ್‌ ₹ 6.88 ಲಕ್ಷ, ಎಂ.ಜಿ.ರಸ್ತೆ, ಹೊರಪೇಟೆ ರಸ್ತೆ, ಜೆ.ಸಿ.ರಸ್ತೆ ಮತ್ತು ವಿವೇಕಾನಂದ ರಸ್ತೆಗಳನ್ನು ಸ್ಮಾರ್ಟ್‌ ರಸ್ತೆಗಳಾಗಿಸಿ, ಐದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರ ಬಿ.ಎಂ.ರಂಗೇಗೌಡರು ₹ 5.63 ಲಕ್ಷ ದಂಡ ತೆರಬೇಕಿದೆ.

ಅಶೋಕ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ ಅಭಿವೃದ್ಧಿಯ ಪ್ಯಾಕೇಜ್‌ ಪಡೆದಿರುವ ಶ್ರೀನಿವಾಸ ಕನ್‌ಸ್ಟ್ರಕ್ಷನ್‌ಗೆ ₹4.44 ಲಕ್ಷ, ಯೋಜನೆಗಳ ವ್ಯವಸ್ಥಾಪನಾ ಮತ್ತು ಸಲಹಾ ಕಂಪನಿಯಾದ ಐಪಿಇ ಗ್ಲೋಬಲ್‌ ಇಂಡಿಯಾಗೆ ₹ 3.66 ಲಕ್ಷ, ಕೆ.ಆರ್‌.ಬಡಾವಣೆಯ ಬಸ್‌ ನಿಲ್ದಾಣದಿಂದ ಗ್ರಾಮಾಂತರ ಠಾಣೆವರೆಗಿನ ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ರಸ್ತೆಯ ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವ ಶ್ರೀನಿವಾಸ ಕನ್‌ಸ್ಟ್ರಕ್ಷನ್‌ ಕಂಪನಿಗೆ ₹77,211 ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.