
ತುಮಕೂರು: ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಕಬ್ಬು ಖರೀದಿ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ನಗರದಲ್ಲೂ ಪ್ರತಿಭಟನೆ ನಡೆಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನಲ್ಲಿ ಕಳೆದ ಒಂದು ತಿಂಗಳಿಂದ ಕಸ ವಿಲೇವಾರಿ ಘಟಕದ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿದರು.
ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು. ಮೊದಲು ರೈತರ ನೋವು, ಮನವಿಗೆ ಸ್ಪಂದಿಸುವಂತೆ ಒತ್ತಾಯಿಸಿದರು. ರೈತರ ಸಂಕಷ್ಟಕ್ಕೆ ಮಿಡಿಯುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಕಬ್ಬು ದರ ನಿದಗಿಪಡಿಸಬೇಕು. ಕಬ್ಬಿನ ಬಾಕಿ ಹಣ ಪಾವತಿಸಬೇಕು. ರೈತರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ಸಾವಿರಾರು ರೈತರು ವಾರದಿಂದ ರಸ್ತೆಯಲ್ಲಿ ಕುಳಿತು ಅಹೋರಾತ್ರಿ ಧರಣಿ, ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರ ಜತೆ ಮಾತುಕತೆ ನಡೆಸದೆ ನಾಟಕವಾಡುತ್ತಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿದು ಕಬ್ಬು ಖರೀದಿ ಬೆಲೆಯನ್ನು ಹೆಚ್ಚಳ ಮಾಡುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಪಕ್ಕದ ಮಹಾರಾಷ್ಟ್ರ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ₹3,400– 3,500 ಬೆಲೆ ನೀಡುತ್ತಿವೆ. ಆದರೆ ರಾಜ್ಯದಲ್ಲಿ ₹3,100 ಕೊಡಲಾಗುತ್ತಿದೆ. ಬೆಲೆ ಹೆಚ್ಚಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ’ ಎಂದು ದೂರಿದರು.
ರಾಜ್ಯದ 81 ಸಕ್ಕರೆ ಕಾರ್ಖಾನೆಗಳಲ್ಲಿ 50ಕ್ಕೂ ಹೆಚ್ಚು ಕಾರ್ಖಾನೆಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮಾಲೀಕತ್ವದಲ್ಲಿ ನಡೆಯುತ್ತಿವೆ. ಹಾಗಾಗಿ ಯಾವ ರಾಜಕೀಯ ಪಕ್ಷದವರು ಅಧಿಕಾರಕ್ಕೆ ಬಂದರೂ ಕಬ್ಬು ದರ ಹೆಚ್ಚಳಕ್ಕೆ ಮುಂದಾಗುವುದಿಲ್ಲ. ಇಂತಹ ಸರ್ಕಾರಗಳಿಗೆ ರಾಜಕಾರಣಿಗಳ ಹಿತ ಕಾಯುವುದೇ ಮುಖ್ಯವಾಗಿರುತ್ತದೆ. ಈ ಹಿಂದೆ 110 ದಿನಗಳ ಕಾಲ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಹೋರಾಟ ಮಾಡಿದ್ದು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ರೈತರಿಗೆ ಏನು ಮಾಡದಿದ್ದರೂ ಈಗ ಮೊಸಳೆ ಕಣ್ಣೀರು ಸುರಿಸುತ್ತಿದೆ. ಸ್ಥಳೀಯವಾಗಿ ಗೊಂದಲ ಮೂಡಿಸುವ ಬದಲು ಹೆಚ್ಚಿನ ಬೆಲೆ ನಿಗದಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ಹುಳಿಯಾರು ಪಟ್ಟಣದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕು. ಸಂತೆ ಮೈದಾನದಲ್ಲಿ ನಡೆಯುತ್ತಿರುವ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಬೇಕು. ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಮುಖಂಡರಾದ ದೊಡ್ಡಮಾಳಯ್ಯ, ಕೆ.ಎನ್.ವೆಂಕಟೇಗೌಡ, ಚಿಕ್ಕಬೋರೇಗೌಡ, ರಂಗಹನುಮಯ್ಯ ಮೊದಲಾದವರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.