ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.
ಹೈಕೋರ್ಟ್ ಆದೇಶದಂತೆ ನ. 10ರಂದು ಚುನಾವಣೆ ನಡೆಯಲಿದ್ದು, ಅಧಿಸೂಚನೆ ಹೊರ ಬಿದ್ದಿದೆ. ಜಿಲ್ಲಾಧಿಕಾರಿಯೂ ಆದ ಚುನಾವಣಾ ಅಧಿಕಾರಿ ಶುಭ ಕಲ್ಯಾಣ್ ಅಧಿಸೂಚನೆ ಹೊರಡಿಸಿದ್ದಾರೆ.
ಈ ಬಾರಿ ಘಟಾನುಘಟಿಗಳು ಸ್ಪರ್ಧೆಗೆ ಸಜ್ಜಾಗಿದ್ದು, ಚುನಾವಣೆ ರಂಗೇರುವಂತೆ ಮಾಡಿದೆ. ಯಾವುದೇ ಪಕ್ಷ, ಚಿಹ್ನೆ ಹೆಸರಿನಲ್ಲಿ ಚುನಾವಣೆ ನಡೆಯದಿದ್ದರೂ ರಾಜಕೀಯ ನಂಟು ಬೆಸೆದುಕೊಂಡಿದೆ. ಎಲ್ಲವೂ ರಾಜಕೀಯ ಲೆಕ್ಕಾಚಾರದ ಮೇಲೆ ನಡೆಯಲಿದೆ. ತುಮುಲ್‌ನಲ್ಲಿ ಅಧಿಕಾರ ಹಿಡಿಯಲು ಮೂರು ಪಕ್ಷಗಳ ನಡುವೆ ಬಿರುಸಿನ ಪೈಪೋಟಿ ಈಗಾಗಲೇ ಆರಂಭವಾಗಿದೆ.
ಚುನಾವಣೆಯ ಮೊದಲ ಹಂತವಾಗಿ ಹಾಲು ಉತ್ಪಾದಕರ ಸಂಘಗಳಿಂದ (ಡೇರಿ) ಮತದಾನಕ್ಕೆ ಪ್ರತಿನಿಧಿಯನ್ನು ನಿಯೋಜಿಸುವ (ಡೆಲಿಗೇಟ್ಸ್) ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರತಿ ಸಂಘದಿಂದ ಒಬ್ಬರನ್ನು ಮತದಾನಕ್ಕೆ ನಿಯೋಜಿಸಿರುವ ಪತ್ರಗಳನ್ನು ನೀಡಿದ್ದು, ಅದನ್ನು ತುಮುಲ್ ವ್ಯವಸ್ಥಾಪಕರಿಗೆ ಸಲ್ಲಿಸಲಾಗಿದೆ. ಮತದಾನಕ್ಕೆ ಅರ್ಹತೆ ಪಡೆದ ಸಂಘಗಳ (ಡೇರಿ) ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಮತದಾನಕ್ಕೆ ನೇಮಕಗೊಂಡಿರುವ ಡೇರಿಯ ಪ್ರತಿನಿಧಿಯನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸದಲ್ಲಿ ಆಕಾಂಕ್ಷಿಗಳು ನಿರತರಾಗಿದ್ದಾರೆ. ಬಹುತೇಕ ತಾಲ್ಲೂಕುಗಳಲ್ಲಿ ಶಾಸಕರು, ಮಾಜಿ ಶಾಸಕರ ಕುಟುಂಬದವರು, ಸಂಬಂಧಿಗಳು, ಇಲ್ಲವೆ ರಾಜಕೀಯವಾಗಿ ಗುರುತಿಸಿಕೊಂಡವರೇ ಸ್ಪರ್ಧೆಗೆ ಸಜ್ಜಾಗಿರುವುದು ಪ್ರತಿಷ್ಠೆಯನ್ನಾಗಿಸಿದೆ.
ಶ್ರೀನಿವಾಸ್ ಪತ್ನಿ ಕಣಕ್ಕೆ: ತುಮುಲ್ ಚುನಾವಣೆಯಲ್ಲಿ ಈವರೆಗೂ ಸಕ್ರಿಯರಾಗಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಈ ಬಾರಿ ತಮ್ಮ ಪತ್ನಿ ಭಾರತಿ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಭಾರತಿ ಹೆಸರಿನಲ್ಲಿ ಹಾಲು ಸರಬರಾಜು ಮಾಡುವ ಮೂಲಕ ಡೇರಿ ಸದಸ್ಯರನ್ನಾಗಿ ಮಾಡಲಾಗಿದೆ.
ಸತತವಾಗಿ ನಿರ್ದೇಶಕರಾಗುತ್ತಾ ಬಂದಿದ್ದ ಗೋಪಾಲಪುರದ ಚಂದ್ರಶೇಖರ್ ಈಗ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಶ್ರೀನಿವಾಸ್ ವಿರುದ್ಧ ಪ್ರಚಾರ ಮಾಡಿದ್ದು, ಅದರ ಸೇಡು ತೀರಿಸಿಕೊಳ್ಳಲು ಶಾಸಕರು ಸಜ್ಜಾಗಿದ್ದಾರೆ. ತಾಲ್ಲೂಕಿನಲ್ಲಿ 139 ಡೇರಿಗಳಿದ್ದು, 132 ಸಂಘಗಳು ಮತದಾನಕ್ಕೆ ಅರ್ಹತೆ ಪಡೆದಿವೆ.
ಶಿವನಂಜಪ್ಪ ಸ್ಪರ್ಧೆ ಇಲ್ಲ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದ ಹಳೆಮನೆ ಶಿವನಂಜಪ್ಪ ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿಯುವಂತಾಗಿದೆ. ಹಾಲು ಉತ್ಪಾದಕರ ಸಂಘ (ಡೇರಿ) ಚುನಾವಣೆಯಲ್ಲಿ ಸೋತಿದ್ದು, ಸ್ಪರ್ಧೆಗೆ ಅರ್ಹತೆ ಕಳೆದುಕೊಂಡಿದ್ದಾರೆ.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎನ್.ಶಿವಪ್ರಕಾಶ್ ಸ್ಪರ್ಧೆಗೆ ಮುಂದಾಗಿದ್ದು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಯ ಸಿಕ್ಕಿದೆ ಎನ್ನಲಾಗಿದೆ. ಸಿದ್ದರಾಮನಗರದ ರಾಜಶೇಖರ್ ಅವರನ್ನು ಕಣಕ್ಕಿಳಿಸಲು ಶಿವನಂಜಪ್ಪ ಮುಂದಾಗಿದ್ದಾರೆ. ರಾಜಶೇಖರ್ ಸ್ಪರ್ಧೆಗೆ ಬೆಂಬಲ ನೀಡುವಂತೆ ಮಾಧುಸ್ವಾಮಿ ಅವರನ್ನು ಶಿವನಂಜಪ್ಪ ಕೇಳಿಕೊಂಡಿದ್ದು, ಅದಕ್ಕೆ ಸಹಮತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.
ಹೈ ತೀರ್ಪಿನತ್ತ ಚಿತ್ತ: ಮಧುಗಿರಿ ತಾಲ್ಲೂಕಿನಿಂದ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ (ಜೆಡಿಎಸ್ ಬೆಂಬಲಿತ), ಬಿ.ನಾಗೇಶ್ ಬಾಬು (ಕಾಂಗ್ರೆಸ್ ಬೆಂಬಲಿತ) ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. ಆದರೆ ಇಬ್ಬರೂ ಕೂಡ ಸದಸ್ಯತ್ವ ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ತೀರ್ಪಿನ ಮೇಲೆ ಸ್ಪರ್ಧೆ ನಿಂತಿದೆ.
ಕಳೆದ ಬಾರಿ ಕೊಂಡವಾಡಿ ಚಂದ್ರಶೇಖರ್ ಅವರಿಗೆ ಜೆಡಿಎಸ್, ಕಾಂಗ್ರೆಸ್ ಬೆಂಬಲದಿಂದಾಗಿ ಗೆಲುವು ಸುಲಭವಾಗಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಕೋರ್ಟ್ ತೀರ್ಪಿನ ನಂತರ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.
ಮಾಜಿ ಅಧ್ಯಕ್ಷ: ತುರುವೇಕೆರೆ ತಾಲ್ಲೂಕಿನಿಂದ ತುಮುಲ್ ಮಾಜಿ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಪಿ.ಟಿ.ಗಂಗಾಧರ್ ಎದುರಾಳಿಯಾಗುವ ಸಾಧ್ಯತೆಗಳಿವೆ.
ಈ ಹಿಂದೆ ಶಾಸಕ ಎಂ.ಟಿ.ಕೃಷ್ಣಪ್ಪ ಬಳಗದಲ್ಲಿ ಮಹಾಲಿಂಗಯ್ಯ ಗುರುತಿಸಿಕೊಂಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸಹಕಾರ ನೀಡದ ಹಿನ್ನೆಲೆಯಲ್ಲಿ ಕೃಷ್ಣಪ್ಪ ತಿರುಗಿ ಬಿದ್ದಿದ್ದಾರೆ. ಮಹಾಲಿಂಗಯ್ಯ ವಿರುದ್ಧದ ಭ್ರಷ್ಟಾಚಾರದ ವಿಚಾರ ಮುಂದಿಟ್ಟುಕೊಂಡು ಶಾಸಕರು ನೇರ ವಾಗ್ದಾಳಿ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ 125 ಡೇರಿಗಳಿದ್ದು, 117 ಸಂಘಗಳು ಮತದಾನಕ್ಕೆ (ಡೆಲಿಗೇಟ್) ಅರ್ಹತೆ ಪಡೆದುಕೊಂಡಿವೆ.
ಅಧಿಕಾರಕ್ಕಾಗಿ ಪ್ರಯತ್ನ: ಕುಣಿಗಲ್ ತಾಲ್ಲೂಕಿನಿಂದ 1999ರಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿರುವ ಬಿಜೆಪಿಯ ಡಿ.ಕೃಷ್ಣಕುಮಾರ್ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಅವರ ಪ್ರಭಾವ ತಗ್ಗಿಸಲು ಶಾಸಕ ಡಾ.ರಂಗನಾಥ್ ಪ್ರತಿ ತಂತ್ರ ಹೂಡಿದ್ದಾರೆ.
ಬೇಗೂರು ನಾರಾಯಣ, ಗಂಗಶಾನಯ್ಯ, ಮಾಸ್ತಿ ಕರಿಗೌಡ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ಶಾಸಕರು ಚಿಂತನೆ ನಡೆಸಿದ್ದಾರೆ.
6ನೇ ಬಾರಿ ಸ್ಪರ್ಧೆ: ತಿಪಟೂರು ತಾಲ್ಲೂಕಿನಲ್ಲಿ ಎಂ.ಕೆ.ಪ್ರಕಾಶ್ (ಕಾಂಗ್ರೆಸ್ ಬೆಂಬಲ) 6ನೇ ಬಾರಿಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಹಿಂದೆ ಎರಡು ಬಾರಿ ನಿರ್ದೇಶಕರಾಗಿದ್ದ ಜಿ.ಪಂ ಮಾಜಿ ಸದಸ್ಯ ತ್ರಿಯಂಬಕ ಕಾಂಗ್ರೆಸ್ ತೊರೆದು ಬಿಜೆಪಿ ಬೆಂಬಲದೊಂದಿಗೆ 5ನೇ ಬಾರಿಗೆ ಸ್ಪರ್ಧಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಮುಖಂಡ ತಾ.ಪಂ ಮಾಜಿ ಅಧ್ಯಕ್ಷ ಎನ್.ಎಂ.ಸುರೇಶ್ ಸ್ಪರ್ಧಿಸುವ ಸಾಧ್ಯತೆ ಇದೆ. 156 ಸಂಘಗಳಲ್ಲಿ 136 ಡೇರಿಗಳು ಮತದಾನಕ್ಕೆ ಅರ್ಹತೆ ಪಡೆದಿವೆ.
ನೇರ ಪೈಪೋಟಿ: ಶಿರಾ ತಾಲ್ಲೂಕಿನಲ್ಲಿ ಜೆಡಿಎಸ್‌ನ ಎಸ್.ಆರ್.ಗೌಡ ಹಾಗೂ ಕಾಂಗ್ರೆಸ್ ಪಕ್ಷದ ಸಿ.ಆರ್.ಉಮೇಶ್ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಸತತ ಎರಡು ಬಾರಿ ನಿರ್ದೇಶಕರಾಗಿದ್ದ ಎಸ್.ಆರ್.ಗೌಡ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ಬೆಂಬಲವೂ ದೊರೆತು, ಮೈತ್ರಿ ಅಭ್ಯರ್ಥಿಯಾದರೆ ಪೈಪೋಟಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಎದುರಾಳಿಯಾಗಿ ಶಾಸಕ ಟಿ.ಬಿ.ಜಯಚಂದ್ರ ಬೆಂಬಲದೊಂದಿಗೆ ಕಣಕ್ಕಿಳಿಯಲು ಸಿ.ಆರ್.ಉಮೇಶ್ ಮುಂದಾಗಿದ್ದಾರೆ. ಬಹುತೇಕ ನೇರ ಪೈಪೋಟಿಗೆ ಅಖಾಡ ಸಿದ್ಧವಾಗುತ್ತಿದೆ.
ಪಾವಗಡ ತಾಲ್ಲೂಕು: ಪಾವಗಡ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಬೆಳ್ಳಿಬಟ್ಟಲು ಚಂದ್ರಶೇಖರ್ ಹಾಗೂ ಜೆಡಿಎಸ್‌ನಿಂದ ಚನ್ನಮಲ್ಲಯ್ಯ ಸ್ಪರ್ಧೆಗೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 66 ಡೇರಿಗಳಿದ್ದು, 49 ಸಂಘಗಳು ಮಾತ್ರ ಮತದಾನಕ್ಕೆ (ಡೆಲಿಗೇಟ್ಸ್) ಅರ್ಹತೆ ಪಡೆದುಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.