
ತುರುವೇಕೆರೆ: ತಾಲ್ಲೂಕಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಕೇವಲ ಒಂದು ರಾಗಿ ಖರೀದಿ ಘಟಕವಿದೆ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಹೆಚ್ಚುವರಿಯಾಗಿ ಎರಡು ರಾಗಿ ಖರೀದಿ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಕೆಎಪ್‌ಸಿಎಸ್‌ಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲ್ಲೂಕಿನ ರಾಗಿ ಖರೀದಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ರೈತರ ದೂರುಗಳನ್ನು ಆಲಿಸಿದರು.
ರಾಗಿ ಖರೀದಿ ವೇಳೆ ರೈತರಿಂದ 50 ಕೆಜಿ 600 ಗ್ರಾಂ ರಾಗಿ ಖರೀದಿಸಬೇಕು ಎಂದು ನಿಯಮವಿದೆ. ಆದರೆ ಇಲ್ಲಿಯ ಅಧಿಕಾರಿಗಳು ಸರಿ ಸುಮಾರು 52 ಕೆಜಿಯಷ್ಟು ರಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ರೈತರಿಂದ ₹100 ರೂಪಾಯಿ ಹಮಾಲಿ ಹಣ ಎಂದು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಷ್ಟವಾಗುತ್ತಿದೆ ಎಂದು ತಾಲ್ಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜು ಮತ್ತು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಜಿಲ್ಲಾಧಿಕಾರಿಗೆ ದೂರಿದರು.
ತೂಕದಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂಬ ದೂರಿದ ಮೇರೆಗೆ ದಾಸ್ತಾನು ಕೊಠಡಿಗೆ ತೆರಳಿದ ಜಿಲ್ಲಾಧಿಕಾರಿ ದಾಸ್ತಾನು ಮಧ್ಯದಲ್ಲಿದ್ದ ಎರಡು ಚೀಲಗಳನ್ನು ತೂಕ ಮಾಡುವಂತೆ ಸೂಚಿಸಿದರು. ಆಗ ಒಂದು ಚೀಲ 51.600 ಕೆಜಿ ಬಂದರೆ ಮತ್ತೊಂದು 49 ಕೆಜಿ ಮಾತ್ರ ಬಂದಿತು.
ರಾಗಿ ಖರೀದಿ ವೇಳೆ ರೈತರೇ ತೂಕ ಮಾಡಲು ರಾಗಿಯನ್ನು ಸುರಿದರೆ ಯಾವುದೇ ಹಣ ನೀಡುವಂತಿಲ್ಲ. ಆದರೆ ಹಮಾಲಿಗಳಿಂದ ರಾಗಿ ತೂಕ ಹಾಕಿಸಿದಲ್ಲಿ ಅವರ ಕೂಲಿ ಕೊಡಬೇಕಾಗುವುದು ಅನಿವಾರ್ಯ. ಆದರೂ ₹100ಕ್ಕೆ ಬದಲಾಗಿ ಕಡಿಮೆ ಹಣ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಕುಂಇ ಅಹಮದ್, ಇಒ ಅನಂತರಾಜು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವೀರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರಸನ್ನ ಕುಮಾರ್, ಆಹಾರ ನಿರೀಕ್ಷ ಕೃಷ್ಣೇಗೌಡ, ಹರೀಶ್, ಬಿಇಒ ಸೋಮಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.