
ತುರುವೇಕೆರೆ: ಭಾನುವಾರ ಖರೀದಿ ಕೇಂದ್ರಕ್ಕೆ ರಜೆ ಇದ್ದ ಕಾರಣ ಸೋಮವಾರ ಮುಂಜಾನೆ ರೈತರು ರಾಗಿ ತುಂಬಿದ ಟ್ರ್ಯಾಕ್ಟರ್ ತಂದು ರಸ್ತೆಯ ಬಲ ಬದಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿದ್ದರು.
ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿದಿನ 60 ಟ್ರ್ಯಾಕ್ಟರ್‌ನಂತೆ 2,500 ಕ್ವಿಂಟಲ್ ರಾಗಿಯನ್ನು ಖರೀದಿಸಲಾಗುತ್ತದೆ. ನೋಂದಾಯಿತ ರೈತರು ಸರತಿಯಂತೆ ರಾಗಿ ತರಲು ಖರೀದಿ ಕೇಂದ್ರದ ನೋಟಿಸ್ ಬೋರ್ಡ್‌ನಲ್ಲಿ ಹೆಸರು, ದಿನಾಂಕ ಹಾಕಲಾಗುತ್ತದೆ. ಆದರೆ ಕೆಲ ರೈತರು ದಿನಾಂಕ ನೀಡದಿದ್ದರೂ ಸಹ ಬಂದು ರಸ್ತೆ ಬದಿ ನಿಲ್ಲಿಸುತ್ತಿದ್ದಾರೆ.
ಸೋಮವಾರ ದಿನಾಂಕ ನೀಡದ 40ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ರಸ್ತೆ ಬದಿ ನಿಂತಿತ್ತು. ಇದರಿಂದ ಸರತಿ ಇರುವ ರೈತರು ರಾಗಿ ತರಲು ಕಷ್ಟವಾಗುತ್ತದೆ ಎಂದು ಖರೀದಿ ಅಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದರು.
ಈಗಾಗಲೇ ಮೂರು ಕೌಂಟರ್‌ಗಳಿಂದ 5 ಸಿಬ್ಬಂದಿ ಖರೀದಿ ನಡೆಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಮತ್ತೆರಡು ಕೌಂಟರ್ ತೆರೆದು ರೈತರಿಗೆ ತೊಂದರೆಯಾಗದಂತೆ ಖರೀದಿ ಮಾಡಲಾಗುವುದು. ಈಗಾಗಲೇ 600 ರೈತರಿಂದ 18 ಸಾವಿರ ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಖರೀದಿ ಕೇಂದ್ರದಲ್ಲಿ ಕಡಿಮೆ ಕೌಂಟರ್ ತೆರೆಯಲಾಗಿದೆ. ರಾಗಿ ತೆಗೆದುಕೊಳ್ಳುವ ಸಿಬ್ಬಂದಿ ಸಂಖ್ಯೆ ಕೊರತೆ ಇದೆ. ಹಾಗಾಗಿ ಖರೀದಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ಸಾಕಷ್ಟು ರೈತರು ರಾಗಿ ಬಿಡಲು ರಸ್ತೆಬದಿ ಟ್ರ್ಯಾಕ್ಟರ್ ನಿಲ್ಲಿಸಿ ರಾತ್ರಿಯೆಲ್ಲ ಕಾಯುತ್ತಿದ್ದಾರೆ. ತಡವಾದಷ್ಟು ರೈತರು ಹೆಚ್ಚಿನ ಬಾಡಿಗೆ ಕೊಡಬೇಕು. ಇದರಿಂದ ರೈತರಿಗೆ ಹೊರೆಯಾಗಲಿದೆ. ಅಧಿಕಾರಿಗಳು ಗಮನಹರಿಸಬೇಕು ಎಂದು ರೈತರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.