ADVERTISEMENT

ಮಧುಗಿರಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 10:53 IST
Last Updated 2 ಆಗಸ್ಟ್ 2020, 10:53 IST
   

ಮಧುಗಿರಿ(ತುಮಕೂರು ಜಿಲ್ಲೆ): ಕೃಷಿ ಹೊಂಡಕ್ಕೆ ಇಬ್ಬರು ಮಕ್ಕಳು ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮರತಿಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಆರ್.ಕೃಷ್ಣಮೂರ್ತಿ ಹಾಗೂ ಅರುಣಶ್ರೀ ಎಂಬುವವರ ಮಕ್ಕಳಾದ ಶರತ್ (5) ಹಾಗೂ ಲೋಚನಾ(3) ಮೃತಪಟ್ಟ ಬಾಲಕರು.

ಗ್ರಾಮದ ರಾಮಣ್ಣ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕೃಷಿ ಹೊಂಡ ಇದೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ಸುರಿದ ಮಳೆಗೆ ಈ ಕೃಷಿ ಹೊಂಡದಲ್ಲಿ ನೀರು ತುಂಬಿದೆ. ಪಕ್ಕದ ಜಮೀನಿನಲ್ಲಿಆರ್.ಕೃಷ್ಣಮೂರ್ತಿ ಹಾಗೂ ಅರುಣಶ್ರೀ ಕಳೆ ತೆಗೆಯುತ್ತಿದ್ದಾಗ, ಆಟವಾಡಿಕೊಂಡಿದ್ದ ಶರತ್ ಮತ್ತು ಲೋಚನಾ ಕೃಷಿ ಹೊಂಡದ ಸಮೀಪ ತೆರಳಿದ್ದಾರೆ. ತಂಗಿ ಲೋಚನಾ ಕೃಷಿ ಹೊಂಡದಲ್ಲಿ ಜಾರಿ ಬಿದ್ದಿದ್ದಾಳೆ. ಅವಳನ್ನು ಕಾಪಾಡಲು ಹೋಗಿ ಅಣ್ಣ ಶರತ್ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಮೃತಪಟ್ಟಿದ್ದಮಕ್ಕಳನ್ನು ನೀರಿನಿಂದ ಹೊರ ತೆಗೆದು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಪೋಷಕರ ಆಕ್ರಂದನ: ಮುದ್ದಾದ ಇಬ್ಬರು ಮಕ್ಕಳನ್ನು ಕಳೆದು ಕೊಂಡ ಪೋಷಕರ ಆಂಕ್ರಂದನ ಮುಗಿಲು ಮುಟ್ಟಿತ್ತು. ಇದ್ದ ಮಕ್ಕಳನ್ನು ಕಳೆದುಕೊಂಡು ಯಾರಿಗೊಸ್ಕರ ಬದುಕಬೇಕು ಎಂದು ಗೋಳಾಡುತ್ತಿದ್ದರು. ಪ್ರೀತಿಯ ಮೊಮ್ಮಕ್ಕಳನ್ನು ಕಳೆದಕೊಂಡ ತಾತ - ಅಜ್ಜಿ ಹಾಗೂ ಗ್ರಾಮದ ಜನರು ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.