ADVERTISEMENT

ಸ್ಕಿಮ್ಮಿಂಗ್ ಸಾಧನ ಬಳಸಿ ಹಣ ಡ್ರಾ; ಇಬ್ಬರ ಬಂಧನ

ಜಿಲ್ಲೆಯಲ್ಲಿ ₹ 25 ಲಕ್ಷಕ್ಕೂ ಹೆಚ್ಚು ವಂಚನೆ; 60 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 6:14 IST
Last Updated 12 ಡಿಸೆಂಬರ್ 2020, 6:14 IST
ಆರೋಪಿಗಳ ಪತ್ತೆಗೆ ಶ್ರಮಿಸಿದ ತಂಡಕ್ಕೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ನಗದು ಬಹುಮಾನ ವಿತರಿಸಿದರು. ಎಸ್‌ಪಿ ಡಾ.ಕೆ.ವಂಶಿಕೃಷ್ಣ ಚಿತ್ರದಲ್ಲಿ ಇದ್ದಾರೆ
ಆರೋಪಿಗಳ ಪತ್ತೆಗೆ ಶ್ರಮಿಸಿದ ತಂಡಕ್ಕೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ನಗದು ಬಹುಮಾನ ವಿತರಿಸಿದರು. ಎಸ್‌ಪಿ ಡಾ.ಕೆ.ವಂಶಿಕೃಷ್ಣ ಚಿತ್ರದಲ್ಲಿ ಇದ್ದಾರೆ   

ತುಮಕೂರು: ಕುಣಿಗಲ್, ತುಮಕೂರು, ಗುಬ್ಬಿ ಮತ್ತು ಕೆ.ಬಿ.ಕ್ರಾಸ್ ವ್ಯಾಪ್ತಿಯಲ್ಲಿ ಸ್ಕಿಮ್ಮಿಂಗ್ ಸಾಧನದ ಮೂಲಕ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ವಾಸಿಗಳಾದ ಉಗಾಂಡಾ ದೇಶದ ಐವಾನ್ ಕಾಬೊಂಗೆ ಮತ್ತು ಕೀನ್ಯಾದ ಲಾರೆನ್ಸ್ ಮಾಕಾಮುನನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಈ ವಂಚನೆ ಪ್ರಕರಣಗಳು ಜಿಲ್ಲೆಯ ಪೊಲೀಸರಿಗೆ ತೀವ್ರ ಸವಾಲಾಗಿತ್ತು. ನಿತ್ಯವೂ ಹಣ ಕಳೆದುಕೊಂಡವರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದರು. ಕುಣಿಗಲ್ ತಾಲ್ಲೂಕಿನ 42, ಗುಬ್ಬಿ ತಾಲ್ಲೂಕಿನಲ್ಲಿ ಎರಡು ಹಾಗೂ ತುಮಕೂರು ತಾಲ್ಲೂಕಿನಲ್ಲಿ 42 ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯಲ್ಲಿಯೇ ₹ 25 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಕರು ಡ್ರಾ ಮಾಡಿದ್ದರು. ಚೆನ್ನೈ, ಮುಂಬೈ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳ ಎಟಿಎಂ ಕೇಂದ್ರಗಳಿಂದ ಹಣವನ್ನು ಡ್ರಾ ಮಾಡಿದ್ದರು.

‘ಆರೋಪಿಗಳಿಂದ 20 ನಕಲಿ ಎಟಿಎಂ ಕಾರ್ಡ್‌ಗಳು, ಸ್ಕಿಮ್ಮಿಂಗ್ ಸಾಧನ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನವದೆಹಲಿ ನಿವಾಸಿಗಳಾಗಿರುವ ಆಫ್ರಿಕಾದ ಜೇಮ್ಸ್ ಸೌತ್ ಮತ್ತು ಜುಯತ್ ಎಂಬುವವರು ನೆರವಾಗಿದ್ದಾರೆ’ ಎಂದು ಶುಕ್ರವಾರ ಕೇಂದ್ರವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ನವದೆಹಲಿಯಲ್ಲಿ ಈ ಇಬ್ಬರು ಪ್ಯಾರಾ ಮೆಡಿಕಲ್ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಸಂಚರಿಸಿದ ಜಾಗಗಳು, ಹಣವನ್ನು ಡ್ರಾ ಮಾಡಿದ ಸ್ಥಳಗಳು ಹಾಗೂ ಮಾರ್ಗದಲ್ಲಿ ಸಿಗುವ ಟೋಲ್‌ಗಳಲ್ಲಿ ತಾಂತ್ರಿಕವಾಗಿ ಮಾಹಿತಿ ಸಂಗ್ರಹಿಸಿ ಆರೋಪಿಗಳ ವಿವರ ಹಾಗೂ ಅವರು ಸಂಚರಿಸುತ್ತಿದ್ದ ವಾಹನದ ಬಗ್ಗೆ ಮಾಹತಿ ಸಂಗ್ರಹಿಸಲಾಯಿತು’ ಎಂದು ವಿವರಿಸಿದರು.

ದೆಹಲಿಯಿಂದ ರಾಜ್ಯಕ್ಕೆ ಬಂದದ್ದು ಏಕೆ?:

ದೆಹಲಿಯಿಂದ ಇಲ್ಲಿಗೆ ಏಕೆ ಬಂದರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಇವರು ವಂಚಿಸಿರುವ ಕಡೆಗಳಲ್ಲಿ ಎಟಿಎಂ ಯಂತ್ರಗಳು ಹಳೆಯದಾಗಿವೆ. ಈ ತಾಂತ್ರಿಕ ಕಾರಣದಿಂದಲೂ ಇಲ್ಲಿ ವಂಚನೆ ಸುಲಭ ಎಂದು ಬಂದಿದ್ದಾರೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಮತ್ತಷ್ಟು ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ಪತ್ತೆಗೂ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ವಂಚಕರ ತಂಡ ಪತ್ತೆಗೆ ಸಿಇಎನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ವಿ.ಶೇಷಾದ್ರಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸಿಬ್ಬಂದಿ ಅಯೂಬ್ ಜಾನ್, ರಮೇಶ್, ಹರೀಶ್, ಕುಣಿಗಲ್ ಪೊಲೀಸ್ ಠಾಣೆಯ ಮಂಜುನಾಥ, ಜಿಲ್ಲಾ ಪೊಲೀಸ್ ಕಚೇರಿಯ ರಮೇಶ್ ಹಾಗೂ ಗಿರೀಶ್ ತಂಡದಲ್ಲಿ ಇದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡಕ್ಕೆ ಐಜಿಪಿ ನಗದು ಬಹುಮಾನ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.