ADVERTISEMENT

ತುಮಕೂರು | ಗಗನ ಕುಸುಮವಾದ ಸಹಾಯಧನ

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಹಲವು ಯೋಜನೆಗಳಿಗೆ ಸಲ್ಲಿಕೆಯಾಗದ ಅರ್ಜಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 5:49 IST
Last Updated 15 ಜುಲೈ 2024, 5:49 IST
ತುಮಕೂರಿನ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಕಚೇರಿ
ತುಮಕೂರಿನ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಕಚೇರಿ   

ತುಮಕೂರು: ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಸ್‌ಗೆ ಸರ್ಕಾರದ ಸಹಾಯಧನ ಗಗನ ಕುಸುಮವಾಗಿದೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಚಿಸಿದ್ದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಕಚೇರಿಯ ವಿಳಾಸವೇ ಹಲವರಿಗೆ ತಿಳಿದಿಲ್ಲ.

ಈ ಹಿಂದೆ ನಡೆದ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 3,229 ಸಫಾಯಿ ಕರ್ಮಚಾರಿಗಳು, 157 ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಸ್‌ ಇದ್ದಾರೆ. 2023–24ನೇ ಸಾಲಿನಲ್ಲಿ ಕನಿಷ್ಠ ಒಬ್ಬ ಫಲಾನುಭವಿಗೆ ಕೂಡ ಸಹಾಯಧನ ತಲುಪಿಲ್ಲ. ‘ತಳ ಸಮುದಾಯದ ಜನರಿಗೆ ಸರ್ಕಾರದ ಸಹಾಯಧನ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ’ ಎಂದು ಕಾರ್ಮಿಕ ಮುಖಂಡರು ಆರೋಪಿಸುತ್ತಿದ್ದಾರೆ.

ಸ್ವಯಂ ಉದ್ಯೋಗ ಕಂಡುಕೊಳ್ಳಲು 10 ಜನ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಸ್‌ಗೆ ಸಹಾಯಧನ ನೀಡುವ ಗುರಿ ನಿಗದಿ ಪಡಿಸಿದ್ದು, ಕೇವಲ ಒಂದೇ ಅರ್ಜಿ ಸಲ್ಲಿಕೆಯಾಗಿದೆ. ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಗೆ ಯಾರೊಬ್ಬರ ಅರ್ಜಿಯೂ ಸ್ವೀಕಾರವಾಗಿಲ್ಲ. ಸ್ವಾವಲಂಬಿ ಸಾರಥಿ ಯೋಜನೆಯೂ ಇದೇ ಹಾದಿಯಲ್ಲಿ ಸಾಗಿದೆ. ಇಬ್ಬರಿಗೆ ಸಹಾಯಧನ ನೀಡಲು ಉದ್ದೇಶಿಸಿದ್ದ ಈ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ಸಲ್ಲಿಕೆಯಾದ ಅರ್ಜಿಗಳು ಇದುವರೆಗೆ ವಿಲೇವಾರಿಯಾಗಿಲ್ಲ.

ADVERTISEMENT

ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ತುಂಬಾ ಜನರಿಗೆ ಯಾವ ವಿಳಾಸದಲ್ಲಿ ಅರ್ಜಿ ಹಾಕಬೇಕು. ಅರ್ಜಿಯ ಪ್ರತಿ ಯಾರಿಗೆ ತಲುಪಿಸಬೇಕು ಎಂಬುವುದೇ ಗೊತ್ತಿಲ್ಲ. ‘ಈ ಹಿಂದೆ ಆಫ್‌ಲೈನ್‌ ಮುಖಾಂತರ ನೇರವಾಗಿ ಅರ್ಜಿ ಕರೆದಾಗ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಆನ್‌ಲೈನ್‌ನಲ್ಲಿ ಇಲ್ಲ ಸಲ್ಲದ ದಾಖಲೆಗಳನ್ನು ಕೇಳುತ್ತಾರೆ. ಇದರಿಂದ ಹಲವರು ಅರ್ಜಿ ಸಲ್ಲಿಸುವ ತಂಟೆಗೆ ಹೋಗುತ್ತಿಲ್ಲ. ಬೆರಳೆಣಿಕೆಯಷ್ಟು ಇರುವ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಸ್‌ಗೆ ನಿಗಮದಿಂದ ಸಹಾಯಧನ ತಲುಪುತ್ತಿಲ್ಲ. ಅರ್ಜಿ ಸಲ್ಲಿಸಿದವರೂ ಸಹಾಯಧನ ಪಡೆಯಲು ತಿಂಗಳುಗಟ್ಟಲೆ ಕಚೇರಿಗೆ ಅಲೆಯ ಬೇಕಾದ ಪರಿಸ್ಥಿತಿ ಇದೆ’ ಎಂದು ಪೌರ ಕಾರ್ಮಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ಸ್‌ ಸಮಸ್ಯೆ ಒಂದೆಡೆಯಾದರೆ ಮತ್ತೊಂದು ಕಡೆ ಸಫಾಯಿ ಕರ್ಮಚಾರಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಗುರಿ ನಿಗದಿ ಪಡಿಸುತ್ತಿಲ್ಲ. ಕಳೆದ ವರ್ಷ ಸ್ವಯಂ ಉದ್ಯೋಗ ಯೋಜನೆಯಡಿ ಒಂದೇ ಒಂದು ಗುರಿ ನೀಡಿಲ್ಲ. ಆದರೆ, 32 ಜನ ಅರ್ಜಿ ಸಲ್ಲಿಸಿದ್ದಾರೆ. ಉದ್ಯಮ ಶೀಲತಾ ಯೋಜನೆಯಡಿ 2 ಗುರಿ ನಿಗದಿ ಪಡಿಸಿದ್ದು, 8 ಅರ್ಜಿಗಳು ಸಲ್ಲಿಕೆಯಾಗಿವೆ. ಸ್ವಾವಲಂಬಿ ಸಾರಥಿ ಯೋಜನೆಯಿಂದ ಒಬ್ಬರಿಗೆ ಸಹಾಯಧನ ನೀಡುತ್ತಿದ್ದು, 4 ಮಂದಿ ಅರ್ಜಿ ಹಾಕಿದ್ದಾರೆ.

‘ಸಮಾಜದಲ್ಲಿಯೇ ಅತ್ಯಂತ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕಿರುವ ಅಧಿಕಾರಿಗಳು ಮೈಕೊಡವಿಕೊಂಡು ಕೆಲಸ ಮಾಡುತ್ತಿಲ್ಲ. ತಾತ್ಸಾರ ಭಾವನೆ, ನಿರ್ಲಕ್ಷ್ಯವನ್ನೇ ಹಾಸು ಹೊದ್ದು ಮಲಗಿದ್ದಾರೆ. ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ’ ಎಂಬುವುದು ಕಾರ್ಮಿಕ ಮುಖಂಡರ ಆರೋಪ.

ಸಮುದಾಯದ ಅಭಿವೃದ್ಧಿ ಮರೆತ ನಿಗಮ ಗುರಿ ನಿಗದಿ ಪಡಿಸದ ಯೋಜನೆಗೆ 32 ಅರ್ಜಿ ಸ್ವಯಂ ಉದ್ಯೋಗಕ್ಕೆ ಒಂದೇ ಅರ್ಜಿ ಸಲ್ಲಿಕೆ

ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ದಾಖಲಾತಿ ಪರಿಶೀಲಿಸಿ ಸಹಾಯಧನ ವಿತರಿಸಲಾಗುತ್ತದೆ

-ಆರ್‌.ಮಂಜುನಾಥ್‌ ಜಿಲ್ಲಾ ವ್ಯವಸ್ಥಾಪಕರು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

ಫಲಾನುಭವಿ ಆಯ್ಕೆಗೆ ನಡೆಯದ ಸಭೆ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಹಾಯಧನ ವಿತರಿಸಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಸಮಿತಿಯ ಸಭೆಯೇ ಆಗಿಲ್ಲ. ಕಳೆದ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಡಿಸೆಂಬರ್‌ ವರೆಗೆ ಸಮಯಾವಕಾಶ ನೀಡಿದ್ದರು. ಸಲ್ಲಿಕೆಯಾದ ಅರ್ಜಿಗಳಲ್ಲಿನ ದಾಖಲಾತಿ ಪರಿಶೀಲನೆ ಮಾಡಿ ಸಭೆ ನಡೆಸಿ ಅರ್ಹರಿಗೆ ಸಹಾಯಧನ ನೀಡುವ ಪ್ರಕ್ರಿಯೆ ನಡೆದಿಲ್ಲ. ‘ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕೆಲಸ ಮಾಡಿಸಬೇಕಾದ ಜಿಲ್ಲಾಧಿಕಾರಿಯೂ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಅಧಿಕಾರಿ ವಲಯದಲ್ಲಿನ ನಿರ್ಲಕ್ಷ್ಯದಿಂದ ಪೌರ ಕಾರ್ಮಿಕರ ಬದುಕು ಸುಧಾರಣೆ ಕಾಣುತ್ತಿಲ್ಲ’ ಕಾರ್ಮಿಕ ರುದ್ರೇಶ್‌ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.