ADVERTISEMENT

ಸರ್ವಾಧಿಕಾರಿಯಿಂದ ಅಸ್ಪೃಶ್ಯತೆ ಜೀವಂತ: ಸಚಿವ ಡಾ.ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 4:29 IST
Last Updated 15 ಏಪ್ರಿಲ್ 2025, 4:29 IST
<div class="paragraphs"><p>ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಸೋಮವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು. ಸಚಿವರಾದ ಜಿ.ಪರಮೇಶ್ವರ, ಎಚ್‌.ಸಿ.ಮಹದೇವಪ್ಪ, ಕೆ.ಎನ್‌.ರಾಜಣ್ಣ, ಬಿ.ಎಸ್.ಸುರೇಶ್‌, ಕೇಂದ್ರ ಸಚಿವ ವಿ.ಸೋಮಣ್ಣ ಇತರರು ಹಾಜರಿದ್ದರು</p></div>

ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಸೋಮವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು. ಸಚಿವರಾದ ಜಿ.ಪರಮೇಶ್ವರ, ಎಚ್‌.ಸಿ.ಮಹದೇವಪ್ಪ, ಕೆ.ಎನ್‌.ರಾಜಣ್ಣ, ಬಿ.ಎಸ್.ಸುರೇಶ್‌, ಕೇಂದ್ರ ಸಚಿವ ವಿ.ಸೋಮಣ್ಣ ಇತರರು ಹಾಜರಿದ್ದರು

   

ತುಮಕೂರು: ಸರ್ವಾಧಿಕಾರಿ ಕೈಗೆ ಅಧಿಕಾರ ಕೊಟ್ಟಿರುವುದರಿಂದ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಷಾದಿಸಿದರು.

ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ನಿರ್ಮಿಸಿರುವ ಬಿ.ಆರ್.ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದರು.

ADVERTISEMENT

ಸರ್ವಾಧಿಕಾರಿ ಆಡಳಿತದಲ್ಲಿ ಭಾವನಾತ್ಮಕ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಸಂವಿಧಾನಕ್ಕೆ ಬೇಡವಾದ ಸಂಗತಿಗಳು ಮುಂಚೂಣಿಯಲ್ಲಿ ನಿಲ್ಲುತ್ತಿವೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು, ಸಂವಿಧಾನ ವಿರೋಧಿಗಳು ಅದರ ಆಶಯ ಜಾರಿಮಾಡುವ ಜಾಗದಲ್ಲಿ ಕುಳಿತಿದ್ದಾರೆ. ಇಂತಹ ನಡೆ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತದೆ ಎಂದು ಎಚ್ಚರಿಸಿದರು.

ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವುದು ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳನ್ನು ದುರ್ಬಲಗೊಳಿಸುತ್ತದೆ. ಸಂವಿಧಾನದಲ್ಲಿ ಇಂತಹ ಸರ್ವಾಧಿಕಾರಕ್ಕೆ ಅವಕಾಶವಿಲ್ಲ ಎಂಬುದನ್ನು ಎಚ್ಚರಿಸುತ್ತಿದ್ದೇನೆ. ರಾಜಕೀಯ ಪಕ್ಷಗಳು, ಸರ್ಕಾರಗಳ ನಡೆ ಜಾತಿ, ಧರ್ಮವನ್ನು ಮೀರಿ ನಡೆದು ಕೊಳ್ಳುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ‘ಸಮಾಜದಲ್ಲಿ ಸಮಾನತೆ ಬರಬೇಕು. ಜಾತಿ ವ್ಯವಸ್ಥೆ ದೂರವಾಗಬೇಕು ಎಂದು ಅಂಬೇಡ್ಕರ್ ಸಾಕಷ್ಟು ಪ್ರಯತ್ನ ನಡೆಸಿದರು. ಸಂವಿಧಾನ ಹಿಂದೂ ವಿರೋಧಿಯಲ್ಲ, ಹಿಂದೂ ಸಮಾಜದ ಬದಲಾವಣೆಗೆ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿಕೊಂಡರು. ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿ ಮನುಸ್ಮೃತಿ ಸುಟ್ಟರು. ಆದರೂ ಬದಲಾವಣೆ ಕಾಣಲಿಲ್ಲ. ಸಮ ಸಮಾಜ ನಿರ್ಮಾಣ ಸಕಾರಗೊಳ್ಳದೆ ಕೊನೆಗೆ ಮತಾಂತರ ಮಾಡಿದರು’ ಎಂದು ಹೇಳಿದರು.

ವಿದ್ಯಾವಂತರಾದರೂ ಜಾತಿ ವ್ಯವಸ್ಥೆ ಹೋಗಿಲ್ಲ. ಸಮಾಜವನ್ನು ಅರ್ಥಮಾಡಿಕೊಳ್ಳದಿದ್ದರೆ ಹಿಂದೂ ಸಮಾಜ ಇದೇ ರೀತಿ ಉಳಿಯುತ್ತದೆ. ಸಂವಿಧಾನದ ಮೊದಲ ಪುಟದಲ್ಲೇ ಸಮಾನತೆ ಬಗ್ಗೆ ಹೇಳಲಾಗಿದೆ. ಇನ್ನೂ ಅದೇ ಜಾರಿಯಾಗಿಲ್ಲ. ಅದರ ಮುಂದಿನ ಪುಟಗಳಿಗೆ ನಾವು ಹೋಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ‘ಸಮಾಜದಲ್ಲಿ ಬದಲಾವಣೆ ತರಲು, ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಪ್ರಯತ್ನಿಸಿದರು. ಆದರೆ ಅದಕ್ಕೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಅವರ ಮನಸ್ಸು ಗೆದ್ದಿದ್ದರೆ ಮತಾಂತರ ಮಾಡುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪರಮೇಶ್ವರ್ ವಿಚಾರ ಪ್ರಸ್ತಾಪಿಸಿ, ‘ಇಷ್ಟು ದಿನಗಳಲ್ಲಿ ಇದೇ ಮೊದಲ ಬಾರಿಗೆ ಜೋರು ಧ್ವನಿ ಬಂದಿದೆ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ಜೋರು ಧ್ವನಿ ಇರಬೇಕು’ ಎಂದು ಸಲಹೆ ಮಾಡಿದರು.

ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ‘ಅಂಬೇಡ್ಕರ್ ವಿಚಾರ, ಸಂವಿಧಾನದ ಬಗ್ಗೆ ವಿಚಾರ ಸಂಕಿರಣಗಳನ್ನು ಮಾಡಿ ಶಾಸಕರು, ಜನಪ್ರತಿನಿಧಿಗಳಿಗೆ ಮನದಷ್ಟು ಮಾಡಿಕೊಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ’ ಎಂದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಡಾ.ಎಚ್.ಡಿ.ರಂಗನಾಥ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಎಸ್ಪಿ ಕೆ.ವಿ.ಅಶೋಕ್ ಇತರರು ಉಪಸ್ಥಿತರಿದ್ದರು.

ಛಾಯಾಚಿತ್ರ ಪ್ರದರ್ಶನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಚಿತ್ರಗಳನ್ನು ಸಚಿವರಾದ ಜಿ.ಪರಮೇಶ್ವರ ವಿ.ಸೋಮಣ್ಣ ಎಚ್‌.ಸಿ.ಮಹದೇವಪ್ಪ ಬಿ.ಎಸ್.ಸುರೇಶ್‌ ಕೆ.ಎನ್‌.ರಾಜಣ್ಣ ವೀಕ್ಷಿಸಿದರು

12 ಅಡಿ ಅಂಬೇಡ್ಕರ್ ಪ್ರತಿಮೆ

ಮಹಾನಗರ ಪಾಲಿಕೆ ಆವರಣದಲ್ಲಿ 12 ಅಡಿ ಎತ್ತರದ ಒಂದು ಟನ್ ತೂಕದ ಕಂಚಿನ ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿಮೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಸಚಿವ ಜಿ.ಪರಮೇಶ್ವರ ಅವರೇ ಭರಿಸಿದ್ದಾರೆ. ಈವರೆಗೆ ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ಇರಲಿಲ್ಲ ಎಂಬ ಕೊರಗು ನೀಗಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.