ADVERTISEMENT

ನ್ಯಾನೊ ತಂತ್ರಜ್ಞಾನದಿಂದ ಯೂರಿಯಾ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 2:30 IST
Last Updated 15 ಆಗಸ್ಟ್ 2021, 2:30 IST
ತುಮಕೂರಿನ ಎಸ್‌ಐಟಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಅಭಿನಂದಿಸಲಾಯಿತು. ಸಿದ್ಧಲಿಂಗ ಸ್ವಾಮೀಜಿ, ಶಾಸಕ ಜ್ಯೋತಿ ಗಣೇಶ್, ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಪ್ರಾಂಶುಪಾಲ ಎಸ್.ವಿ.ದಿನೇಶ್, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಉಪಸ್ಥಿತರಿದ್ದರು
ತುಮಕೂರಿನ ಎಸ್‌ಐಟಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಅಭಿನಂದಿಸಲಾಯಿತು. ಸಿದ್ಧಲಿಂಗ ಸ್ವಾಮೀಜಿ, ಶಾಸಕ ಜ್ಯೋತಿ ಗಣೇಶ್, ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಪ್ರಾಂಶುಪಾಲ ಎಸ್.ವಿ.ದಿನೇಶ್, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಉಪಸ್ಥಿತರಿದ್ದರು   

ತುಮಕೂರು: ನ್ಯಾನೊ ತಂತ್ರಜ್ಞಾನ ಬಳಸಿ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಉತ್ಪಾದನೆ ಮಾಡಲಾಗುವುದು ಎಂದು ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಇಫ್ಕೋ ಸಂಸ್ಥೆ ಹೊಸ ನ್ಯಾನೊ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಅದನ್ನು ಬಳಸಿಕೊಂಡು ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಉತ್ಪಾದಿಸಲು ಉದ್ದೇಶಿಸಲಾಗಿದೆ ಎಂದು
ಹೇಳಿದರು.

ನಂತರ ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ಕಾಯಕ ನಿಷ್ಠೆ, ಸಾಧಿಸುವ ಛಲ, ಸತತ ಪ್ರಯತ್ನವಿದ್ದರೆ ಸಾಧನೆಗೆ ಯಾರೂ ಅಡ್ಡಿಯಾಗುವುದಿಲ್ಲ. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಸನ್ಮಾನ ಸ್ವೀಕರಿಸುತ್ತಿರುವುದು ಹೆಮ್ಮೆ ತಂದಿದೆ’ ಎಂದು ಹೇಳಿದರು.

ADVERTISEMENT

‘ನಾನು ಕೇಂದ್ರ ಸಚಿವನಾಗಿರುವುದಕ್ಕೆ ಬಸವಣ್ಣ, ಲಿಂ.ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಪಾಲಿಸಿರುವುದೇ ಕಾರಣವಾಗಿದೆ. ಯಶಸ್ಸು ಸಿಕ್ಕ ಸಮಯದಲ್ಲಿ ಸಮಾಜ ಸನ್ಮಾನಿಸುತ್ತದೆ. ನಮ್ಮ ಊರಿನಲ್ಲಿ, ಓದಿದ ಸಂಸ್ಥೆಯಲ್ಲಿ ಸಿಗುವ ಸನ್ಮಾನ ಎಲ್ಲಕ್ಕಿಂತ ಮಹತ್ವ ಎನಿಸುತ್ತದೆ. ಈಗ ಸಚಿವನಾಗಿದ್ದು, ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಕಪ್ಪು ಚುಕ್ಕೆ ಬಾರದಂತೆ ಕೆಲಸ ನಿರ್ವಹಿಸುತ್ತೇನೆ. ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಿದ್ಧಲಿಂಗ ಸ್ವಾಮೀಜಿ, ‘ಭಗವಂತ ಖೂಬಾ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ. ಅವರು ಸಚಿವರಾದಾಗ ಅಭಿಮಾನ, ಪ್ರೀತಿ ಎಲ್ಲರಲ್ಲೂ ಮೂಡಿತು. ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಜ್ಯೋತಿಗಣೇಶ್, ‘ಎಸ್‌ಐಟಿ ವಿದ್ಯಾರ್ಥಿ ಖೂಬಾ ಅವರು ಕೇಂದ್ರ ಸಚಿವರಾಗಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ. ಇಲ್ಲಿನ ವಿದ್ಯಾರ್ಥಿಗಳು ರಾಜಕೀಯ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ’ ಎಂದು ಹೇಳಿದರು.

ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಪ್ರಾಂಶುಪಾಲ ಎಸ್.ವಿ.ದಿನೇಶ್ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.