ADVERTISEMENT

ತುಮಕೂರು: ಹೇಮಾವತಿ ನೀರು ಹರಿಸಲು ಸೊಗಡು ಶಿವಣ್ಣ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 5:02 IST
Last Updated 2 ಮಾರ್ಚ್ 2024, 5:02 IST
ಸೊಗಡು ಶಿವಣ್ಣ
ಸೊಗಡು ಶಿವಣ್ಣ   

ತುಮಕೂರು: ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಕೂಡಲೇ ಹೇಮಾವತಿ ನದಿಯಿಂದ ನೀರು ಹರಿಸಿ ಬುಗುಡನಹಳ್ಳಿ ಕೆರೆ ತುಂಬಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

ಗೊರೂರು ಜಲಾಶಯದಿಂದ ತುಮಕೂರಿಗೆ 2,815.11 ಎಂಸಿಎಫ್‌ಟಿ ನೀರು ಹಂಚಿಕೆಯಾಗಿದ್ದು, ಈವರೆಗೂ ಕೇವಲ 523.99 ಎಂಎಫ್‍ಟಿ ನೀರು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಬುಗುಡನಹಳ್ಳಿ ಕೆರೆಯ ನೀರಿನ ಮಟ್ಟ 140 ಎಂಸಿಎಫ್‌ಟಿಗೆ ಇಳಿದಿದೆ. ಈಗ ಲಭ್ಯವಿರುವ ನೀರು ಮುಂದಿನ ಒಂದು ತಿಂಗಳು ಮಾತ್ರ ಕುಡಿಯಲು ಸಿಗಲಿದೆ. ಮುಂದಿನ ಪರಿಸ್ಥಿತಿಯನ್ನು ಅರಿತು ನೀರು ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಹೇಮಾವತಿಯನ್ನೇ ಅವಲಂಬಿಸಿದ್ದಾರೆ. ಈ ಬಾರಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತೀವ್ರ ಬರ ಆವರಿಸಿದೆ. ನಗರ ಪ್ರದೇಶದಲ್ಲಿ ಈಗಾಗಲೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನಗರಕ್ಕೆ ಅಗತ್ಯ ಪ್ರಮಾಣದ ನೀರು ಬಿಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ADVERTISEMENT

ಹೇಮಾವತಿ ನಾಲೆಯು ದುಸ್ಥಿತಿಯಲ್ಲಿದ್ದು, ಇದನ್ನು ಸಂಪೂರ್ಣವಾಗಿ ದುರಸ್ತಿ ಪಡಿಸಬೇಕು. ನಾಲೆಯ ಅಕ್ಕಪಕ್ಕದ ರಸ್ತೆಗಳು ಕೂಡ ಹಾಳಾಗಿದ್ದು, ಮಳೆಗಾಲ ಬರುವ ಮುಂಚೆಯೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.