ಗುಬ್ಬಿ: ಮಹನೀಯರ ಜಯಂತಿಗಳನ್ನು ಕೇವಲ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಆಚರಿಸಬೇಕು ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಸಂವಿಧಾನವನ್ನು, ವಾಲ್ಮೀಕಿ ರಾಮಾಯಣವನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ರಚಿಸಿಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ. ಸಮುದಾಯದವರ ಬಹುದಿನಗಳ ಬೇಡಿಕೆಯಂತೆ ನಿವೇಶನ ಮಂಜೂರು ಮಾಡಲಾಗಿದೆ. ಶಿಕ್ಷಣದಿಂದ ಎಲ್ಲವೂ ಸಾಧ್ಯವಿರುವುದರಿಂದ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ, ಸಮುದಾಯದವರಿಗೆ ನೀಡಿರುವ ನಿವೇಶನವನ್ನು ಸಮುದಾಯದ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಬದ್ಧ. ವಾಲ್ಮೀಕಿಯ ಸಾಮಾಜಿಕ ಬದ್ಧತೆಗಳನ್ನು ರೂಢಿಸಿಕೊಂಡು ಸಮುದಾಯ ಒಗ್ಗಟ್ಟಿನಿಂದ ಮುನ್ನಡೆದಲ್ಲಿ ಮಹತ್ತರ ಸಾಧನೆಯಾಗುವುದು ಎಂದು ತಿಳಿಸಿದರು.
ಶಿಕ್ಷಕ ಮುರಳಿ ಮಾತನಾಡಿ, ಮಾನವೀಯ ಸಿದ್ಧಾಂತಗಳನ್ನು ಒಳಗೊಂಡಿರುವ ರಾಮಾಯಣದ ಮೌಲ್ಯಗಳು ಎಂದಿಗೂ ವಿಶ್ವದ ಎಲ್ಲ ಸಮಾಜಗಳಿಗೂ ಮಾದರಿ ಎಂದು ಹೇಳಿದರು.
ರಾಮಾಯಣದ ಸಾರ ಅರಿತು ಇಂದಿನ ಮತ್ತು ಮುಂದಿನ ಪೀಳಿಗೆಗೂ ರಾಮಾಯಣದ ಮಹತ್ವ ತಿಳಿಸಿಕೊಡಬೇಕಿದೆ ಎಂದು ಹೇಳಿದರು.
ಹಾಸ್ಯ ಕಲಾವಿದ ಗೋಪಿ ಮಾತನಾಡಿದರು.
ವಾಲ್ಮೀಕಿ ಮಹರ್ಷಿ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ಚೆನ್ನಬಸವೇಶ್ವರ ದೇವಾಲಯದಿಂದ ಮೆರವಣಿಗೆ ಮಾಡಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಾಧಕರನ್ನು ಸತ್ಕರಿಸಲಾಯಿತು.
ಹಶೀಲ್ದಾರ್ ಆರತಿ ಬಿ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಅಕ್ಷರ ದಾಸೋಹದ ಜಗದೀಶ್, ವಿವಿಧ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಯಿಷಾ ತಾಸಿನ್, ಪ.ಪಂ. ಸದಸ್ಯರು, ವಾಲ್ಮೀಕಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಡವಿ ಸ್ವಾಮಿ, ಉಪಾಧ್ಯಕ್ಷ ನರಸಿಂಹಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.