ADVERTISEMENT

ಕೊರಟಗೆರೆ: ವಾಲ್ಮೀಕಿ ಜಯಂತಿ- ಸಭೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 3:57 IST
Last Updated 6 ಅಕ್ಟೋಬರ್ 2021, 3:57 IST
ಕೊರಟಗೆರೆ ತಹಶೀಲ್ದಾರ್ ಕಚೇರಿ ಮುಂದೆ ವಾಲ್ಮೀಕಿ ಸಮುದಾಯದ ಪ್ರಮುಖರು ಪ್ರತಿಭಟನೆ ನಡೆಸಿದರು. ಮುಖಂಡರಾದ ಕೆ.ಆರ್.ಓಬಳರಾಜು, ವಿಜಯಕುಮಾರ್, ಪುಟ್ಟನರಸಯ್ಯ, ಲಕ್ಷ್ಮಿನಾರಾಯಣ, ನಟರಾಜು, ಕೆ.ವಿ.ಮಂಜುನಾಥ್, ರಮೇಶ್, ಚಿಕ್ಕರಂಗಯ್ಯ ಇತರರು ಭಾಗವಹಿಸಿದ್ದರು
ಕೊರಟಗೆರೆ ತಹಶೀಲ್ದಾರ್ ಕಚೇರಿ ಮುಂದೆ ವಾಲ್ಮೀಕಿ ಸಮುದಾಯದ ಪ್ರಮುಖರು ಪ್ರತಿಭಟನೆ ನಡೆಸಿದರು. ಮುಖಂಡರಾದ ಕೆ.ಆರ್.ಓಬಳರಾಜು, ವಿಜಯಕುಮಾರ್, ಪುಟ್ಟನರಸಯ್ಯ, ಲಕ್ಷ್ಮಿನಾರಾಯಣ, ನಟರಾಜು, ಕೆ.ವಿ.ಮಂಜುನಾಥ್, ರಮೇಶ್, ಚಿಕ್ಕರಂಗಯ್ಯ ಇತರರು ಭಾಗವಹಿಸಿದ್ದರು   

ಕೊರಟಗೆರೆ: ‘ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಮೀಮ್ ಉನ್ನೀಸಾ ಅವರು ಪರಿಶಿಷ್ಟ ಪಂಗಡಗಳ ಜನಾಂಗಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿರ್ಲಕ್ಷ್ಯ ತಾಳಿರುವುದನ್ನು ಖಂಡಿಸಿ ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದ್ದೇವೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಸಮುದಾಯದ ಮುಖಂಡ ಕೆ.ಆರ್.ಓಬಳರಾಜು ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಬಹಿಷ್ಕರಿಸಿದ ನಂತರ ಮಾತನಾಡಿ, ಸರ್ಕಾರದಿಂದ ಮಂಜೂರಾಗಿರುವ ವಾಲ್ಮೀಕಿ ಭವನವನ್ನು ಹಲವು ವರ್ಷಗಳಿಂದ ನಿರ್ಮಿಸಿಲ್ಲ ಎಂದು ಆರೋಪಿಸಿದರು.

ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ₹1.25 ಕೋಟಿ ಮಂಜೂರಾಗಿದ್ದು, ಭೂಮಿ ಗುರುತಿಸಿ ಹಲವು ವರ್ಷಗಳಾಗಿವೆ. ಭವನ ನಿರ್ಮಿಸುವಂತೆ ಶಾಸಕರು ಹಲವು ಸಲ ತಾಕೀತು ಮಾಡಿದ್ದಾರೆ. ಆದರೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕ್ರಮ ವಹಿಸಿಲ್ಲ. ಕಳೆದ ವರ್ಷ ಸಹ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ಇದೇ ಕಾರಣದಿಂದ ಬಹಿಷ್ಕರಿಸಲಾಗಿತ್ತು. ಆಗಲೂ ಸಹ ಶೀಘ್ರ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈವರೆಗೂ ಪ್ರಗತಿಯಾಗಿಲ್ಲ ಎಂದು ದೂರಿದರು.

ADVERTISEMENT

ಸೆಪ್ಟೆಂಬರ್‌ನಲ್ಲಿ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲೂ ಭವನ ನಿರ್ಮಾಣದ ಭರವಸೆ ನೀಡಿದ್ದರು. ಅಧಿಕಾರಿಗಳ ವರ್ತನೆ ನೋಡಿದರೆ ಸಮಾಜದ ಬಗ್ಗೆ ಅವರಿಗಿರುವ ನಿರ್ಲಕ್ಷ್ಯ ಭಾವನೆ ತೋರಿಸುತ್ತದೆ. ಇದು ಹೀಗೆ ಮುಂದುವರಿದರೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದರು.

ಮತ್ತೊಬ್ಬ ಮುಖಂಡ ವಿಜಯಕುಮಾರ್, ‘ತಾಲ್ಲೂಕಿನಲ್ಲಿ ತಲಾ ₹50 ಲಕ್ಷ ವೆಚ್ಚದಲ್ಲಿ 4 ವಾಲ್ಮೀಕಿ ಭವನ ಹಾಗೂ ಗ್ರಾ.ಪಂ ಮಟ್ಟದಲ್ಲಿ 9 ಭವನಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿ ಹಲವು ವರ್ಷಗಳಾಗಿವೆ. ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಾಜ ಕಲ್ಯಾಣಾಧಿಕಾರಿ ಕ್ರಮ ಕೈಗೊಂಡಿಲ್ಲ’ ಎಂದು ತಿಳಿಸಿದರು.

ಜಮಾಜದ ಬೇಡಿಕೆ ಈಡೇರಿಸುವವರೆಗೂ ಸರ್ಕಾರ ನಡೆಸುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ನಮ್ಮ ಮಟ್ಟದಲ್ಲೇ ಜಯಂತಿ ಆಚರಿಸಿಕೊಳ್ಳಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಪುಟ್ಟನರಸಯ್ಯ, ಲಕ್ಷ್ಮಿನಾರಾಯಣ, ನಟರಾಜು, ಕೆ.ವಿ.ಮಂಜುನಾಥ್, ಮುಖಂಡರಾದ ರಮೇಶ್, ಚಿಕ್ಕರಂಗಯ್ಯ ಕಾರ್‌ಮಹೇಶ್, ಕೆ.ಎಲ್.ಲಕ್ಷ್ಮೀಶ, ಗೋಪಿನಾಥ್, ನಂಜಪ್ಪ, ಎಚ್.ರಮೇಶ್, ನಾಗರಾಜು, ಕೇಶವಮೂರ್ತಿ, ಮಂಜು
ನಾಥ್, ಕೆಂಪರಾಜು, ರಂಗನಾಥ್, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.