ADVERTISEMENT

ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಶಾಸಕ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:46 IST
Last Updated 9 ಜನವರಿ 2026, 6:46 IST
ಡಾ.ಸಿ.ಎನ್.ಅಶ್ವತ್ಥನಾರಾಯಣ
ಡಾ.ಸಿ.ಎನ್.ಅಶ್ವತ್ಥನಾರಾಯಣ   

ತುಮಕೂರು: 'ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌–ಗ್ರಾಮೀಣ (ವಿಬಿ–ಜಿ ರಾಮ್‌ ಜಿ) ಯೋಜನೆ ಬಗ್ಗೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಲ್ಲಿ ಗುರುವಾರ ಆರೋಪಿಸಿದರು.

ಮಹಾತ್ಮ ಗಾಂಧೀಜಿ ಸ್ವರಾಜ್ಯದ ಕನಸು ಕಂಡಿದ್ದರು. ಪ್ರಸ್ತುತ ಸಂದರ್ಭದಲ್ಲಿ ಗಾಂಧಿ ಹೆಸರಿನ ಬದಲಿಗೆ ರಾಮ್ ಜಿ ಹೆಸರು ಸೇರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗಾಂಧೀಜಿ ಹೆಸರು ಬದಲಾವಣೆಯನ್ನು ಸಮರ್ಥಿಸಿಕೊಂಡರು.

ದೇಶದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಆರಂಭವಾಗಿ ಎರಡು ದಶಕ ಕಳೆದಿದೆ. ಕಾಲಕ್ಕೆ ತಕ್ಕಂತೆ ಯೋಜನೆಯಲ್ಲಿ ಬದಲಾವಣೆ ಮಾಡುವುದು ಅಗತ್ಯವಿದ್ದು, ಆ ಕಾರಣಕ್ಕೆ ಬದಲಾವಣೆ ಮಾಡಲಾಗಿದೆ. ಈವರೆಗೆ ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡುತ್ತಿತ್ತು. ಇನ್ನು ಮುಂದೆ ಕೇಂದ್ರ ಶೇ 60ರಷ್ಟು ಹಣ ನೀಡಿದರೆ, ರಾಜ್ಯ ಸರ್ಕಾರ ಶೇ 40ರಷ್ಟು ಹಣ ಒದಗಿಸಿ ಯೋಜನೆ ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರದ ಹೊಣೆಗಾರಿಕೆ ಹೆಚ್ಚಿಸುವುದು, ಮತ್ತಷ್ಟು ಪಾರದರ್ಶಕ ಹಾಗೂ ಶಾಶ್ವತವಾಗಿ ಗುಣಮಟ್ಟದ ಆಸ್ತಿ ನಿರ್ಮಾಣದ ಗುರಿ ಹೊಂದಿದೆ ಎಂದು ಹೇಳಿದರು.

ADVERTISEMENT

ಉದ್ಯೋಗ ಖಾತ್ರಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಯೋಜನೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಡಿಜಿಟಲ್ ವ್ಯವಸ್ಥೆಗೆ ರೂಪಾಂತರಿಸಲಾಗುತ್ತಿದೆ. ಇದರಿಂದಾಗಿ ಯೋಜನೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಾಣಬಹುದು. ಆದರೆ ರಾಜ್ಯ ಸರ್ಕಾರ ಅನಗತ್ಯವಾಗಿ ಆರೋಪ ಮಾಡುತ್ತಿದೆ ಎಂದು ತಿಳಿಸಿದರು.

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ವೈ.ಎಚ್.ಹುಚ್ಚಯ್ಯ, ಗಂಗರಾಜು, ಸಂದೀಪ್‌ಗೌಡ, ರವೀಶಯ್ಯ, ಧನುಷ್, ಟಿ.ಆರ್.ಸದಾಶಿವಯ್ಯ, ರಾಜಶೇಖರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.