ADVERTISEMENT

ಚಿಕ್ಕನಾಯಕನಹಳ್ಳಿ: ಪಾಳುಬಿದ್ದ ‘ವೆಂಕಣ್ಣನ ಕಟ್ಟೆ ಪಾರ್ಕ್’

ಉದ್ಯಾನ ನಿರ್ವಹಣೆಗೆ ನಿರ್ಲಕ್ಷ್ಯ: ಮೂಲಸೌಕರ್ಯ ಅಭಿವೃದ್ಧಿಗಿಲ್ಲ ಒತ್ತು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:37 IST
Last Updated 16 ಅಕ್ಟೋಬರ್ 2025, 6:37 IST
ಚಿಕ್ಕನಾಯಕನಹಳ್ಳಿಯ ‘ವೆಂಕಣ್ಣನ ಕಟ್ಟೆ ಪಾರ್ಕ್’
ಚಿಕ್ಕನಾಯಕನಹಳ್ಳಿಯ ‘ವೆಂಕಣ್ಣನ ಕಟ್ಟೆ ಪಾರ್ಕ್’   

ಚಿಕ್ಕನಾಯಕನಹಳ್ಳಿ: ಪಟ್ಟಣದ ಪ್ರಮುಖ ಮತ್ತು ದೊಡ್ಡ ಉದ್ಯಾನಗಳಲ್ಲಿ ಒಂದಾದ ‘ವೆಂಕಣ್ಣನ ಕಟ್ಟೆ ಪಾರ್ಕ್’ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ.

ಪಟ್ಟಣದ ಪೂರ್ವ ಭಾಗದಲ್ಲಿ ನೆಲೆಗೊಂಡಿರುವ ಈ ಸುಂದರ ಪಾರ್ಕ್, ಪುರಸಭೆಯ ನಿರ್ಲಕ್ಷ್ಯದಿಂದಾಗಿ ಸ್ವಚ್ಛತೆ, ಮೂಲ ಸೌಕರ್ಯ ಮತ್ತು ಅಭಿವೃದ್ಧಿಯಿಲ್ಲದೆ ಬಸವಳಿದಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ರಸ್ತೆಗೆ ಹೊಂದಿಕೊಂಡಿರುವ ಉದ್ಯಾನ ಪಟ್ಟಣದ ನಿವಾಸಿಗಳಿಗೆ, ಮಕ್ಕಳು, ಹಿರಿಯ ನಾಗರಿಕರು ಮತ್ತು ವಾಕಿಂಗ್ ಮಾಡುವವರಿಗೆ ಪ್ರಮುಖ ವಿರಾಮ ಸ್ಥಳವಾಗಿತ್ತು. ದೊಡ್ಡ ಪ್ರದೇಶವನ್ನು ಹೊಂದಿರುವ ಈ ಪಾರ್ಕ್‌ಗೆ ಸಸಿಗಳನ್ನು ನೆಟ್ಉ ನಿರ್ವಹಣೆ ಮಾಡಿದ್ದರೆ ಹಸಿರಿನಿಂದ ಕಂಗೊಳಿಸುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ಪಾರ್ಕ್‌ನಾದ್ಯಂತ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಒಣಗಿದ ಎಲೆಗಳು ತುಂಬಿದ್ದು, ಸ್ವಚ್ಛತೆ ನಿರ್ವಹಣೆ ಇಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಮಕ್ಕಳು ಆಟವಾಡಲು ಅಳವಡಿಸಿದ್ದ ಸಲಕರಣೆಗಳು (ಸ್ಲೈಡ್‌ಗಳು, ಊಯ್ಯಾಲೆಗಳು) ಮುರಿದು ಬಿದ್ದಿದ್ದು, ತುಕ್ಕು ಹಿಡಿದಿದೆ. ವಾಕಿಂಗ್ ಟ್ರ್ಯಾಕ್‌ಗಳು ಹದಗೆಟ್ಟಿದ್ದು, ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು ಅಳವಡಿಸಿದ್ದ ಆಸನಗಳು ಬಳಕೆಗೆ ಯೋಗ್ಯವಾಗಿಲ್ಲ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲವಾಗಿದೆ.

ಪಾರ್ಕ್‌ನಲ್ಲಿ ಸಾರ್ವಜನಿಕರು ಕೆಲವು ಸಸಿಗಳನ್ನು ನೆಟ್ಟು ಪೋಷಣೆ ಮಾಡಿದ್ದೂ ಹೊರೆತುಪಡಿಸಿ ಪುರಸಭೆ ಈ ಬಗ್ಗೆ ಯಾವುದೇ ಪ್ರಯತ್ನ ಮಾಡಿಲ್ಲ. ಪಾರ್ಕ್ ಸುತ್ತ ಕಳೆಗಳಿಂದ ಆವೃತವಾಗಿದೆ. ಸಂಜೆಯ ಸಮಯದಲ್ಲಿ ಪಾರ್ಕ್‌ನಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲಿನಲ್ಲಿ ಜನರು ವಾಕಿಂಗ್ ಮಾಡಲು ಭಯ ಪಡುವಂತಾಗಿದೆ.  ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗುವ ಭೀತಿ ಇದೆ. ಪಾರ್ಕ್‌ನ ಈ ಸ್ಥಿತಿಯ ಬಗ್ಗೆ ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರು ಯಾವುದೇ ನಿಯಮಿತ ಮೇಲ್ವಿಚಾರಣೆ ನಡೆಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿಯ ‘ವೆಂಕಣ್ಣನ ಕಟ್ಟೆ ಪಾರ್ಕ್’
ಚಿಕ್ಕನಾಯಕನಹಳ್ಳಿಯ ‘ವೆಂಕಣ್ಣನ ಕಟ್ಟೆ ಪಾರ್ಕ್’ನಲ್ಲಿ ನಾಮಫಲಕವು ಇಲ್ಲದ ಸ್ಥಿತಿ

ಸಾರ್ವಜನಿಕರ ಬೇಡಿಕೆಗಳು...

ಪಾರ್ಕ್‌ ಸ್ವಚ್ಛತೆ ನಿರ್ವಹಣೆಗೆ ಕೂಡಲೇ ಶಾಶ್ವತ ವ್ಯವಸ್ಥೆ ರೂಪಿಸಬೇಕು. ಮಕ್ಕಳ ಆಟಿಕೆ ಕುಡಿಯುವ ನೀರು ಆಸನ ವಾಕಿಂಗ್ ಟ್ರ್ಯಾಕ್ ಸೇರಿದಂತೆ ಮೂಲ ಸೌಕರ್ಯ. ಹೊಸ ಗಿಡಗಳನ್ನು ನೆಟ್ಟು ನೀರುಣಿಸಬೇಕು. ರಾತ್ರಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಪಾರ್ಕ್ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ.