ADVERTISEMENT

ತುಮಕೂರು: ಮಾರುಕಟ್ಟೆಯಲ್ಲಿ ವಿದ್ಯೆ ಬಿಕರಿ– ಕರೀಗೌಡ ಬೀಚನಹಳ್ಳಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:21 IST
Last Updated 30 ಡಿಸೆಂಬರ್ 2025, 5:21 IST
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಜತೆ ನಡೆದ ಸಂವಾದದಲ್ಲಿ ಗಂಗಾಧರ ಬೀಚನಹಳ್ಳಿ, ಪ್ರೊ.ನಾಗಭೂಷಣ ಬಗ್ಗನಡು, ಎಸ್.ಚಂದ್ರಶೇಖರ್, ಕರೀಗೌಡ ಬೀಚನಹಳ್ಳಿ, ಎಸ್.ಆರ್.ವಿಜಯಶಂಕರ, ಎಚ್.ದಂಡಪ್ಪ‌, ಬಿ.ಆರ್.ರೇಣುಕಾಪ್ರಸಾದ್, ಶಿವಣ್ಣ ಬೆಳವಾಡಿ ಉಪಸ್ಥಿತರಿದ್ದರು
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಜತೆ ನಡೆದ ಸಂವಾದದಲ್ಲಿ ಗಂಗಾಧರ ಬೀಚನಹಳ್ಳಿ, ಪ್ರೊ.ನಾಗಭೂಷಣ ಬಗ್ಗನಡು, ಎಸ್.ಚಂದ್ರಶೇಖರ್, ಕರೀಗೌಡ ಬೀಚನಹಳ್ಳಿ, ಎಸ್.ಆರ್.ವಿಜಯಶಂಕರ, ಎಚ್.ದಂಡಪ್ಪ‌, ಬಿ.ಆರ್.ರೇಣುಕಾಪ್ರಸಾದ್, ಶಿವಣ್ಣ ಬೆಳವಾಡಿ ಉಪಸ್ಥಿತರಿದ್ದರು   

ತುಮಕೂರು: ಯುಜಿಸಿ ನಿಯಮ ಮತ್ತಷ್ಟು ಸಡಿಲವಾಗುತ್ತಿದ್ದು, ವಿದೇಶಿ ವಿಶ್ವವಿದ್ಯಾಲಯಗಳು ಮುಕ್ತವಾಗಿ ದೇಶ ಪ್ರವೇಶಿಸುತ್ತಿವೆ. ಹಣ ಇದ್ದವರು ಮಾತ್ರ ಶಿಕ್ಷಣ ಪಡೆಯುವಂತಾಗಿದೆ. ಮಾರುಕಟ್ಟೆಯಲ್ಲಿ ಬಟ್ಟೆಗಳಂತೆ ವಿದ್ಯೆ ಬಿಕರಿಯಾಗುತ್ತಿದೆ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಕರೀಗೌಡ ಬೀಚನಹಳ್ಳಿ ಆತಂಕ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನಾಧ್ಯಕ್ಷರ ಜತೆ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಂದು ಶಿಕ್ಷಣ ನೀತಿ ಕನಿಷ್ಠ ಎರಡು ದಶಕಗಳ ಕಾಲ ಅಸ್ತಿತ್ವದಲ್ಲಿ ಇರಬೇಕು. ಸರ್ಕಾರ ಬದಲಾದಂತೆ ಶಿಕ್ಷಣ‌ ನೀತಿ ಬದಲಾಗುತ್ತಿದೆ. ಪಠ್ಯಕ್ಕಾಗಿ ಜಗಳ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರ ಅನೇಕ ನ್ಯೂನತೆಗಳನ್ನು ಎದುರಿಸುತ್ತಿದೆ. ಈ ಕುರಿತು ಸರ್ಕಾರ ಇಚ್ಛಾಶಕ್ತಿ ತೋರಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಕೆಪಿಎಸ್‌ ಶಾಲೆಗಳ ಮೂಲಕ ಇಂಗ್ಲಿಷ್‌ ಮಾಧ್ಯಮ ಹಿಂಬಾಗಿಲಿನಿಂದ ಪ್ರವೇಶಿಸುತ್ತಿದೆ. ಇದನ್ನು ತಡೆಯಲು ಸಾಧ್ಯವೇ?’ ಎಂಬ ಲೇಖಕಿ ಬಾ.ಹ.ರಮಾಕುಮಾರಿ ಪ್ರಶ್ನೆಗೆ ಉತ್ತರಿಸಿದ ಸಮ್ಮೇಳನಾಧ್ಯಕ್ಷರು, ‘ಶಾಲೆಯ ಮುಂಬಾಗಿಲಿನ ಮೂಲಕವೇ ಇಂಗ್ಲಿಷ್ ಪ್ರವೇಶಿಸುತ್ತಿದೆ. ಸರ್ಕಾರ ಕಣ್ಣು ತೆರೆದು ನೋಡಬೇಕು’ ಎಂದು ಕುಟುಕಿದರು.

ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು. ಇಂಗ್ಲಿಷ್‌ ಭಾಷೆಯಾಗಿ ಕಲಿಸಿ, ಓದಲು–ಬರೆಯಲು ಹೇಳಿ ಕೊಡಬೇಕು. ಆದರೆ ಅದು ಮಾಧ್ಯಮ ಆಗಬಾರದು ಎಂದರು.

ಸೃಜನಶೀಲ ಲೇಖಕರು, ರೈತರು, ಕಾರ್ಮಿಕರು, ಹಳ್ಳಿಗಾಡಿನ ಜನರ ಮಧ್ಯೆ ಕನ್ನಡ ಉಳಿದಿದೆ. ಅವರು ಭಾಷೆ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಮರ್ಶಕ ಎಸ್.ಆರ್.ವಿಜಯಶಂಕರ ಅವರು ಕರೀಗೌಡ ಬೀಚನಹಳ್ಳಿ ಅವರ ಕೃತಿಗಳನ್ನು ಪರಿಚಯಿಸಿದರು. ಕೇಂದ್ರೀಯ ವಿ.ವಿ ನಿವೃತ್ತ ಸಹ ಕುಲಪತಿ ಎಸ್.ಚಂದ್ರಶೇಖರ್, ಸಾಹಿತಿ ಎಚ್.ದಂಡಪ್ಪ‌, ಲೇಖಕರಾದ ಸುಶೀಲಾ ಸದಾಶಿವಯ್ಯ, ಜಿ.ವಿ.ಗೋಪಾಲ್, ಬಿ.ಸಿ.ಶೈಲಾ ನಾಗರಾಜು, ಗಂಗಾಧರ ಬೀಚನಹಳ್ಳಿ, ಪ್ರೊ.ನಾಗಭೂಷಣ ಬಗ್ಗನಡು, ಶಿವಣ್ಣ ಬೆಳವಾಡಿ, ಬಿ.ಆರ್.ರೇಣುಕಾಪ್ರಸಾದ್, ಗೋವಿಂದರಾಜ್‌ ಎಂ.ಕಲ್ಲೂರು, ಟಿ.ಆರ್.ಲೀಲಾವತಿ ಇತರರು ಹಾಜರಿದ್ದರು.

ಸಂಚಿಕೆಯಲ್ಲಿ ಸಮ್ಮೇಳನವಿರಲಿ

ಮುಂದಿನ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಈ ವರ್ಷದ ಸಮ್ಮೇಳನದಲ್ಲಿ ಚರ್ಚೆಯಾದ ವಿಷಯಗಳ ಕುರಿತು ದಾಖಲಿಸಬೇಕು. ಪ್ರಬಂಧ ಕವಿಗೋಷ್ಠಿ ಕವಿತೆ ಸಂವಾದ ಎಲ್ಲವನ್ನು ಸಂಚಿಕೆಯಲ್ಲಿ ಸೇರಿಸಿದರೆ ಅರ್ಥಪೂರ್ಣವಾಗುತ್ತದೆ. ಇದುವರೆಗೆ ಇಂತಹ ಕೆಲಸ ಮಾಡಿಲ್ಲ. ಬಾ.ಹ.ರಮಾಕುಮಾರಿ ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.