
ಕೊರಟಗೆರೆ: ರಾಜ್ಯದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ನಮ್ಮೂರ ಶಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ತಾಲ್ಲೂಕಿನ ಹರಿಹರಪ್ಪನಪಾಳ್ಯ ಹಾಗೂ ಹುಲುಗೋನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
‘ನಮ್ಮ ಮಕ್ಕಳನ್ನು ದೂರದ ಊರಿನ ಯಾವುದೋ ಶಾಲೆಗೆ ಏಕೆ ಕಳಿಸಬೇಕು. ಇಷ್ಟು ವರ್ಷ ನಮ್ಮೂರ ಶಾಲೆ ನೂರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟಿದೆ. ಈಗ ಕೆಪಿಎಸ್ ಮ್ಯಾಗ್ನಟ್ ಹೆಸರಿನಲ್ಲಿ ಶಾಲೆ ಮುಚ್ಚಲಾಗುತ್ತಿದೆ. ಈಗಿರುವ ನಮ್ಮ ಶಾಲೆಗೆ ಅಗತ್ಯ ಸೌಲಭ್ಯ ಒದಗಿಸುವುದರೊಂದಿಗೆ ಹೈಟೆಕ್ ಮಾದರಿ ಶಾಲೆ ಮಾಡಿ, ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ವಹಿಸಿದರೆ ಗ್ರಾಮೀಣ ಭಾಗದ ರೈತರು, ಬಡವರು, ಕೂಲಿ ಕಾರ್ಮಿಕ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ’ ಎಂದು ಹರಿಹರಪ್ಪನಪಾಳ್ಯದ ಮಂಜುನಾಥ ಆಗ್ರಹಿಸಿದರು.
ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಗ್ರಾಮೀಣ ಭಾಗದ ಸಣ್ಣ ಸಣ್ಣ ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಶೈಕ್ಷಣಿಕ ಗುಣಮಟ್ಟವನ್ನು ಕುಗ್ಗಿಸುವುದನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಬಡ ಮಕ್ಕಳಿಗೆ ದೈಹಿಕ ಶ್ರಮದ ಪಾಠವನ್ನು ಕಡ್ಡಾಯಗೊಳಿಸುವ ಮೂಲಕ ಪ್ರಸ್ತುತ ನೀತಿಯು ಶ್ರೀಮಂತರು ಮತ್ತು ಬಡವರ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸುವ ಅಪಾಯ ಇದೆ ಎಂದು ಹುಲುಗೋನಹಳ್ಳಿ ಆನಂದ್ ಆತಂಕ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ನಮ್ಮೂರಿನ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಇದಕ್ಕಾಗಿ ಗ್ರಾಮಸ್ಥರು ಒಗಟ್ಟಿನಿಂದ ಎಂತಹ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆ ಉಳಿಸಲು ಪೋಷಕರ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ಎಐಎಸ್ಒ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.